ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾಬುಡನ್‌ ಗಿರಿ: ಹಿಂದೂ ಅರ್ಚಕರ ನೇಮಕ

ವ್ಯವಸ್ಥಾಪನಾ ಸಮಿತಿ ರಚಿಸಲು ಸರ್ಕಾರದ ಆದೇಶ
Last Updated 18 ಆಗಸ್ಟ್ 2022, 21:57 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಮುಜಾವರ್‌ ಜತೆ ಆಗಮ ಗೊತ್ತಿರುವ ಹಿಂದೂ ಅರ್ಚಕರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ.

ಹಿಂದೂ ಮತ್ತು ಮುಸ್ಲಿಂ ಧರ್ಮದವರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿ ರಚಿಸಬೇಕು.ಅರ್ಚಕ ಮತ್ತುಮುಜಾವರ್‌ ಅವರನ್ನು ಈ ವ್ಯವಸ್ಥಾಪನಾ ಸಮಿತಿಯಿಂದ ನೇಮಿಸಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಗುಹೆಯ ಒಳಗೆ ನಂದಾದೀಪ ಬೆಳಗಿಸಿ, ದತ್ತಾತ್ರೇಯ ಪೀಠ, ಪಾದುಕೆಗಳಿಗೆ ಹೂವುಗಳನ್ನು ಸಮರ್ಪಿಸಿ ಪ್ರತಿನಿತ್ಯದ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಲು ವ್ಯವಸ್ಥಾಪನಾ ಸಮಿತಿಯು ಆಗಮ ಶಾಸ್ತ್ರದಲ್ಲಿ ಉತ್ತೀರ್ಣರಾದ ಅರ್ಹ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಎಂದು ಸೂಚಿಸಲಾಗಿದೆ.

ವ್ಯವಸ್ಥಾಪನಾ ಸಮಿತಿಯಿಂದ ನೇಮಕಗೊಂಡ ಮುಜಾವರ್‌ ಅವರು ಪ್ರತಿ ಸೋಮವಾರ ಮತ್ತು ಗುರುವಾರ ನಮಾಜ್‌ ನಂತರ ಹಾಗೂ ಪ್ರತಿ ದಿನ ಸಂಜೆ ದರ್ಗಾಗೆ ಲೋಬಾನ ಹಾಕಬೇಕು ಮತ್ತು ಫತೇಹಾ ಅರ್ಪಿಸಬೇಕು ಎಂದು ತಿಳಿಸಲಾಗಿದೆ.

ದತ್ತ ಮಾಲಾ, ದತ್ತ ಜಯಂತಿ ಮತ್ತು ಇತರ ವಿಶೇಷ ಹಿಂದೂ ಧಾರ್ಮಿಕ ಆಚರಣೆಗಳನ್ನು ಸುಗಮವಾಗಿ ನೆರವೇರಿಸಲು ವ್ಯವಸ್ಥಾಪನಾ ಸಮಿತಿಯು ಕ್ರಮ ಕೈಗೊಳ್ಳಬೇಕು. ಅರ್ಚಕರು, ಮಠಗಳ ಪೀಠಾಧಿಪತಿಗಳು ಅಥವಾ ಗುರುಗಳನ್ನು ಗುಹೆಯ ಒಳಗೆ ಕರೆದೊಯ್ದು ಪಾದುಕೆಗಳಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಲಾಗಿದೆ.

ವ್ಯವಸ್ಥಾಪನಾ ಸಮಿತಿಯು ಒಂದು ವರ್ಷ ಮುಂಚಿತವಾಗಿಯೇ ಹಿಂದೂ ಪಂಚಾಂಗದ ಪ್ರಕಾರ ಘೋಷಿಸುವಂತೆ ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಮರುದಿನದಿಂದ ಮೂರು ದಿನಗಳ ಕಾಲ ಉರುಸ್‌ ನಡೆಸಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕದ ಸೌಹಾರ್ದ ಕೇಂದ್ರಗಳಲ್ಲಿ ಒಂದಾದ ಬಾಬಾಬುಡನ್‌ಗಿರಿಯಲ್ಲಿ ವೈದಿಕ ಪರಂಪರೆ ಪ್ರಕಾರ ಪೂಜೆ–ಧಾರ್ಮಿಕ ವಿಧಿಗಳು ನಡೆಯಬೇಕು ಎಂದು ಬಿಜೆಪಿ 1998ರಿಂದ ಹೋರಾಟ ಆರಂಭಿಸಿದೆ. ಈ ಬೇಡಿಕೆ ಈಡೇರಿಕೆಗಾಗಿ ಪ್ರತಿವರ್ಷ ದತ್ತ ಮಾಲೆ ಅಭಿಯಾನ, ದತ್ತಜಯಂತಿ ಆಚರಣೆಯನ್ನೂ ನಡೆಸುತ್ತಿದೆ. ಇದಕ್ಕೂ ಪೂರ್ವದಲ್ಲಿ ಶಾಖಾದ್ರಿ ಅವರು ಬಾಬಾಬುಡನ್‌ಗಿರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈಗಲೂ ಅವರೇ ವಿಧಿವಿಧಾನ ನೆರವೇರಿಸುತ್ತಿದ್ದಾರೆ. ವೈದಿಕ ಆಚರಣೆಗೂ ಅವಕಾಶ ಕೊಡಬೇಕೆಂಬ ಬಿಜೆಪಿ ಬೇಡಿಕೆ ಪ್ರಶ್ನಿಸಿ ಅವರು ಕೋರ್ಟ್‌ಗೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT