'ನಿಮ್ಮನ್ನು ಬಗ್ಗಿಸುವುದು ನಮಗೆ ಗೊತ್ತು': ಅಧಿಕಾರಿಗಳಿಗೆ ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು: ‘ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಲಘುವಾಗಿ ಪರಿಗಣಿಸುತ್ತಿರುವುದು ತೀರಾ ದುರದೃಷ್ಟಕರ’ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ನ್ಯಾಯಾಂಗದ ಆದೇಶ ಲೆಕ್ಕಿಸದೆ ವಿಚಾರಣೆಗೆ ಗೈರು ಹಾಜರಾಗಿ ಉದ್ಧಟತನ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಠಿಣ ಎಚ್ಚರಿಕೆ ನೀಡಿದೆ.
ನಗರ ಮತ್ತು ಗ್ರಾಮೀಣ ಭಾಗದ ವಸತಿ ರಹಿತರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ, ‘ಹೌಸಿಂಗ್ ಫಾರ್ ಆಲ್’ ಯೋಜನೆ ಅಡಿ ವಸತಿ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿ ವಕೀಲ ಮೊಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಾರ್ಜಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶವಿದ್ದರೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡ ನ್ಯಾಯಪೀಠ, ಸರ್ಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.
’ಇವರೆಲ್ಲಾ ತಮ್ಮನ್ನು ತಾವು ಏನೆಂದುಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗಲು ಕೋರ್ಟ್ ಆದೇಶವಿದ್ದಾಗ ಸಂಪುಟ ಸಭೆಯೇ ಇದ್ದರೂ ಬಿಟ್ಟು ಬರಬೇಕು. ಯಾವುದೇ ಸಬೂಬು ಹೇಳಿ ತಪ್ಪಿಸಿಕೊಳ್ಳುವ ವರ್ತನೆಯನ್ನು ಸಹಿಸಲು ಆಗದು. ರಾಜ್ಯದ ಸರ್ಕಾರಿ ಅಧಿಕಾರಿಗಳ ಇಂತಹ ನಿರ್ಲಕ್ಷ್ಯ ವರ್ತನೆಯನ್ನು ನಾನು ಬೇರೆಲ್ಲೂ ಕಂಡಿಲ್ಲ’ ಎಂದು ಅವಸ್ಥಿ ಕಿಡಿಕಾರಿದರು.
‘ಕೋರ್ಟ್ ಆದೇಶ ಅಧಿಕಾರಿಗಳಿಗೆ ಅರ್ಥವಾಗಿಲ್ಲ ಎಂದರೆ ಅರ್ಥ ಮಾಡಿಸುವುದು ಹೇಗೆಂದು ನಮಗೆ ಗೊತ್ತಿದೆ. ಹಾಗೆಯೇ, ಅಧಿಕಾರಿಗಳು ವಿಚಾರಣೆಗೆ ಹಾಜರಾಗದಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಬೇಕಾಗುತ್ತದೆ’ ಎಂದೂ ಕಟು ಶಬ್ದಗಳಲ್ಲಿ ಎಚ್ಚರಿಸಿದರು.
‘ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನಿರ್ದೇಶನ ನೀಡಿದ್ದಾಗ ಅಧಿಕಾರಿಗಳು ತಪ್ಪದೇ ಹಾಜರಾಗುವಂತೆ ಸೂಚಿಸಿ ಸುತ್ತೋಲೆ ಹೊರಡಿಸಲು ಸರ್ಕಾರ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಿ’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.