ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಉನ್ನತ ಶಿಕ್ಷಣ ಆಯೋಗ ಮಸೂದೆ ಶೀಘ್ರ

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ: ಯುಜಿಸಿ ಅಧ್ಯಕ್ಷ ಎಂ.ಜಗದೀಶ ಕುಮಾರ್‌
Last Updated 7 ನವೆಂಬರ್ 2022, 6:06 IST
ಅಕ್ಷರ ಗಾತ್ರ

ಮಂಗಳೂರು: 'ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಭಾರತೀಯ ಉನ್ನತ ಶಿಕ್ಷಣ ಆಯೋಗ (ಹೈಯರ್‌ ಎಜುಕೇಷನ್ ಕಮಿಷನ್‌ ಆಫ್‌ ಇಂಡಿಯಾ) ಮಸೂದೆಯ ಕರಡನ್ನು ರೂಪಿಸಲಾಗುತ್ತಿದೆ’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಪ್ರೊ.ಎಂ.ಜಗದೀಶ ಕುಮಾರ್ ತಿಳಿಸಿದರು.

ನಿಟ್ಟೆ ಡೀಮ್ಡ್‌ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.

‘ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸಲಾಗುತ್ತಿದೆ. ಎಐಸಿಟಿಇ, ಯುಜಿಸಿ, ಎನ್‌ಸಿಟಿಇ ಮೊದಲಾದ ಮಂಡಳಿಗಳನ್ನು ವಿಲೀನಗೊಳಿಸಿರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣಾ ಮಂಡಳಿಯನ್ನು ರಚಿಸಲಾಗುತ್ತಿದೆ. ವೈದ್ಯಕೀಯ, ಕಾನೂನು, ಕೃಷಿ ಸೇರಿದಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳೂ ಇದರ ವ್ಯಾಪ್ತಿಗೆ ಬರಲಿವೆ. ನ್ಯಾಕ್‌, ಎನ್‌ಐಆರ್‌ಎಫ್‌ನಂತಹ ಮಾನ್ಯತಾ ಸಂಸ್ಥೆಗಳನ್ನು ಒಗ್ಗೂಡಿಸಿ ನ್ಯಾಷನಲ್‌ ಅಕ್ರೆಡೇಷನ್‌ ಕೌನ್ಸಿಲ್‌ ಅನ್ನು ರಚಿಸಲಾಗುತ್ತದೆ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಸಂಶೋಧನಾ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ರಾಷ್ಟ್ರೀಯ ಸಂಶೋಧನಾ ಮಂಡಳಿ ಸ್ಥಾಪನೆಯಾಗಲಿದೆ. ಪಠ್ಯಕ್ರಮಕ್ಕೆ ಸಂಬಂಧಿಸಿದ ವಿಚಾರಗಳು, ಶೈಕ್ಷಣಿಕ ಸಾಮರ್ಥ್ಯ ವರ್ಧನೆ, ಶಿಕ್ಷಕರ ತರಬೇತಿ ಮೊದಲಾದ ಚಟುವಟಿಕೆಗಳ ಗುಣಮಟ್ಟ ನಿರ್ಧರಿಸಲು ನ್ಯಾಷನಲ್‌ ಸ್ಟ್ಯಾಂಡರ್ಡ್‌ ಸೆಟ್ಟಿಂಗ್‌ ಕೌನ್ಸಿಲ್‌ ಸ್ಥಾಪನೆ ಆಗಲಿದೆ’ ಎಂದು ಅವರು ವಿವರಿಸಿದರು.

‘ಈ ಸುಧಾರಣಾ ಕ್ರಮಗಳಿಗೆ ಶಿಕ್ಷಣ ಸಂಸ್ಥೆಗಳನ್ನು ಸಜ್ಜುಗೊಳಿಸಬೇಕಾಗಿದೆ. ಈ ಸಂಸ್ಥೆಗಳನ್ನು ಪುನರ್ರಚಿಸುವ ಪ್ರಕ್ರಿಯೆಯಲ್ಲಿ ನಿಯಂತ್ರಣ ವ್ಯವಸ್ಥೆಯಲ್ಲಿ ಯಾವುದೇ ಪುನಾವರ್ತನೆ ಆಗದಂತೆ ಎಚ್ಚರ ವಹಿಸುತ್ತಿದ್ದೇವೆ. ರಾಜ್ಯದ ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿದ್ಯಾಲಯಗಳು ಹಾಗೂ ಡೀಮ್ಡ್‌ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಸಭೆಗಳನ್ನು ನಡೆಸಿ ಮಾನಸಿಕವಾಗಿ ಅವರನ್ನು ಸಿದ್ಧಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದೇವೆ. ಹೊಸ ಮಾರ್ಗಸೂಚಿ ರೂಪಿಸುವಾಗ ಯುಜಿಸಿ ವೆಬ್‌ಸೈಟ್‌ನಲ್ಲಿ ಸಮಗ್ರ ಮಾಹಿತಿ ಪ್ರಕಟಿಸಿ ಪಾಲುದಾರ ಸಂಸ್ಥೆಗಳ ಪ್ರತಿಕ್ರಿಯೆ ಪಡೆಯುತ್ತವೆ’ ಎಂದು ವಿವರಿಸಿದರು.

‘ನ್ಯಾಷನಲ್‌ ಕ್ರೆಡಿಟ್‌ ಫ್ರೇಮ್‌ವರ್ಕ್‌ ರೂಪಿಸಲು ಸಿದ್ಧತೆ ನಡೆದಿವೆ. ಮೂರು ಸ್ತರಗಳ ಈ ವ್ಯವಸ್ಥೆ ನ್ಯಾಷನಲ್‌ ಸ್ಕೂಲ್‌ ಫ್ರೇಮ್ ವರ್ಕ್‌, ನ್ಯಾಷನಲ್‌ ಹೈಯರ್‌ ಎಜುಕೇಷನಲ್‌ ಫ್ರೇಮ್‌ವರ್ಕ್‌ ಹಾಗೂ ನ್ಯಾಷನಲ್‌ ಸ್ಕಿಲ್‌ ಎಜುಕೇಷನ್‌ ಫ್ರೇಮ‌ವರ್ಕ್‌ಗಳನ್ನು ಒಳಗೊಳ್ಳಲಿದೆ. ಇದರಡಿ ಇಡೀ ಶಿಕ್ಷಣ ಪ್ರಕ್ರಿಯೆಯನ್ನು ಎಂಟು ಹಂತಗಳನ್ನಾಗಿ (ಲೆವೆಲ್‌ಗಳು) ವಿಂಗಡಿಸಲಾಗುತ್ತದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಾಲಾ ಶಿಕ್ಷಣವು 15 ವರ್ಷಗಳವರೆಗೆ ಇರುತ್ತದೆ. ಇದನ್ನು ನಾಲ್ಕು ಹಂತಗಳು ಎಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದಲ್ಲಿ ನಾಲ್ಕನೇ ಹಂತದಿಂದ ಎಂಟನೇ ಹಂತದವರೆಗೆ ಶಿಕ್ಷಣ ಪಡೆಯುತ್ತಾರೆ. ಪದವಿ ಶಿಕ್ಷಣದ ಮೊದಲ ವರ್ಷ4.5 ಹಂತದ್ದಾದರೆ, ಪಿಎಚ್‌.ಡಿ ಅಧ್ಯಯನ ನಡೆಸಿದಾಗ ಅವರು ಎಂಟು ಹಂತಗಳನ್ನು ಪೂರೈಸಿದಂತಾಗುತ್ತದೆ’ ಎಂದು ವಿವರಿಸಿದರು.

’ಕ್ರೆಡಿಟ್‌ಗಳು ಶಾಲಾ ಹಂತದಲ್ಲೇ ಸಂಗ್ರಹವಾಗುತ್ತಾ ಹೋಗುತ್ತವೆ. ಮುಂದಿನ ಹಂತವನ್ನು ಪ್ರವೇಶಿಸಬೇಕಾದರೆ ವಿದ್ಯಾರ್ಥಿಗಳು ಅದರ ಹಿಂದಿನ ಹಂತದಲ್ಲಿ ಕನಿಷ್ಠ 40 ಕ್ರೆಡಿಟ್‌ಗಳನ್ನು ಸಂಪಾದಿಸಬೇಕು. ವಿದ್ಯಾರ್ಥಿ 35 ಕ್ರೆಡಿಟ್‌ ಅಷ್ಟೇ ಗಳಿಸಿದ್ದರೂ, ಇನ್ನುಳಿದ 5 ಕ್ರೆಡಿಟ್‌ ಸಿಕ್ಕದ ತಕ್ಷಣವೇ ಮುಂದಿನ ಹಂತದ ಶಿಕ್ಷಣ ಪಡೆಯಬಹುದು. ಚಾಲ್ತಿಯಲ್ಲಿರುವ ಶಿಕ್ಷಣದಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿ ಶಿಕ್ಷಣ ಮುಂದುವರಿಸಲು ಒಂ‌ದು ಶೈಕ್ಷಣಿಕ ವರ್ಷವನ್ನೇ ವ್ಯಯಿಸಬೇಕಾಗುತ್ತಿತ್ತು. ನಿರ್ದಿಷ್ಟ ವಿಷಯದ ಪೂರ್ವಾನುಭವಕ್ಕೂ ಕ್ರೆಡಿಟ್‌ ನೀಡಲಾಗುತ್ತದೆ. ಉದಾಹರಣೆಗೆ ಪತ್ರಕರ್ತರು ಉನ್ನತ ಶಿಕ್ಷಣ ಪಡೆಯಬಯಸಿದರೆ, ಅವರ ಅನುಭವಕ್ಕೂ ಕ್ರೆಡಿಟ್‌ ಸಿಗಲಿದೆ. ವ್ಯಕ್ತಿಗಳಲ್ಲಿ 30 ವರ್ಷಗಳ ಬಳಿಕ ಸೃಜನಶೀಲತೆ ಕಡಿಮೆ ಆಗುತ್ತದೆ‘ ಎಂದರು.

‘ಯುವಜನರು ಆವಿಷ್ಕಾರಗಳಲ್ಲಿ ತೊಡಗಬೇಕು ಎಂಬ ಕಾರಣಕ್ಕೆ ಪದವಿ ಮುಗಿಸಿದ ತಕ್ಷಣವೇ ವಿದ್ಯಾರ್ಥಿ ನೇರವಾಗಿ ಪಿಎಚ್‌.ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಂಶೋಧನೆ, ಉದ್ಯೋಗ, ಉದ್ಯಮ ಸ್ಥಾಪನೆ ಮೊದಲಾದ ಆಸಕ್ತಿಗಳಿರುತ್ತವೆ. ಅದಕ್ಕೆ ಪೂರಕವಾಗಿ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಒಂದು ರಾಜ್ಯದಲ್ಲಿ ಬಿ.ಎ ದ್ವಿತೀಯ ವರ್ಷದವರೆಗೆ ಕಲಿತ ವಿದ್ಯಾರ್ಥಿ ಇನ್ನೊಂದು ರಾಜ್ಯದಲ್ಲಿ ಮೂರನೇ ವರ್ಷದ ಪದವಿ ಶಿಕ್ಷಣ ಮುಂದುವರಿಸಬಹುದು. ಇದಕ್ಕೆ ವಲಸೆ ಪ್ರಮಾಣಪತ್ರವೂ ಅಗತ್ಯವಿಲ್ಲ. ತಾಂತ್ರಿಕ ಶಿಕ್ಷಣ, ಕೌಶಲ ಶಿಕ್ಷಣ, ಸಾಮಾನ್ಯ ಶಿಕ್ಷಣವನ್ನು ಏಕಕಾಲದಲ್ಲೇ ಪಡೆಯವುದಕ್ಕೂ ಅವಕಾಶ ಕಲ್ಪಿಸಿದ್ದೇವೆ. ಶಿಕ್ಷಣ ವ್ಯವಸ್ಥೆಯನ್ನು ಸುಲಲಿತಗೊಳಿಸುವ ಸಾಕಷ್ಟು ವಿಚಾರಗಳನ್ನು ಈ ಸುಧಾರಣಾ ಪ್ರಕ್ರಿಯೆಯಲ್ಲಿ ಅಳವಡಿಸಿದ್ದೇವೆ’ ಎಂದರು.

‘2023ರ ಜುಲೈ ಒಳಗೆ ಐಡಿಯು ಸ್ಥಾಪನೆ’

‘ಕೌಶಲ ಆಧಾರಿತ ಪದವಿ ಕೋರ್ಸ್‌ ಕಲಿಕೆಯನ್ನು ಉತ್ತೇಜಿಸಲು ಇಂಡಿಯನ್‌ ಡಿಜಿಟಲ್‌ ವಿಶ್ವವಿದ್ಯಾಲಯವನ್ನು (ಐಡಿಯು) 2023 ಜುಲೈ ಒಳಗೆ ಸ್ಥಾಪಿಸಲಾಗುತ್ತದೆ. ಡೇಟಾ ಸೈನ್ಸ್‌, ಮೆಷೀನ್‌ ಲರ್ನಿಂಗ್‌, ಡೇಟಾ ಅನಾಲಿಟಿಕ್ಸ್‌, ಹಣಕಾಸು ನಿರ್ವಹಣೆ, ಫಿನ್‌ಟೆಕ್‌ನಂತಹ ಕೋರ್ಸ್‌ಗಳನ್ನು ಕಲಿಯಲು ಈ ವಿಶ್ವವಿದ್ಯಾಲಯ ನೆರವಾಗಲಿದೆ. ವಿದ್ಯಾರ್ಥಿ ಮಾನವಿಕ ವಿಷಯವನ್ನು ಕಲಿಯುವುದರ ಜೊತೆಗೆ ಐಡಿಯುವಿನಲ್ಲಿ ಕೌಶಲ ಶಿಕ್ಷಣಕ್ಕೆ ಸಂಬಂಧಿಸಿದ ಕೋರ್ಸ್‌ ಕಲಿಯಬಹುದು. ಇದರಿಂದ ಅವರ ಉದ್ಯೋಗಾವಕಾಶ ಹೆಚ್ಚಲಿದೆ. ಜಾಗತಿಕ ಮಟ್ಟದ ವಿಶ್ವವಿದ್ಯಾಲಯವಾಗಿ ಇದು ಹೊರಹೊಮ್ಮಲಿದೆ. ನವದೆಹಲಿಯಲ್ಲಿ ಕೇಂದ್ರ ಕಚೇರಿ ಇರಲಿದೆ ಎಂದು ತಿಳಿಸಿದರು. ಆನ್ಲೈನ್‌ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಿದ್ದೇವೆ. ಉದ್ಯೋಗ ನೀಡುವ ಸಂಸ್ಥೆಗಳನ್ನು ಈ ಕಾರ್ಯಕ್ರಮದಲ್ಲಿ ಜೋಡಿಸಿಕೊಂಡಿದ್ದೇವೆ’ ಎಂದು ಜಗದೀಶ ಕುಮಾರ್‌ ತಿಳಿಸಿದರು.

‘ಶಿಕ್ಷಕರ ತರಬೇತಿಗೆ 100 ಕೇಂದ್ರ‘

’ದೇಶದಲ್ಲಿ 15 ಲಕ್ಷ ಅಧ್ಯಾಪಕರಿದ್ದಾರೆ. ಉನ್ನತ ಶಿಕ್ಷಣ ವ್ಯವಸ್ಥೆ ಆಮೂಲಾಗ್ರ ಬದಲಾವಣೆಯ ಸಂಕ್ರಮಣ ಕಾಲದಲ್ಲಿ ಅವರಿಗೆ ಭೌತಿಕವಾಗಿ ತರಬೇತಿ ನೀಡಲು ಬಹಳಷ್ಟು ಸಮಯ ಬೇಕಾಗುತ್ತದೆ. ಇದನ್ನು ತಪ್ಪಿಸಲು ಆನ್‌ಲೈನ್‌ ಮತ್ತು ಆಫ್‌ಲೈನ್‌ನ ಹೈಬ್ರಿಡ್‌ ಮಾದರಿ ರೂಪಿಸಿದ್ದೇವೆ. ಇದಕ್ಕಾಗಿ 100 ಕೇಂದ್ರಗಳನ್ನು ಗುರುತಿಸಿದ್ದು, ಇವು ಶಿಕ್ಷಕರಿಗೆ ಎರಡು ವಾರಗಳ ತರಬೇತಿ ನೀಡಲಿವೆ‘ ಎಂದು ಜಗದೀಶ್‌ ಕುಮಾರ್‌ ಮಾಹಿತಿ ನೀಡಿದರು.

‘ಕರಿಹಲಗೆ ಬಳಕೆಯ ದಿನಗಳು ಮುಗಿದವು. ಶಿಕ್ಷಕರಿಗೆ ತಂತ್ರಜ್ಞಾನ ಬಳಕೆ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಕಲಿಕಾ ಸಾಮಗ್ರಿ ರೂಪಿಸುವ ಬಗೆಯನ್ನು ಕಲಿಸಬೇಕಿದೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಮುಲಾಜಿಲ್ಲದೇ ಪ್ರಶ್ನೆ ಕೇಳುವಂತಹ ಮುಕ್ತ ವಾತಾವರಣವನ್ನು ತರಗತಿಯಲ್ಲಿ ರೂಪಿಸಬೇಕಿದೆ. ಯುಜಿಸಿಯು ಈ ಸಲುವಾಗಿ ಸಮಿತಿಯನ್ನು ರಚಿಸಿದೆ. ಆ ಸಮಿತಿಯು ಈ ಕುರಿತ ರೂಪರೇಷೆ ಸಿದ್ಧಪಡಿಸುತ್ತಿದೆ’ ಎಂದರು.

‘ಬದಲಾಗಲಿದೆ ಮೌಲ್ಯಮಾಪನ ವ್ಯವಸ್ಥೆ’

‘ಕಲಿಕೆ ಪ್ರಕ್ರಿಯೆಯ ಜೊತೆ ಮೌಲ್ಯಮಾಪನ ವ್ಯವಸ್ಥೆಯೂ ಬದಲಾಗಲಿದೆ. ಕೆಲವು ವಿದ್ಯಾರ್ಥಿ ವಿಶ್ಲೇಷಣೆಯನ್ನು ಚೆನ್ನಾಗಿ ಮಾಡಬಲ್ಲರು. ಇನ್ನು ಕೆಲವರು ಉತ್ತಮ ಪ್ರಬಂಧ ಬರೆಯಬಲ್ಲರು. ಇನ್ನು ಕೆಲವರು ಸಂವಹನದಲ್ಲಿ, ಮತ್ತೆ ಕೆಲವರು ವಿಚಾರ ಮಂಡನೆಯಲ್ಲಿ ಉತ್ತಮ ಕೌಶಲ ಹೊಂದಿರುತ್ತಾರೆ. ವಿದ್ಯಾರ್ಥಿಯ ಪ್ರತಿಯೊಂದು ಕೌಶಲಕ್ಕೂ ಮನ್ನಣೆ ಸಿಗಬೇಕಿದೆ. ಕಲಿಕೆಯಲ್ಲಿ ಹಿಂದಿರುವವರಿಗೆ ಪ್ರತ್ಯೇಕ ಮೌಲ್ಯಮಾಪನ ವ್ಯವಸ್ಥೆ ಇರಲಿದೆ. ಇನ್ನು ಮೌಲ್ಯಮಾಪನದ ಜುಟ್ಟು ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರ ಬಳಿ ಇರುವುದಿಲ್ಲ. ವಿದ್ಯಾರ್ಥಿಯ ಶಿಕ್ಷಕರೇ ನೇರವಾಗಿ ಮೌಲ್ಯಮಾಪನವನ್ನೂ ನಿಯಂತ್ರಿಸಲಿದ್ದಾರೆ’ ಎಂದು ಜಗದೀಶ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT