ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹೊತ್ತಿ ಉರಿಯುತ್ತಿದೆ, ಬೇಗ ವಿಲೇವಾರಿ ಮಾಡುತ್ತೇನೆ: ನ್ಯಾಯಮೂರ್ತಿ ಹೇಳಿಕೆ

ಹಿಜಾಬ್: ಅರ್ಜಿಗಳ ವಿಚಾರಣೆ ಆರಂಭಿಸಿದ ಹೈಕೋರ್ಟ್
Last Updated 8 ಫೆಬ್ರುವರಿ 2022, 9:30 IST
ಅಕ್ಷರ ಗಾತ್ರ

ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವುದನ್ನು ಪ್ರತಿಬಂಧಿಸಿ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಹೊರಡಿಸಿರುವ ಆದೇಶ ಸೇರಿದಂತೆ ಹಿಜಾಬ್ ಕುರಿತಾದ ಎಲ್ಲ ರಿಟ್ ಅರ್ಜಿಗಳನ್ನು ಹೈಕೋರ್ಟ್ ಇಂದು ಮಧ್ಯಾಹ್ನ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ನಾಲ್ಕಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದ್ಧು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸುತ್ತಿದೆ.

ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್
ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್

ಈ ಸಂಬಂಧ ಸರ್ಕಾರದ ಆದೇಶ ಪ್ರಶ್ನಿಸಲಾದ ಅರ್ಜಿದಾರರ ಪರ ಹೈಕೋರ್ಟ್ ನ ಹಿರಿಯ ವಕೀಲ ದೇವದತ್ತ ಕಾಮತ್ ವಾದ ಮಂಡಿಸುತ್ತಿದ್ದಾರೆ.

ಊಟದ ವಿರಾಮದ ನಂತರ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿದ ನ್ಯಾಯಪೀಠ ಕಲಾಪವನ್ನು ಮುಂದೂಡಿದೆ. ಅರ್ಜಿದಾರರ ಪರ ವಕೀಲರಾದ ರಹಮತ್ ಉಲ್ಲಾ ಕೊತ್ವಾಲ್ ಹಾಗೂ ಮೊಹಮದ್ ತಾಹಿರ್ ತಮ್ಮ ವಾದ ಮಂಡನೆಯ ಸರತಿಗಾಗಿ ಕಾಯುತ್ತಿದ್ದಾರೆ.

ರಾಜ್ಯ ಹೊತ್ತಿ ಉರಿಯುತ್ತಿದೆ:
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಇತರೆ ಎಲ್ಲ ಪ್ರಕರಣಗಳಿಗೆ ನ್ಯಾಯಪೀಠ ಮುದ್ದತ್ತು ನೀಡಿ ವಿಚಾರಣೆ ಮುಂದೂಡಿತು.

ಕೆಲವು ಪ್ರಕರಣಗಳ ಪರ ವಕೀಲರು ತಮ್ಮ ಅರ್ಜಿಗಳ ತುರ್ತು ವಿಚಾರಣೆ ಅಗತ್ಯವಿದೆ ಎಂಬ ಮನವಿಗೆ ನ್ಯಾಯಪೀಠ, ಇಡೀ ರಾಜ್ಯ ಹೊತ್ತಿ ಉರಿಯುತ್ತಿದೆ. ಮುಗ್ಧ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಬಹಳಷ್ಟು ಕಡೆ ಅಡಚಣೆಯಾಗಿದೆ. ಅವರೆಲ್ಲಾ ರಸ್ತೆಗೆ ಇಳಿದಿದ್ದಾರೆ. ಇದ್ಯಾವುದೂ ಸಂತೋಷದ ವಿಷಯವಲ್ಲ. ಹಾಗಾಗಿ ಹಿಜಾಬ್ ಪ್ರಕರಣಕ್ಕೆ ಅದ್ಯತೆ ನೀಡಲಾಗುವುದು ಎಂದರು.

ಸಂಸ್ಕೃತಕ್ಕಿಂತ ಸುಂದರ ಕನ್ನಡ: ಸರ್ಕಾರದ ಸುತ್ತೋಲೆ ಆಕ್ಷೇಪಾರ್ಹವಾಗಿದೆ ಎಂಬ ಮನವಿಯನ್ನು ದೇವದತ್ತ ಕಾಮತ್ ನ್ಯಾಯಪೀಠಕ್ಕೆ ಅರುಹಿದರು.

ಆಗ ನ್ಯಾಯಪೀಠವು, "ಸರಿ, ಸರ್ಕಾರದ ಆದೇಶವನ್ನು ಎಲ್ಲ ವಕೀಲರು ಮತ್ತು ಕಕ್ಷಿದಾರರಿಗೆ ಕೇಳುವಂತೆ ಗಟ್ಟಿಯಾಗಿ ಓದಿ ಎಂದು ನಿರ್ದೇಶಿಸಿತು.

ಆಗ ದೇವದತ್ತ ಕಾಮತ್, "ಸ್ವಾಮಿ, ನನಗೆ ಕನ್ನಡ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ. ಕ್ಷಮಿಸಬೇಕು" ಎಂದರು.

ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಕಾಮತ್ ನೀವು ಕನ್ನಡಿಗರು. ನಿಮಗೆ ಗೊತ್ತೇ, ಸಂಸ್ಕೃತಕ್ಕಿಂತಲೂ ಕನ್ನಡ ಅತ್ಯಂತ ಸುಂದರವಾದದ್ದು ಈ ಮಾತನ್ನು ಡಿ.ವಿ. ಗುಂಡಪ್ಪನವರು ತಮ್ಮ, "ಸಾಹಿತ್ಯ ಮತ್ತು ಜೀವನ ಸೌಂದರ್ಯ"ದಲ್ಲಿ ಉಲ್ಲೇಖಿಸಿದ್ದಾರೆ ಎಂದು ಗಮನ ಸೆಳೆದರು.

ಸಂಖ್ಯೆ ಮುಖ್ಯವಲ್ಲ: ಕಲಾಪ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರ ಪರ ವಕೀಲರೊಬ್ಬರು, ಸ್ವಾಮಿ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಅರ್ಜಿಗಳು ದಾಖಲಾಗುತ್ತಿವೆ. ಆದ್ದರಿಂದ, ವಿಚಾರಣೆ ಮುಂದೂಡಬೇಕು" ಎಂದು ಕೋರಿದರು.

ಇದಕ್ಕೆ ನ್ಯಾಯಪೀಠ, "ಇದು ಕೆ.ಆರ್.ಮಾರ್ಕೆಟ್ ಅಲ್ಲ. ಹೈಕೋರ್ಟ್. ಅರ್ಜಿಗಳ ಸಂಖ್ಯೆ ಎಷ್ಟೇ ಇದ್ದರೂ ತೀರ್ಪು ಎಲ್ಲವಕ್ಕೂ ಅನ್ವಯವಾಗುತ್ತದೆ ಅಲ್ಲವೇ" ಎಂದು ಪ್ರಶ್ನಿಸಿ ಶೀಘ್ರ ವಿಚಾರಣೆ ಪೂರೈಸಿ ಒಂದು ವಾರದಲ್ಲಿ ಮುಗಿಸೋಣ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ಸರ್ಕಾರದ ಪರ ಎ.ಜಿ: ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, ಸರ್ಕಾರದ ಅಕ್ಷೇಪಣೆ ಸಿದ್ಧವಿದೆ ಎಂದು ನ್ಯಾಯಪೀಠಕ್ಕೆ ಅರುಹಿದರು.

ಕುರಾನ್ ತರಿಸಿದ ನ್ಯಾಯಪೀಠ: ದೇವದತ್ತ ಕಾಮತ್ ವಿಚಾರಣೆ ಆರಂಭಿಸಿ ವಾದದ ಮಧ್ಯೆ ಕುರಾನ್ ಸಾಲುಗಳನ್ನು ಉಲ್ಲೇಖಿಸಿದರು.‌ ಕೂಡಲೇ ನ್ಯಾಯಪೀಠ ಕೋರ್ಟ್ ಅಧಿಕಾರಿಗೆ ಹೈಕೋರ್ಟ್ ಗ್ರಂಥಾಲಯದಲ್ಲಿರುವ ಕುರಾನ್ ಪ್ರತಿಯನ್ನು ತರಿಸುವಂತೆ ಅದೇಶಿಸಿತು. ಅದಾಗಲೇ ಸಿದ್ಧವಾಗಿರಿಸಿದ್ದ ಪ್ರತಿಯನ್ನು ಕೋರ್ಟ್ ಅಧಿಕಾರಿ ರಾಘವೇಂದ್ರ ನ್ಯಾಯಪೀಠಕ್ಕೆ ಪ್ರತಿಯನ್ನು ನೀಡಿದರು.

ಪ್ರತಿಯನ್ನು ಹಿಂದುಮುಂದು ಮಾಡಿ ಪುಟ ತಿರುಗಿಸಿ ಪರಿಶೀಲಿಸಿದ ನ್ಯಾಯಮೂರ್ತಿಗಳು, ದೇವದತ್ತ ಕಾಮತ್, ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿ, ಈ ಪ್ರತಿಯು ಸರ್ವಸಮ್ಮತ ಮತ್ತು ಅಧಿಕೃತ ಎಂದು ನ್ಯಾಯಪೀಠ ಒಪ್ಪಬಹುದೇ ಎಂದು ಕೇಳಿತು. ಇದಕ್ಕೆ ಇಬ್ಬರೂ ಸಮ್ಮತಿ ನೀಡಿದ ನಂತರ ಕುರಾನ್ ಭಾಗಗಳ ವಿಶ್ಲೇಷಣೆಗೆ ನ್ಯಾಯಮೂರ್ತಿ ಅವಕಾಶ ನೀಡಿದರು.

ಅನಾಮಧೇಯ ವಾಟ್ಸ್ ಆ್ಯಪ್ ಸಂದೇಶಗಳು: ನನ್ನ ಮೊಬೈಲ್ ಗೆ ಲೆಕ್ಕವಿಲ್ಕದಷ್ಟು ಅನಾಮಧೇಯ ವಾಟ್ಸ್ ಆ್ಯಪ್ ಸಂದೇಶಗಳು ಬರುತ್ತಿವೆ ಎಂದು ನ್ಯಾಯಮೂರ್ತಿ ಗಳು ತಿಳಿಸಿದರು.

ಹಲವು ಕೋರ್ಟ್‌ಗಳ ತೀರ್ಪುಗಳು ಸೇರಿದ‌ಂತೆ ಹಿಜಾಬ್‌ಗೆ ಸಂಬಂಧಿಸಿದ ನೂರಾರು ಸಂದೇಶಗಳು ಇದರಲ್ಲಿ ಸೇರಿವೆ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ತಿಳಿಸಿದರು.

ಇದಕ್ಕೆ ಅಡ್ವೊಕೇಟ್ ಜನರಲ್, "ಇದು ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಒಳಪಡುತ್ತದೆ" ಎಂದರು.

ಫುಲ್ ರಷ್..!ಹೈಕೋರ್ಟ್ ಹತ್ತನೇ ಕೋರ್ಟ್ ಹಾಲ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕಲಾಪವನ್ನು ವಿಡಿಯೊ ಕಾನ್ಫರೆನ್ಸ್ ಮುಖಾಂತರವೂ ವೀಕ್ಷಿಸಬಹುದಾಗಿದೆ. ಬೆಳಗಿನಿ‌ಂದಲೇ ಕೋರ್ಟ್ ಹಾಲ್ ಭರ್ತಿಯಾಗಿದ್ದು ಆನ್ ಲೈನ್ ವೀಕ್ಷಕರ ಸಂಖ್ಯೆಯೂ ಸರಿಸುಮಾರು 500 ಮೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT