ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಮಾಡಲು ನಮ್ಮದು ಡಿಕೆಶಿ ಕುಟುಂಬವಲ್ಲ: ಅಶ್ವತ್ಥನಾರಾಯಣ

Last Updated 2 ಮೇ 2022, 11:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನ್ನ ಸಹೋದರ ಸತೀಶ್‌ ವಿರುದ್ಧ ಮಾಡಿರುವ ಆರೋಪಕ್ಕೆ ಸಾಕ್ಷ್ಯ ನೀಡಲಿ. ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ ಇಲ್ಲ, ಆ ರೀತಿ ಇರಲಿಕ್ಕೆ ನಮ್ಮದು ಡಿ.ಕೆ.ಶಿ ಕುಟುಂಬವೂ ಅಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿರುಗೇಟು ನೀಡಿದ್ದಾರೆ.

ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಅವರ ಆರೋಪದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಅವರು ಮಾಡಿರಬಹುದು ಇವರು ಮಾಡಿರಬಹುದು ಎಂದು ಗಾಳಿಯಲ್ಲಿ ಗುಂಡು ಹೊಡೆಯುವಂತೆ ಮಾತನಾಡಿದ್ದಾರೆ. ಸಂಪೂರ್ಣ ನಿರಾಧಾರ ಮತ್ತು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಷಡ್ಯಂತ್ರ ಮಾಡಿದ್ದಾರೆ’ ಎಂದರು.

‘ಪಿಎಸ್‌ಐ ನೇಮಕಾತಿ ವಿಚಾರದಲ್ಲಿ ಯಾವುದೇ ವ್ಯಕ್ತಿಗೂ ಶಿಫಾರಸು ಮಾಡುವ ಪ್ರಶ್ನೆಯೇ ಇಲ್ಲ. ಯಾರಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ತನಿಖೆ ವರದಿ ಬಂದ ನಂತರ ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಡಿ.ಕೆ.ಶಿವಕುಮಾರ್‌ ಬಾಯಲ್ಲಿ ಹೇಳಿಕೆ ಬರುತ್ತದೆ ಎಂದರೆ ಅದರಲ್ಲಿ ದುರುದ್ದೇಶ ಇದ್ದೇ ಇರುತ್ತದೆ. ಕಾಂಗ್ರೆಸ್‌ನವರು ಯಾವುದೇ ಆಧಾರ ಇಟ್ಟುಕೊಂಡು ಮಾತನಾಡುತ್ತಿಲ್ಲ. ದರ್ಶನ್‌ಗೌಡ ಎಂಬುವರ ಹೆಸರು ನಾನು ಈಗಲೇ ಕೇಳುತ್ತಿರುವುದು. ನನ್ನ ಅಣ್ಣ ಸತೀಶ್‌ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿದರು.

‘ಎಲ್ಲಿ ನಾನು ಮುಖ್ಯಮಂತ್ರಿ ಆಗಿ ಬಿಡುತ್ತೇನೆ ಎಂಬ ಭಯ ಡಿಕೆಶಿ ಅವರಿಗಿದೆ. ಇವರನ್ನು ರಾಮನಗರ ಜಿಲ್ಲೆಯ ಜನ ಸಂಪೂರ್ಣ ಒಪ್ಪಿಲ್ಲ. ಡಿಕೆಶಿ ಕೇವಲ ರಾಮನಗರಕ್ಕೆ ಸೀಮಿತವಾದ ನಾಯಕ. ನಮ್ಮ ಪೂರ್ವಜರೂ ರಾಮನಗರದವರೇ. ಡಿಕೆಶಿ ಭ್ರಷ್ಟಾಚಾರದ ಬಂಡವಾಳವನ್ನು ಬಿಚ್ಚಿಡುತ್ತೇನೆ’ ಎಂದೂ ಅಶ್ವತ್ಥನಾರಾಯಣ ಹೇಳಿದರು.

‘ಇಲ್ಲ ಸಲ್ಲದ ಆರೋಪ ಮಾಡಲು ಉಗ್ರಪ್ಪನಿಗೆ ನಾಚಿಕೆ ಆಗೋದಿಲ್ವ. ಭ್ರಷ್ಟಾಚಾರ ಮಾಡಿದ್ದರೆ ಹೇಳಲಿ. ಡಿ.ಕೆ.ಶಿವಕುಮಾರ್ ಕಡು ಭ್ರಷ್ಟ ಎಂದು ಇದೇ ಉಗ್ರಪ್ಪ ಹೇಳಿದ್ದರು. ಇಂಥ ಸಾವಿರ ಆರೋಪ ಮಾಡಿ ನನ್ನ ಮುಖಕ್ಕೆ ಮಸಿ ಬಳಿಯಲು ಆಗುವುದಿಲ್ಲ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT