ಸೋಮವಾರ, ಮಾರ್ಚ್ 1, 2021
28 °C

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಎಲ್ಲಾ ಆರೋಪಿಗಳ ಬಂಧನ: ಬೊಮ್ಮಾಯಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಭಾನುವಾರ ನಡೆಸಬೇಕಿದ್ದ ಎಫ್‌ಡಿಎ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಶನಿವಾರ ಕಾರ್ಯಾಚರಣೆ ಮಾಡಿ ಅಕ್ರಮವನ್ನು ಬೇಧಿಸಿ ಕೆಲವರನ್ನು ಬಂಧಿಸಿದ್ದಾರೆ. ಈ ಪ್ರಕರಣದ ಹಿಂದೆ ಯಾರೆಲ್ಲ ಇದ್ದಾರೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅತೀ ಶೀಘ್ರದಲ್ಲೇ ಪ್ರಕರಣದ ಹಿಂದೆ ಇರುವವ ಎಲ್ಲರನ್ನೂ ಬಂಧಿಸುತ್ತೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಅವರು, ‘ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾಹಿತಿ ಬಂದ ತಕ್ಷಣ ಆರ್.ಆರ್. ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಭೇದಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಸುರಕ್ಷತೆಯಿಂದ ಇಡಲಾಗುತ್ತದೆ. ಸುರಕ್ಷತೆ ಇದ್ದರೂ ಹೇಗೆ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆ ಎನ್ನುವುದು ಮಹತ್ವದ ಪ್ರಶ್ನೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತಗೊಂಡಿದ್ದೇವೆ’ ಎಂದರು.

‘ಎಷ್ಟೇ ಪ್ರಭಾವಿಗಳಿದ್ದರೂ ಪ್ರಕರಣಕ್ಕೆ ಕಾರಣಕರ್ತರಾದವರನ್ನು ಬಂಧಿಸುತ್ತೇವೆ. ಸದ್ಯ ಬಂಧಿತರ ವಿಚಾರಣೆ ನಡೆಸಿ ತನಿಖೆ ಮುಂದುವರಿಸುತ್ತೇವೆ’ ಎಂದರು.

ಮಾರ್ಗಸೂಚಿ ಸೋಮವಾರ: ಸ್ಫೋಟಕಗಳ ಬಳಕೆಗೆ ಮಾರ್ಗಸೂಚಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಗೃಹ ಇಲಾಖೆ ವ್ಯಾಪ್ತಿಗೆ ಅನ್ವಯ ಆಗುವಂತೆ ಸೋಮವಾರ ಮಾರ್ಗಸೂಚಿಯನ್ನು ಪ್ರಕಟಿಸುತ್ತೇವೆ. ಸ್ಫೋಟಕಗಳ ಬಳಕೆ ಬಗ್ಗೆ  ಪರವಾನಗಿದಾರರು ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಹಳೆಯ ಮಾರ್ಗಸೂಚಿಗಳನ್ನು ನೋಡಿಕೊಂಡು ಹೊಸ ಮಾರ್ಗಸೂಚಿಗಳನ್ನು‌ ಪ್ರಕಟಿಸುತ್ತೇವೆ’ ಎಂದರು.

‘ಅನಧಿಕೃತವಾಗಿ ಜಿಲೆಟಿನ್ ಸಂಗ್ರಹ ಮಾಡುವವರ ಮೇಲೂ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯ ಪ್ರಕರಣದಲ್ಲಿ ಫೊರೆನ್ಸಿಕ್ ತಂಡ, ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ. ಅವುಗಳ ವರದಿ ಆಧಾರದಲ್ಲಿ ಮುಂದಿನ ತನಿಖೆ ಕೈಗೊಳ್ಳುತ್ತೇವೆ’ ಎಂದೂ ಬೊಮ್ಮಾಯಿ ವಿವರಿಸಿದರು.

ಇದನ್ನೂ ಓದಿ... ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಆರು ಮಂದಿ ಬಂಧನ, ಪರೀಕ್ಷೆ ಮುಂದೂಡಿಕೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು