ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮೇಲೆ ಯಾವುದೇ ಕೇಸು ಹಾಕಿದ್ರೂ, ಎಲ್ಲ ತೆಗೆದು ಹಾಕುತ್ತೇವೆ: ಬೊಮ್ಮಾಯಿ 

ಗೃಹ ಸಚಿವರಿಂದ ವಿವಾದಾತ್ಮಕ ಹೇಳಿಕೆ
Last Updated 13 ಆಗಸ್ಟ್ 2020, 17:35 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಸಂಘಪರಿವಾರ ಮುಖಂಡರನ್ನು ಉದ್ದೇಶಿಸಿ ‘ನಿಮ್ಮ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಕಿದ್ರೂ, ಎಲ್ಲ ತೆಗೆದು ಹಾಕುತ್ತೇವೆ’ ಎಂದು ಸ್ವತಃ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ಹೇಳಿರುವ ವಿವಾದಾತ್ಮಕ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲು ಇತ್ತೀಚೆಗೆ ಬಂದಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹಸಚಿವ ಬಸವರಾಜ ಬೊಮ್ಮಾಯಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವತಃ ಗೃಹ ಸಚಿವರು ಈ ಮಾತನ್ನು ಹೇಳುವಾಗ ದನಿತಗ್ಗಿಸಿ ಹೇಳುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಏಳು ಸೆಕೆಂಡ್‌ನ ವಿಡಿಯೊದಲ್ಲಿ ಈ ಹೇಳಿಕೆ ನೀಡಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆಗೆ ಸಲಹೆ-ಸೂಚನೆ ನೀಡುತ್ತಾ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಸಚಿವರೇ ಈ ವಿವಾದಾತ್ಮಕ ಹೇಳಿಕೆ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಎದುರು, ‘ನೋಡ್ರಿ ನಿಮ್ಮ ಮೇಲೆ ಯಾವುದೇ ಕ್ರಿಮಿನಲ್ ಕೇಸು ಹಾಕಿದ್ರೂ ತೆಗೆದು ಹಾಕುತ್ತೇವೆ’ಎಂದು ಹೇಳಿದ್ದಾರೆ.

ವಿಎಚ್‌ಪಿಯ ಶರಣ್ ಪಂಪ್‌ವೆಲ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆ.12ರಂದು ನಸುಕಿನಜಾವ 2:53ಕ್ಕೆ ಗೃಹಸಚಿವರ ವಿವಾದಾತ್ಮಕ ಹೇಳಿಕೆಯ ವಿಡಿಯೊವನ್ನು ಹಂಚಿಕೊಂಡಿದ್ದಲ್ಲದೆ, ಬೆಂಗಳೂರು ಹಿಂಸಾಚಾರ ಪ್ರಕರಣದ ಕುರಿತು ಅಡಿಬರಹ ದಾಖಲಿಸಿದ್ದಾರೆ.

ವಿಡಿಯೊದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸಹಿತ ಸಂಘಪರಿವಾರದ ಮುಖಂಡರು ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ವಿಡಿಯೊದಲ್ಲಿ ವಿವಾದಾತ್ಮಕ ಹೇಳಿಕೆ ಇರುವುದು ಕಂಡುಬಂದ ನಂತರ ಎಚ್ಚೆತ್ತುಕೊಂಡ ಶರಣ್ ಪಂಪ್‌ವೆಲ್, ಬಳಿಕ ಆ ಟ್ವೀಟ್‌ನ್ನು ಅಳಿಸಿ ಹಾಕಿದ್ದಾರೆ. ಅದೇ ವೀಡಿಯೊದ ಫೋಟೊವನ್ನು ಆ.12ರಂದು ಮಧ್ಯಾಹ್ನ 3:16ಕ್ಕೆ ಮರುಟ್ವೀಟ್ ಹಾಕಿದ್ದಾರೆ.

ಶರಣ್ ಪಂಪ್‌ವೆಲ್ ತನ್ನ ಟ್ವಿಟರ್ ಖಾತೆಯಿಂದ ವಿಡಿಯೊ ಅಳಿಸಿ, ಹೊಸ ಟ್ವೀಟ್ ಮಾಡಿದರೂ ಅವರ ಹಳೆಯ ಟ್ವೀಟ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ, ಭಾರೀ ಸದ್ದು ಎಬ್ಬಿಸಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಬಗ್ಗೆ ಶರಣ್ ಪಂಪ್‌ವೆಲ್ ಆಗಲಿ, ಗೃಹಸಚಿವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT