ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತ ಸಂಪರ್ಕ ಕೇಂದ್ರದಿಂದ ತಳಿ ಸಿಗಲು ಕ್ರಮ’

ಹೆಸರಘಟ್ಟದ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ತೋಟಗಾರಿಕೆ ಸಚಿವ ಆರ್‌. ಶಂಕರ್ ಭರವಸೆ
Last Updated 10 ಫೆಬ್ರುವರಿ 2021, 19:24 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತ ಸಂಪರ್ಕ ಕೇಂದ್ರಗಳ ಮೂಲಕಭಾರತೀಯ ತೋಟಗಾರಿಕೆಸಂಶೋಧನಾಸಂಸ್ಥೆ (ಐಐಎಚ್‌ಆರ್) ಅಭಿವೃದ್ಧಿಪಡಿಸಿರುವ ನೂತನ ತಳಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕೆ ಸಚಿವ ಆರ್‌.ಶಂಕರ್ ತಿಳಿಸಿದರು.

ಹೆಸರಘಟ್ಟದ ಐಐಎಚ್‌ಆರ್‌ ಆವರಣದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಬುಧವಾರ ಭೇಟಿ ನೀಡಿ ಬಳಿಕ ಅವರು ಮಾತನಾಡಿದರು.

‘ಸಂಸ್ಥೆ ಹೊರತಂದಿರುವ ತಳಿಗಳು ರಾಜ್ಯದ ಎಲ್ಲ ರೈತರಿಗೆ ಲಭ್ಯವಾಗಬೇಕು. ಹಾಗಾಗಿ, ರಾಜ್ಯದಲ್ಲಿರುವ 715 ರೈತ ಸಂಪರ್ಕ ಕೇಂದ್ರಗಳ ಮೂಲಕ ಹೊಸ ತಳಿಗಳು ಹಾಗೂ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

‘ತೋಟಗಾರಿಕೆ ಬೆಳೆಗಳ ಸಂಬಂಧ ಸಂಸ್ಥೆಯ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳ ವಿಸ್ತರಣೆಯಲ್ಲಿ ಮೊದಲ ಸ್ಥಾನದಲ್ಲಿದ್ದು,ಉತ್ಪಾದನೆಯಲ್ಲಿ ಎಂಟನೇ ಸ್ಥಾನದಲ್ಲಿದೆ. ಉತ್ಪಾದನೆಯಲ್ಲೂ ಮೊದಲ ಸ್ಥಾನಕ್ಕೆ ಬರಲು ಆದ್ಯತೆ ನೀಡಲಾಗುವುದು’ ಎಂದರು.

ಹೂವುವಹಿವಾಟಿಗೆಪ್ರತ್ಯೇಕಸ್ಥಳ: ‘ಈಗಿರುವ ಮಾರುಕಟ್ಟೆಗಳಲ್ಲಿಹೂವಿನ ವ್ಯಾಪಾರ ವಹಿವಾಟಿಗೆ ಸ್ಥಳಾವಕಾಶದ ಕೊರತೆ ಇದೆ. ಹಣ್ಣು,ತರಕಾರಿ ಮಾರುಕಟ್ಟೆಗಳಲ್ಲಿಹೂ ಬೆಳೆಗಾರರಿಗೆಮಧ್ಯವರ್ತಿ ಗಳುತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಶೀಘ್ರದಲ್ಲೇ ಇದನ್ನು ನಿವಾರಿಸಲಾಗುವುದು. ಹೂವು ಬೆಳೆಗಾರರಿಗೆ ತಾವು ಬೆಳೆದ ಹೂ ವಹಿವಾಟಿಗೆ ಪ್ರತ್ಯೇಕ ಸ್ಥಳ ಗುರುತಿಸ ಬೇಕು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಾಲ್ಕು ಒಪ್ಪಂದಗಳಿಗೆ ಸಹಿ: ಐಐಎಚ್ಆರ್‌ ಅಭಿವೃದ್ದಿ ಪಡಿಸಿರುವ ತೋಟಗಾರಿಕೆ ತಂತ್ರಜ್ಞಾನ ಗಳ ವಾಣಿಜ್ಯೀಕರಣ ಸಂಬಂಧ ಆಂಧ್ರದ ರೈನ್ ಬೋ ಆಗ್ರಿ ವೆಟ್ ಸಿರಿ ಟೆಕ್ನಾಲಜೀಸ್ ಪ್ರೈವೇಟ್‌ ಲಿಮಿಟೆಡ್, ಬೆಂಗಳೂರಿನ ಪಿ.ಜೆ.ಮಾರ್ಗೋ ಪ್ರೈ. ಲಿಮಿಟೆಡ್, ತಿರುವನಂತಪುರದ ಗ್ರೀನ್ ಟೆಕ್ ಫರ್ಟಿಲೈಸರ್ ಕಾರ್ಪೋರೇಷನ್ ಹಾಗೂ ಚೆನ್ನೈನ ಲಾ ಫರ್ಮ್ ಡಿ ಪೀಟರ್ ಎಲ್‌ಎಲ್‌ಪಿ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಬುಧವಾರ ಸಹಿ ಹಾಕಲಾಯಿತು.

ಬಾಲ ಚಿತ್ರಿಸಿದರೆ ಉಚಿತ ಮಜ್ಜಿಗೆ ಸ್ಪರ್ಧೆ

ತೋಟಗಾರಿಕೆ ಮೇಳದಲ್ಲಿದ್ದ ಪ್ರದರ್ಶನ ಮಳಿಗೆಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.

ಈ ಪೈಕಿ ಅಕ್ಷಯಕಲ್ಪ ಆರ್ಗ್ಯಾನಿಕ್ ಮಿಲ್ಕ್‌ ಹೆಸರಿನ ನವೋದ್ಯಮವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗೋವಿನ ಚಿತ್ರಕ್ಕೆ ಬಾಲ ಚಿತ್ರಿಸಿದವರಿಗೆ ಉಚಿತವಾಗಿ ಒಂದು ಲೋಟ ಮಜ್ಜಿಗೆ ನೀಡುವ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲು ಜನ ಮುಗಿಬಿದ್ದರು. ಹಲವರು ಸ್ಪರ್ಧೆಯಲ್ಲಿ ವಿಜೇತರಾಗಿ ಮಜ್ಜಿಗೆ ಸವಿದರು.

ನೀರಾ ಸೇವನೆಗೆ ಜನರ ಸಾಲು:ಮೇಳದ ಮಳಿಗೆಯೊಂದರಲ್ಲಿ 250 ಮಿ.ಲೀ ಆರೋಗ್ಯಕರ ನೀರಾವನ್ನು ₹50ರಂತೆ ಮಾರಾಟ ಮಾಡಲಾಗುತ್ತಿದೆ.

ನೀರಾ ಕುಡಿಯಲು ರೈತರು ಮಳಿಗೆ ಮುಂದೆ ಸಾಲುಗಟ್ಟಿ ನಿಂತಿದ್ದರು. ಪೇಯ ಕುಡಿದ ಬಳಿಕ ರುಚಿಗೆ ಮಾರುಹೋದರು.

‘ರೈಪ‍ನಿಂಗ್’ನಿಂದ ಒಂದೇ ದಿನಕ್ಕೆ ಹಣ್ಣು

ಮನೆ ಅಥವಾ ಅಂಗಡಿ ಗಳಲ್ಲಿ ಹಣ್ಣುಗಳನ್ನು ಸರಳವಾಗಿ ಒಂದೇ ದಿನದಲ್ಲಿ ಮಾಗಿಸುವ ‘ರೈಪನಿಂಗ್ ತಂತ್ರಜ್ಞಾನ’ ಈ ಬಾರಿಯ ಮೇಳದಲ್ಲಿ ಹೆಚ್ಚು
ಆಕರ್ಷಣೆಯಾಗಿತ್ತು.

‘ಹಣ್ಣು ಮಾಗಲು ಪ್ರತ್ಯೇಕವಾದ ವಾತಾವರಣ ಬೇಕು. ಹಾಗಾಗಿ, ಹೊದಿಕೆ ಮಾದರಿಯ ಜಾಗವನ್ನು ಮನೆ ಅಥವಾ ಖಾಲಿ ಜಾಗದಲ್ಲಿ ನಿರ್ಮಿಸಿಕೊಳ್ಳಬೇಕು. ಹೊದಿಕೆ ಒಳಗೆ ಎಥಿಲಿನ್ ಎಂಬ ರಾಸಾಯನಿಕ ಮಾತ್ರೆ ಇಟ್ಟರೆ, ಒಂದೇ ದಿನಕ್ಕೆ ಹಣ್ಣುಗಳು ಮಾಗಲು ಆರಂಭಗೊಳ್ಳುತ್ತವೆ’ ಎಂದು ಐಐಎಚ್ಆರ್‌ನ ಪ್ರಧಾನ ವಿಜ್ಞಾನಿ ಸೆಂಥಿಲ್ ಕುಮಾರ್ ವಿವರಿಸಿದರು.

‘ರಾಸಾಯನಿಕ ಬಳಕೆಯಿಂದ ಯಾವುದೇ ಸಮಸ್ಯೆ ಇಲ್ಲ. ಒಂದು ಟನ್ ಸಾಮರ್ಥ್ಯದ ಹಣ್ಣು ಮಾಗಿಸುವ ಸರಳ ರೈಪನಿಂಗ್ ತಂತ್ರಜ್ಞಾನ ಅಳವಡಿಸಿ ಕೊಳ್ಳಲು ಕೇವಲ ₹3,500 ಖರ್ಚಾ ಗಬಹುದು. ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು’ ಎಂದರು.

ಆನ್‌ಲೈನ್‌ ಗೋಷ್ಠಿಯಲ್ಲಿ 24 ಸಾವಿರ ರೈತರು ಭಾಗಿ

ರೈತರ ಸಮಸ್ಯೆಗಳನ್ನು ಪರಿಹರಿಸಲು ಸಂಸ್ಥೆ ಹಮ್ಮಿಕೊಂಡಿದ್ದ ಆನ್‌ಲೈನ್‌ ವಿಚಾರಗೋಷ್ಠಿಗಳಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಅಂಡಮಾನ್‌ ಮತ್ತು ನಿಕೋಬಾರ್‌ , ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ ಸೇರಿದಂತೆ ವಿವಿಧ ರಾಜ್ಯಗಳ 24 ಸಾವಿರ ರೈತರು ಭಾಗವಹಿಸಿದ್ದರು.

ಮಾವು, ಸೀಬೆ, ಪಪ್ಪಾಯ, ಬಾಳೆ, ದಾಳಿಂಬೆ, ಸೀತಾಫಲ, ಹಲಸು, ಮೆಣಸು, ಟೊಮೆಟೊ, ಅಣಬೆ ಮತ್ತು ಈರುಳ್ಳಿ ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಸಮಸ್ಯೆಗಳಿಗೆ ರೈತರು ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.

ತೋಟಗಳಲ್ಲಿ ಬೀಡುಬಿಟ್ಟ ಜನ; ಮೇಳದಲ್ಲಿ ಜನಜಂಗುಳಿ

ಹೆಸರಘಟ್ಟದ ಐಐಎಚ್‌ಆರ್‌ ಆವರಣದಲ್ಲಿ ನಡೆಯುತ್ತಿ ರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಬುಧವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಭೇಟಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳ ರೈತರು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮೇಳದಲ್ಲಿ ಹೆಚ್ಚಾಗಿ ಕಂಡುಬಂದರು.

ಮೇಳದ ಮೊದಲೆರಡು ದಿನಗಳಿಗೆ ಹೋಲಿಸಿದರೆ ಬುಧವಾರ ಭೇಟಿ ನೀಡಿದರ ಸಂಖ್ಯೆ ಏರಿಕೆ ಕಂಡಿತ್ತು. ಮೇಳದಲ್ಲಿ ಹೆಚ್ಚು ಜನ ಸೇರಿದ್ದರಿಂದ ಕೆಲವೆಡೆ ಅಂತರ ಕಾಯ್ದುಕೊಳ್ಳಲು ಸಮಸ್ಯೆಯಾಯಿತು.

ರೈತರು ಸುಡುಬಿಸಿಲನ್ನೂ ಲೆಕ್ಕಿಸದೆ, ಮೇಳದ ಪ್ರದರ್ಶನ ತಾಕುಗಳಲ್ಲಿ ಸಂಚರಿಸಿ ತೋಟಗಾರಿಕೆ ಬೆಳೆಗಳ ಮಾಹಿತಿ ಪಡೆದುಕೊಂಡರು. ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಳ್ಳಾಪುರ, ತುಮಕೂರು, ಬಳ್ಳಾರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಂದ ಕುಟುಂಬ ಸಮೇತರಾಗಿ ಜನ ಮೇಳಕ್ಕೆ ಬಂದಿದ್ದರು.

ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲ ಕೋಟೆ, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಗದಗ, ಕಲಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಮೇಳದಲ್ಲಿದ್ದರು.

***
ತೋಟಗಾರಿಕೆ ಇಲಾಖೆ ವತಿಯಿಂದ ತಿಂಗಳಿಗೊಮ್ಮೆ ಜಿಲ್ಲಾವಾರು ಮೇಳ ಆಯೋಜಿಸುವ ಕುರಿತು ಬಜೆಟ್‌ನಲ್ಲಿ ಅನುದಾನಕ್ಕೆ ಪ್ರಸ್ತಾಪಿಸಲಾಗುವುದು
- ಆರ್.ಶಂಕರ್, ತೋಟಗಾರಿಕೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT