ಟ್ವಿಟರ್ ಎಂ,ಡಿಗೆ ನೋಟಿಸ್: ಹೈಕೋರ್ಟ್ ಅಸಮಾಧಾನ

ಬೆಂಗಳೂರು: ‘ವೃದ್ಧನ ಮೇಲಿನ ಹಲ್ಲೆ ಪ್ರಕರಣ ವಿಡಿಯೊ ವೈರಲ್ ಆದ ಪ್ರಕರಣದ ಸಂಬಂಧ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನಿಶ್ ಮಹೇಶ್ವರಿ ಅವರನ್ನು ನಿರಂತರವಾಗಿ ಪ್ರಶ್ನೆ ಮಾಡುವ ಮೂಲಕ ಉತ್ತರ ಪ್ರದೇಶ ಪೊಲೀಸರು ತನಿಖೆಯನ್ನು ಯಾವ ದಿಕ್ಕಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ನೀಡಿರುವ ನೋಟಿಸ್ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ನಿವಾಸಿ ಆಗಿರುವ ಮನಿಶ್ ಮಹೇಶ್ವರಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಿ. ನರೇಂದ್ರ ಅವರಿದ್ದ ಪೀಠ, ‘ಐ.ಟಿ ಕಾಯ್ದೆಯ 76ನೇ ಸೆಕ್ಷನ್ ಅನ್ನು ಈ ಪ್ರಕರಣಕ್ಕೆ ಅನ್ವಯಿಸಲು ಹೊರಟಿರುವುದು ಆಶ್ಚರ್ಯ ಎನಿಸಿದೆ. ಟ್ವಿಟರ್ ಇಂಡಿಯಾ ಮಧ್ಯವರ್ತಿ ಎಂದು ಹೇಳಿಕೊಂಡಿದೆಯೇ ಅಥವಾ ಮಧ್ಯವರ್ತಿ ಎಂಬುದನ್ನು ಖಚಿತಪಡಿಸಲು ನಿಮ್ಮಿಂದ ಸಾಧ್ಯವಿದೆಯೇ’ ಎಂದು ಪ್ರಶ್ನಿಸಿತು.
‘ಮನಿಶ್ ಅವರನ್ನು ಬಂಧಿಸುವ ಉದ್ದೇಶ ಪೊಲೀಸರಿಗೆ ಇಲ್ಲ. ತನಿಖೆ ಅನುಕೂಲ ಆಗುವಂತೆ ವಿಚಾರಣೆ ನಡೆಸುವ ಉದ್ದೇಶಷ್ಟೇ ಇದೆ’ ಎಂದು ಪೊಲೀಸರ ಪರ ವಕೀಲರು ಹೇಳಿದರು.
‘ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸಲು ಅರ್ಜಿದಾರರು ಸಿದ್ಧರಿದ್ದಾರೆ. ಆದರೆ, ಸಿಆರ್‌ಪಿಸಿ ಸೆಕ್ಷನ್ 41ಎ ಅಡಿಯಲ್ಲಿ ನೋಟಿಸ್ ನೀಡಿರುವುದನ್ನು ಗಮನಿಸಿದರೆ ಬಂಧಿಸುವ ಸಾಧ್ಯತೆ ಇದೆ’ ಎಂದು ಅರ್ಜಿದಾರರ ಪರ ವಕೀಲ ಸಿ.ವಿ. ನಾಗೇಶ್ ವಾದಿಸಿದರು.
ಮನಿಶ್ ಅವರನ್ನು ವಿಚಾರಣೆ ನಡೆಸಲೇಬೇಕೆಂದರೆ ಅದಕ್ಕೆ ವರ್ಚುವಲ್ ಮಾದರಿಯಲ್ಲಿ ಅವಕಾಶ ಇದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಹೈಕೋರ್ಟ್ ಜೂನ್ 24ರಂದು ಮಧ್ಯಂತರ ಆದೇಶ ನೀಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.