ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಟ್ರೊ ರವಿ ಜೇಬಿನಲ್ಲಿ ಸಚಿವರು: ಕಾಂಗ್ರೆಸ್ ಟೀಕೆ

Last Updated 6 ಜನವರಿ 2023, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಅತಿಥಿ ಗೃಹ ಕುಮಾರಕೃಪಾ ಸ್ಯಾಂಟ್ರೊ ರವಿ ಕೇಂದ್ರ ಕಚೇರಿ ಆಗಿದ್ದು ಹೇಗೆ? ಯಾರ ಕೃಪೆಯಿಂದ ಆತ ಅಲ್ಲಿ ಮೊಕ್ಕಾಂ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ’ ಎಂದು ಪ್ರಶ್ನಿಸಿರುವ ಕಾಂಗ್ರೆಸ್‌, ಸಚಿವರು, ಅಧಿಕಾರಿಗಳೆಲ್ಲ ಆತನ ಜೇಬಿನಲ್ಲಿದ್ದಾರೆ ಎಂದು ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ‘ಸ್ಯಾಂಟ್ರೋ ರವಿ ನನಗೆ ಪರಿಚಯವೇ ಇಲ್ಲ ಎನ್ನುವ ಬೊಮ್ಮಾಯಿಯವರೇ, ‘ಸಿಎಂ ನೇರ ಪರಿಚಯ ನನಗೆ’ ಎಂದು ರವಿ ಹೇಳುತ್ತಾರೆ. ನಿಮ್ಮ ಪುತ್ರ ಆತನಿಗೆ ಸ್ವೀಟ್ ಬ್ರದರ್ ಆಗಿರುವುದು ಹೇಗೆ’ ಎಂದು ಮುಖ್ಯಮಂತ್ರಿಯವರನ್ನು ಕೆಣಕಿದೆ.

‘ಪೊಲೀಸ್ ಅಧಿಕಾರಿಗಳೆಲ್ಲ ನನ್ನ ಕೈಯೊಳಗೆ ಇದ್ದಾರೆ ಎನ್ನುತ್ತಾರೆ ಸ್ಯಾಂಟ್ರೋ ರವಿ. ತನಿಖೆಗೆ ಕರೆದ ಪೊಲೀಸರಿಗೇ ಆವಾಜ್ ಹಾಕುತ್ತಾರೆ. ವರ್ಗಾವಣೆ ಮಾಡಿಸುವುದು ನನಗೆ ಲೀಲಾಜಾಲ ಎನ್ನುತ್ತಾರೆ. ಗೃಹ ಸಚಿವರೇ ಈ ಆತ್ಮವಿಶ್ವಾಸದ ಹಿಂದಿನ ಶಕ್ತಿಯಾಗಿದ್ದಾರಾ? ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡುತ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಇ.ಡಿ ಕಚೇರಿಗಳಿಗೆ ತಲುಪಿಲ್ಲವೇ? ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ? ಇ.ಡಿ ದಾಳಿ ಯಾವಾಗ’ ಎಂದೂ ಪ್ರಶ್ನಿಸಿದೆ.

‘ಅನೇಕ ಸಚಿವರು ಸ್ಯಾಂಟ್ರೋ ರವಿಯೊಂದಿಗೆ ಆಪ್ತ ಸಂಬಂಧ ಹೊಂದಿದ್ದಾರೆ. ಸಿ.ಡಿಗೆ ತಡೆಯಾಜ್ಞೆ ತಂದಿರುವುದಕ್ಕೂ ರವಿಗೂ ಸಂಬಂಧ ಇದೆಯಾ’ ಎಂದು ಕಾಂಗ್ರೆಸ್‌ ಹಂಗಿಸಿದೆ.

ಹೇಳಲು ಹಲವು ವಿಷಯಗಳಿವೆ, ಎಚ್ಚರ: ಎಚ್‌.ಡಿ.ಕುಮಾರಸ್ವಾಮಿ

ಬೀದರ್‌: ‘ಸ್ಯಾಂಟ್ರೊ ರವಿ ಜೊತೆ ರಾಜ್ಯ ಸರ್ಕಾರದ ಸಚಿವರು ಸಂಬಂಧವೇನು? ವರ್ಗಾವಣೆ ಬಗ್ಗೆ ಚರ್ಚಿಸುತ್ತಾರಾ? ಹೇಳಲು ಬಹಳ ವಿಷಯಗಳಿವೆ. ಎಚ್ಚರದಿಂದ ಇರಿ’ ಎಂದು ಜೆಡಿಎಸ್‌ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದಲ್ಲಿ ಶುಕ್ರವಾರ ಮೊಬೈಲ್‌ನಲ್ಲಿ ಸ್ಯಾಂಟ್ರೊ ರವಿಯ ಜೊತೆ ಸಚಿವ ಎಸ್‌.ಟಿ.ಸೋಮಶೇಖರ ಮಾತನಾಡುತ್ತಿರುವ ವಿಡಿಯೊವೊಂದನ್ನು ತೋರಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರವು ಹಣದ ದಂಧೆ ನಡೆಸುತ್ತಿದೆ. ನನ್ನನ್ನು ಕೆಣಕಿದ್ದಕ್ಕೆ ಈ ವಿಡಿಯೊ ಬಿಟ್ಟಿರುವೆ’ ಎಂದರು.

‘ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುತ್ತಿದ್ದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಆ ದಿನಗಳಲ್ಲಿ ಸರ್ಕಾರಿ ವಸತಿ ಗೃಹ ಸಿಗದ ಕಾರಣ ವಿಶ್ರಾಂತಿ ಪಡೆಯಲು ನಾನು ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುತ್ತಿದ್ದೆ’ ಎಂದರು.

4 ದಿನವಾದರೂ ‌ರವಿ ಬಂಧನವಿಲ್ಲ

ಪರಿಶಿಷ್ಟ ಜಾತಿಯ ಮಹಿಳೆಯನ್ನು ವಂಚಿಸಿ, ಹಲ್ಲೆ ನಡೆಸಿ, ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇರೆಗೆ ಕೆ.ಎಸ್‌.ಮಂಜುನಾಥ ಅಲಿಯಾಸ್‌ ಸ್ಯಾಂಟ್ರೊ ರವಿ ವಿರುದ್ಧ ಇಲ್ಲಿನ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದರೂ, ಇದುವರೆಗೂ ಬಂಧಿಸಿಲ್ಲ.

ಸಂತ್ರಸ್ತ ಮಹಿಳೆಯು ‘ಒಡನಾಡಿ’ ಸೇವಾ ಸಂಸ್ಥೆಯ ಆಶ್ರಯದಲ್ಲಿದ್ದು, ಪೊಲೀಸರು ಅವರಿಂದ ಮಾಹಿತಿ ಕಲೆ ಹಾಕಿದ್ದಾರೆ. ಈ ನಡುವೆ, ‘ನಿವೃತ್ತ ಐಎಎಸ್‌ ಅಧಿಕಾರಿ, ವಕೀಲರ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದ್ದು, ಅವರನ್ನು ಬಂಧಿಸಬೇಕು’ ಎಂದು ಒಡನಾಡಿ ಸೇವಾ ಸಂಸ್ಥೆ ಒತ್ತಾಯಿಸಿದೆ.

ಪ್ರಕರಣ ದಾಖಲಾಗಿ (ಜ.2ರಂದು) ನಾಲ್ಕು ದಿನಗಳಾದರೂ ಆರೋಪಿಯನ್ನು ಬಂಧಿಸದಿರುವುದಕ್ಕೆ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

‘ಆರೋಪಿಯು ಪ್ರಭಾವಿ ರಾಜಕಾರಣಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಾನೆ. ಹಿರಿಯ ಅಧಿಕಾರಿಗಳು ಎದುರು ಹಾಕಿಕೊಂಡು, ಕೆಳಹಂತದ ಅಧಿಕಾರಿಗಳು ತನಿಖೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ‘ಒಡನಾಡಿ’ ಸಂಸ್ಥಾಪಕ ಸ್ಟ್ಯಾನ್ಲಿ ಒತ್ತಾಯಿಸಿದರು. ‘ತನಿಖೆ ನೆಪದಲ್ಲಿ ಪ್ರಕರಣದ ದಿಕ್ಕು ತಪ್ಪಿಸಲಾಗುತ್ತಿದೆ. ಆರೋಪಿಯನ್ನು ಬಂಧಿಸಿ, ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ</p>

- ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT