ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ: ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಸಕ ಸತೀಶ್‌ ರೆಡ್ಡಿ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಘಟನೆ ನಡೆದ 24 ಗಂಟೆಗಳೊಳಗೆ ಪೊಲೀಸರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿರುವುದು ಶ್ಲಾಘನೀಯ. ಕಿಡಿಗೇಡಿಗಳು ಎಷ್ಟೇ ಚಾಲಾಕಿಗಳಾಗಿದ್ದರೂ ತಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ರಾಜ್ಯದ ಪೊಲೀಸರು ರವಾನಿಸಿದ್ದಾರೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೆಎಸ್‌ಆರ್‌ಪಿ ಹಮ್ಮಿಕೊಂಡಿದ್ದ ‘ಐಕ್ಯತೆ ಮತ್ತು ದೈಹಿಕ ಸದೃಢತೆಗಾಗಿ ಸ್ವಾತಂತ್ರ್ಯತೆಯ ಓಟ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದರು.

‘ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಹಲವು ಪ್ರಕರಣಗಳನ್ನು ಬೇಧಿಸಿದ್ದಾರೆ. ಕಳ್ಳ ಮಾರ್ಗದ ಮೂಲಕ ಅವುಗಳನ್ನು ತರುತ್ತಿರುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಹಿಂದಿನ ಒಂದು ವರ್ಷದಲ್ಲಿ ಟನ್‌ಗಟ್ಟಲೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವು ಮಾದಕ ವ್ಯಸನಿಗಳ ಕೈ ಸೇರಿದ್ದರೆ ಆಗಬಹುದಾಗಿದ್ದ ಅನಾಹುತ ಎಂತಹದ್ದು ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇದನ್ನು ಸಂಪೂರ್ಣವಾಗಿ ತೊಡೆದುಹಾಕಲು ಪೊಲೀಸರು ಮತ್ತಷ್ಟು ಚುರುಕಾಗಿ ಕೆಲಸ ಮಾಡಲಿದ್ದಾರೆ’ ಎಂದರು.

‘ವಿದೇಶಿ ಪ್ರಜೆಗಳ ವಿಚಾರದಲ್ಲಿ ರಾಜ್ಯ ಸರ್ಕಾರ ನಿಷ್ಠುರ ನಿಲುವನ್ನೇ ತಳೆದಿದೆ. ಅವರ ಮೇಲೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಹಲವು ತೊಡಕುಗಳಿವೆ. ವೀಸಾ ಅವಧಿ ಮುಕ್ತಾಯಗೊಂಡವರನ್ನು ಯಾವ ಕಾರಣಕ್ಕಾಗಿ ಇಲ್ಲಿ ಉಳಿಸಿಕೊಳ್ಳಲಾಗಿದೆ. ಅವರನ್ನು ಅವರ ದೇಶಗಳಿಗೆ ಕಳುಹಿಸಿಕೊಡಲು ಏಕೆ ಆಗುತ್ತಿಲ್ಲ ಎಂಬುದರ ಬಗ್ಗೆ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

‘ಕೆಎಸ್‌ಆರ್‌ಪಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮತ್ತು ಯುವ ಜನರಲ್ಲಿ ಚೈತನ್ಯ ತುಂಬುವ ಉದ್ದೇಶದಿಂದ ಈ ಓಟ ಹಮ್ಮಿಕೊಳ್ಳಲಾಗಿದೆ. ಅವರಲ್ಲಿ ರಾಷ್ಟ್ರೀಯ ಮನೋವೃತ್ತಿ ಬೆಳೆಸುವ ಕೆಲಸವನ್ನು ಹಿರಿಯ ಅಧಿಕಾರಿಗಳು ಮಾಡುತ್ತಿದ್ದಾರೆ’ ಎಂದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ‘ಕ್ರೀಡಾಪಟುಗಳಿಗೆ ಶೇ 2ರಷ್ಟು ಮೀಸಲಾತಿ ಕಲ್ಪಿಸಿ, ಅವರನ್ನು ಆದ್ಯತೆಯ ಮೇರೆಗೆ ಪೊಲೀಸ್‌ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಆ ಸಂಬಂಧ ಮುಂದಿನ ವಾರದಲ್ಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತದೆ’ ಎಂದರು.

‘ಕೆಎಸ್‌ಆರ್‌ಪಿಗೆ ನೇಮಕಗೊಂಡವರು ನಿವೃತ್ತಿಯವರೆಗೂ ಅಲ್ಲೇ ಕೆಲಸ ಮಾಡಬೇಕಿತ್ತು. ಕೆಎಸ್‌ಆರ್‌ಪಿ, ಸಿಆರ್‌, ಡಿಆರ್‌ನಲ್ಲಿ ಕೆಲಸ ಮಾಡುವವರಿಗೆ ನಾಗರಿಕ ಪೊಲೀಸ್‌ ಇಲಾಖೆಯಲ್ಲೂ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಶೇ 10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಮುಂದಿನ ವಾರ ನೇಮಕಾತಿ ಆದೇಶ ಹೊರಬೀಳಲಿದೆ. ಕೆಎಸ್‌ಆರ್‌ಪಿ, ಡಿಆರ್‌, ಸಿಆರ್‌ನಲ್ಲಿ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿರುವವರು ಇದಕ್ಕೆ ಅರ್ಹರಾಗಿರುತ್ತಾರೆ. ಅವರು ಎಲ್ಲರಂತೆ ಲಿಖಿತ ಹಾಗೂ ದೈಹಿಕ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿರಲಿದೆ’ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು