ಶನಿವಾರ, ಸೆಪ್ಟೆಂಬರ್ 25, 2021
22 °C
ವೈದ್ಯಕೀಯ ಸೇವೆಯ ಆಧಾರದಲ್ಲಿ ಆಸ್ಪತ್ರೆಗಳ ಪಟ್ಟಿ ಸಿದ್ಧ

ಆಯುಷ್ಮಾನ್ ಸೇವೆ: ಕಿದ್ವಾಯಿಗೆ ಅಗ್ರ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿ ಉತ್ತಮ ಪ್ರದರ್ಶನ ಹಾಗೂ ಹೆಚ್ಚಿನ ರೋಗಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸಿದ ರಾಜ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಾಲಿನಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಅಗ್ರ ಸ್ಥಾನ ಪಡೆದುಕೊಂಡಿದೆ.

2020–21ನೇ ಸಾಲಿನಲ್ಲಿ ಈ ಯೋಜನೆಯಡಿ ಅಧಿಕ ಮಂದಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ ಆಸ್ಪತ್ರೆಗಳ ಪಟ್ಟಿಯನ್ನು ವಿವಿಧ ವಿಭಾಗಗಳಲ್ಲಿ ಆರೋಗ್ಯ ಇಲಾಖೆ ಸಿದ್ಧಪಡಿಸಿದೆ.

ಜಿಲ್ಲಾ ಆಸ್ಪತ್ರೆಗಳಲ್ಲಿ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಹುಬ್ಬಳ್ಳಿಯ ಕಿಮ್ಸ್, ತಾಲ್ಲೂಕು ಆಸ್ಪತ್ರೆಗಳಲ್ಲಿ ಕೊಪ್ಪಳದ ಗಂಗಾವತಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಸನದ ಹಿರೀಸಾವೆ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಜಯಪುರದ ವಂದಲ್ ಆಸ್ಪತ್ರೆ ಮೊದಲ ಸ್ಥಾನದಲ್ಲಿದೆ. ಈ ಆಸ್ಪತ್ರೆಗಳು ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿ ಕಳೆದ ಸಾಲಿನಲ್ಲಿ ಅತ್ಯಧಿಕ ಮಂದಿಗೆ ವೈದ್ಯಕೀಯ ಸೌಲಭ್ಯ ಒದಗಿಸಿವೆ.

ಇಲ್ಲಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ 8,676 ಮಂದಿಗೆ ಯೋಜನೆಯಡಿ ಸೇವೆ ನೀಡಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಆರ್) 4,199 ಮಂದಿಗೆ ಚಿಕಿತ್ಸೆ ಒದಗಿಸಿದೆ. ಎಸ್‌ಜೆಐಸಿಆರ್ ಮೈಸೂರು (3,415), ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ (2,699) ಹಾಗೂ ನಿಮ್ಹಾನ್ಸ್ (1,936) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿವೆ. 

ಜಿಲ್ಲಾ ಆಸ್ಪತ್ರೆಗಳ ಸಾಲಿನಲ್ಲಿ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ 347 ಕೋವಿಡ ರೋಗಿಗಳು ಸೇರಿದಂತೆ 6,511 ಮಂದಿಗೆ ಚಿಕಿತ್ಸೆ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ (6,112), ಕೋಲಾರದ ಎಸ್‌.ಎನ್‌.ಆರ್. ಜಿಲ್ಲಾ ಆಸ್ಪತ್ರೆ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ.

ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ ಹುಬ್ಬಳ್ಳಿಯ ಕಿಮ್ಸ್‌ 11,991 ರೋಗಿಗಳಿಗೆ ಸೇವೆ ಒದಗಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆ (11,680), ಹಾಸನದ ಶ್ರೀಚಾಮರಾಜೇಂದ್ರ ಆಸ್ಪತ್ರೆ/ ಹಿಮ್ಸ್ (11,572), ಚಾಮರಾಜನಗರದ ವೈದ್ಯಕೀಯ ಕಾಲೇಜು (8,585) ಹಾಗೂ ಮಂಡ್ಯದ ವೈದ್ಯಕೀಯ ಕಾಲೇಜು (7,588) ಮೊದಲ ಐದು ಸ್ಥಾನಗಳಲ್ಲಿವೆ.

25 ತಾಲ್ಲೂಕಾ ಆಸ್ಪತ್ರೆಗೆ ಸ್ಥಾನ: ತಾಲ್ಲೂಕು ಆಸ್ಪತ್ರೆಗಳ ಪಟ್ಟಿಯಲ್ಲಿ 25 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೊಪ್ಪಳದ ಗಂಗಾವತಿ ತಾಲ್ಲೂಕು ಆಸ್ಪತ್ರೆ 4,971 ಮಂದಿಗೆ ವೈದ್ಯಕೀಯ ಸೇವೆ ಒದಗಿಸಿದೆ. ಚಿತ್ರದುರ್ಗದ ಚಳ್ಳಕೆರೆ ಆಸ್ಪತ್ರೆ (4,279) ಹಾಗೂ ಶಿವಮೊಗ್ಗದ ಶಿಕಾರಿಪುರ ತಾಲ್ಲೂಕು ಆಸ್ಪತ್ರೆ (4,254) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ.

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 25 ಕೇಂದ್ರಗಳನ್ನು ಗುರುತಿಸಲಾಗಿದೆ. ಹಾಸನದ ಹರೀಸಾವೆ (2,005), ಚಾಮರಾಜನಗರದ ಕಬ್ಬಹಳ್ಳಿ (1,505) ಹಾಗೂ ಕೊಪ್ಪಳದ ಮುನಿರಾಬಾದ್ (1,294) ಸಮುದಾಯ ಆರೋಗ್ಯ ಕೇಂದ್ರ ಮೊದಲ ಮೂರು ಸ್ಥಾನಗಳಲ್ಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಜಯಪುರದ ವಂದಲ್ (647) ಮೊದಲ ಸ್ಥಾನದಲ್ಲಿದೆ. ಬಳ್ಳಾರಿಯ ಬಾಚಿಗೊಂಡನಹಳ್ಳಿ (612) ಹಾಗೂ ಕಲಬುರ್ಗಿಯ ಪಡಸಾವಳಿ (586) ಪ್ರಾಥಮಿಕ ಆರೋಗ್ಯ ಕೇಂದ್ರ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.