ಬುಧವಾರ, ಜನವರಿ 19, 2022
23 °C

ಭಾರತೀಯ ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವಕೀಲರ ಪರಿಷತ್‌ನ (ಬಿಸಿಐ) ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಡಿಸೆಂಬರ್ 4ರಂದು (ಶುಕ್ರವಾರ) ನಡೆಯಬೇಕಿದ್ದ ಚುನಾವಣೆಗೆ ಹೈಕೋರ್ಟ್ ತಡೆ ನೀಡಿದೆ.

ತಡೆ ಕೋರಿ ಬಿಸಿಐ ಸದಸ್ಯರೂ ಆದ ಹೈಕೋರ್ಟ್‌ನ ಹಿರಿಯ ವಕೀಲ ವೈ.ಆರ್.ಸದಾಶಿವ ರೆಡ್ಡಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಮಧ್ಯಂತರ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್‌.ಪಾಟೀಲ ವಾದ ಮಂಡಿಸಿ, ‘ಬಿಸಿಐನ ಹಾಲಿ ಪದಾಧಿಕಾರಿಗಳ ಅಧಿಕಾರದ ಅವಧಿ 2022ರ ಏಪ್ರಿಲ್ 16ರವರೆಗೂ ಇದೆ. ಹಾಗಿರುವಾಗ, ಅವಧಿ ಮುಗಿಯುವ 4 ತಿಂಗಳು ಮುಂಚಿತವಾಗಿಯೇ ತರಾತುರಿಯಲ್ಲಿ ಚುನಾವಣೆ ನಡೆಸುವ ಅಗತ್ಯವಿಲ್ಲ. ಅದರಲ್ಲೂ ಸದಸ್ಯರಿಗೆ ಯಾವುದೇ ಸೂಚನೆ ನೀಡದೆ ಚುನಾವಣಾ ಸಭೆ ನಡೆಸಲಾಗಿದೆ. ಆದ್ದರಿಂದ, ಚುನಾವಣೆಗೆ ತಡೆ ನೀಡಬೇಕು’ ಎಂದು ಕೋರಿದರು.

ಈ ಕೋರಿಕೆಯನ್ನು ನ್ಯಾಯಪೀಠ ಪುರಸ್ಕರಿಸಿದೆ. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಹುದ್ದೆಗಳಿಗೆ ಡಿಸೆಂಬರ್ 4ರಂದು ಚುನಾವಣೆ ನಡೆಸಲು ಭಾರತೀಯ ವಕೀಲರ ಪರಿಷತ್ತು ನವೆಂಬರ್ 19ರಂದು ಹೈದರಾಬಾದ್‌ನಲ್ಲಿನಿರ್ಣಯ ಕೈಗೊಂಡಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು