ಶುಕ್ರವಾರ, ಜುಲೈ 1, 2022
22 °C

ಸಫಾಯಿ ಕರ್ಮಚಾರಿ ನಿಗಮಕ್ಕೆ ಹೈಕೋರ್ಟ್‌ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ’ಮಲ ಹೊರುವ ಪದ್ಧತಿ ಮನುಕುಲದ ಮೌಲ್ಯಕ್ಕೆ ಅಪಚಾರ ಎಸಗಿದಂತೆ‘ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ‘ಶೌಚಗುಂಡಿ ಸ್ವಚ್ಛಗೊಳಿಸುವ ಉದ್ಯೋಗ ನಿಷೇಧ ಮತ್ತು ಪುನವರ್ಸತಿ ಕಾಯ್ದೆಯ ನಿಯಮಗಳನ್ನು ರಾಜ್ಯದಾದ್ಯಂತ ಸಮರೋಪಾದಿಯಲ್ಲಿ ಜಾರಿಗೊಳಿಸಬೇಕು‘ ಎಂದು ಖಡಕ್‌ ಆದೇಶ ನೀಡಿದೆ.

’ಸಹಾಯ ಧನ ಒದಗಿಸಲು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಿಸಬೇಕು‘ ಎಂದು ಕೋರಿ ಆಂಟೋನಿ ಸೇರಿದಂತೆ ಕೋಲಾರ ಜಿಲ್ಲೆಯ 44 ಸಫಾಯಿ ಕರ್ಮಚಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

’ಅರ್ಜಿದಾರರು 2018ರಲ್ಲಿಯೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ನೀವು ಅವರ ಅರ್ಜಿಗಳನ್ನು ಪರಿಗಣಿಸಿ ಸಹಾಯ ಧನ ಬಿಡುಗಡೆ ಮಾಡಿಲ್ಲ. ಹೈಕೋರ್ಟ್ ಸೂಚನೆ ನೀಡಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ‘ ಎಂದು ನ್ಯಾಯಪೀಠ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವಿರುದ್ಧ ಕಿಡಿ ಕಾರಿದೆ.

’ಈ ಅನಿಷ್ಠ ‍ಪದ್ಧತಿಯನ್ನು ಕೊನೆಗೊಳಿಸಲು ಇಷ್ಟು ವರ್ಷಗಳಾದರೂ ನೀವು ಏನೂ ಮಾಡಿಲ್ಲ. ಅರ್ಜಿದಾರರಿಗೆ ಸಹಾಯ ಧನ ಕಲ್ಪಿಸುವ ಸಂಬಂಧ ಎರಡು ವಾರಗಳಲ್ಲಿ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ನ್ಯಾಯಾಂಗ ನಿಂದನೆ ದಾಖಲಿಸಿಕೊಂಡು ಸಫಾಯಿ ಕರ್ಮಚಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಜೈಲಿಗೆ ಕಳುಹಿಸಲಾಗುವುದು’ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು