ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರು ಸಾವು: ರೇಣುಕಾಚಾರ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ

ಎಲ್ಲ ಕೋನಗಳಿಂದ ತನಿಖೆಯಾಗದೇ ಅಂತಿಮ ತೀರ್ಮಾನಕ್ಕೆ ಬರಬೇಡಿ ಎಂದು ಪೊಲೀಸರಿಗೆ ಸೂಚನೆ
Last Updated 9 ನವೆಂಬರ್ 2022, 6:35 IST
ಅಕ್ಷರ ಗಾತ್ರ

ದಾವಣಗೆರೆ: ಚಂದ್ರಶೇಖರ್‌ ಸಾವಿನ ಪ್ರಕರಣವನ್ನು ಎಲ್ಲ ಕೋನಗಳಿಂದ ತನಿಖೆ ನಡೆಸುವವರೆಗೆ ಪೊಲೀಸರು ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಮುಖ್ಯಮಂತ್ರಿ ಬಸವರಾಅಜ ಬೊಮ್ಮಾಯಿ ಹೇಳಿದರು.

ಸಹೋದರ ಮಗನನ್ನು ಕಳೆದುಕೊಂಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಚಾರ್ಯ ಅವರ ಕುಟುಂಬಕ್ಕೆ ಬುಧವಾರ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.‌

ಮರಣೋತ್ತರ ಪರೀಕ್ಷೆಯ ವರದಿ ಇನ್ನೆರಡು ದಿನಗಳಲ್ಲಿ ಬರಲಿದೆ. ಅದರ ಆಧಾರದಲ್ಲಿ ತನಿಖೆ, ವಿಧಿ ವಿಜ್ಞಾನ ವರದಿಯ ಆಧಾರದಲ್ಲಿ ತನಿಖೆ ಮತ್ತು ಪ್ರಕರಣದ ಮರುಸೃಷ್ಟಿಯ (ರಿಕ್ರಿಯೇಶನ್ ಆಫ್‌ ಸೀನ್ ಆಫ್‌ ಕ್ರೈಂ) ತನಿಖೆ ಆಗಬೇಕು. ಎಲ್ಲ ತನಿಖೆಗಳು ಮುಗಿದಾಗ ಪ್ರಕರಣದ ನಿಖರತೆ ಗೊತ್ತಾಗಲಿದೆ ಎಂದು ಹೇಳಿದರು.

ಅವರ ತಂದೆ ತಾಯಿಗೆ ಭರಿಸಲಾರದ ದುಃಖ ಇದು. ಚಂದ್ರುವನ್ನು ರೇಣುಕಾಚಾರ್ಯ ಬಹಳ ಹಚ್ಚಿಕೊಂಡಿದ್ದರು. ಸಿವಿಲ್‌ ಎಂಜಿನಿಯರ್‌ ಆಗಿ ಇಲ್ಲೇ ಕೆಲಸ ಮಾಡುತ್ತ ಬಡವರ ಕಣ್ಣೀರು ಒರಸುತ್ತಾ, ಇಲ್ಲದವರಿಗೆ ಸಹಾಯ ಮಾಡುತ್ತಾ ಚಂದ್ರಶೇಖರ್‌ ಜನಪ್ರಿಯರಾಗಿದ್ದರು. ರೇಣುಕಾಚಾರ್ಯರ ಅರ್ಧಭಾರವನ್ನು ಹೊತ್ತಿದ್ದರು. ಅಂಥವರನ್ನು ಕಳೆದುಕೊಂಡಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.

ಈ ಪ್ರಕರಣ ನಡೆದ ಬಳಿಕ ಹಲವು ಪ್ರಶ್ನೆಗಳು, ಊಹಾಪೋಹಗಳು ಎದ್ದಿವೆ. ಎಲ್ಲದಕ್ಕೂ ತನಿಖೆ ಬಳಿಕ ಉತ್ತರ ಸಿಗಲಿದೆ. ಚಂದ್ರಶೇಖರ್‌ನ ಮೃತದೇಹ ಹಿಂಬದಿ ಸೀಟ್‌ನಲ್ಲಿ ಇದ್ದಿದ್ದು, ಕಾರಿನ ಎದುರು ಭಾಗ ಅಪಘಾತದಲ್ಲಿ ನಜ್ಜುಗುಜ್ಜಾಗಿದೆ ಎಂದು ಅಂದುಕೊಂಡರೂ ಹಿಂಬದಿಯಲ್ಲಿ ಹೇಗೆ ಹಾನಿಯಾಯಿತು ಎಂಬ ಪ್ರಶ್ನೆಗಳಿಂದಾಗಿ ಕೊಲೆ ನಡೆದಿದೆಯೇ ಎಂಬ ಅನುಮಾನ ಒಂದು ಕಡೆ ಇದೆ. ಆ ಸ್ಥಳದಲ್ಲಿ ಕಾರು ಗುದ್ದಿರುವ ಸನ್ನಿವೇಶ ಮುಂತಾದುಗಳನ್ನು ನೋಡಿದಾಗ ಇದು ಅಪಘಾತ ಎಂಬ ಅನುಮಾನ ಇನ್ನೊಂದು ಕಡೆ ಇದೆ. ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.

‘ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ. ರೇಣುಕಾಚಾರ್ಯನ ಸಹೋದರನಾಗಿ ಬಂದಿದ್ದೇನೆ. ಅವರ ಜತೆಗೆ ನಿರಂತರ ಸಂಪರ್ಕದಲ್ಲಿದ್ದೆ. ಆದರೂ ಮನಸ್ಸು ತಡೆಯಲಾರದೇ ಬಂದಿದ್ದೇನೆ’ ಎಂದರು.

ಸಚಿವರಾದ ಬೈರತಿ ಬಸವರಾಜ, ಗೋವಿಂದ ಕಾರಜೋಳ, ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಎಂ.ಪಿ. ರೇಣುಕಾಚಾರ್ಯ, ಅವರ ಸಹೋದರ ಎಂ.ಪಿ. ರಮೇಶ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT