ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಈದ್ಗಾ ಮೈದಾನ: ಗಣೇಶೋತ್ಸವ ನಿರ್ವಿಘ್ನ

ಅಂಜುಮನ್ ಸಂಸ್ಥೆ ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಪ್ರಧಾನಪೀಠ
Last Updated 31 ಆಗಸ್ಟ್ 2022, 4:46 IST
ಅಕ್ಷರ ಗಾತ್ರ

ಧಾರವಾಡ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಹಾಗೂ ಅನ್ಯ ಉದ್ದೇಶಕ್ಕೆ ನೀಡಬಾರದು ಎಂಬ ಅಂಜುಮನ್ ಸಂಸ್ಥೆಯ ಕೋರಿಕೆಗೆ ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ತೀರ್ಮಾನದ ವಿರುದ್ಧ ಅಂಜುಮನ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.

ಬೆಳಿಗ್ಗೆ ಅರ್ಜಿಯ ವಿಚಾರಣೆ ನಡೆಸಿದ ಪೀಠ,ಸೀಮಿತ ಅವಧಿಗೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಅಧಿಕಾರ ಹಾಗೂ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟಪಡಿಸಿತ್ತು.

ಈ ನಡುವೆ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಮಂಗಳವಾರ ಸಂಜೆ ಸುಪ್ರೀಂಕೋರ್ಟ್ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ಮರು ಪರಿಶೀಲನೆ ಕೋರಿ ಅರ್ಜಿದಾರರಾದ ಅಂಜುಮನ್ ಎ ಇಸ್ಲಾಂ ಸಂಸ್ಥೆ ಕೋರಿತು.

ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಮೇರೆಗೆ ಅರ್ಜಿಯನ್ನು ಮತ್ತೆ ತುರ್ತು ವಿಚಾರಣೆಗೆ ನ್ಯಾ.ಅಶೋಕ್ ಕಿಣಗಿ ಅವರು ಪರಿಗಣಿಸಿದರು. ಹೀಗಾಗಿ ಅರ್ಜಿಯ ವಿಚಾರಣೆ ರಾತ್ರಿ 10ಕ್ಕೆ ಆರಂಭಗೊಂಡಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ‘ಹುಬ್ಬಳ್ಳಿ ಈದ್ಗಾ ಮೈದಾನ ಹಕ್ಕು ಸಂಪೂರ್ಣವಾಗಿ ನಗರ ಪಾಲಿಕೆಯದ್ದಾಗಿದೆ. ಜಮೀನು ಮಾಲೀಕತ್ವದ ಕುರಿತು ಅರ್ಜಿದಾರ ಸಂಸ್ಥೆ ಮತ್ತು ಕರ್ನಾಟಕ ವಕ್ಫ್ ಬೋರ್ಡ್ ಸಲ್ಲಿಸಿದ್ದ ಸಿವಿಲ್ ಅರ್ಜಿಗಳನ್ನು ಸುಪ್ರೀ ಕೊರ್ಟ್ ತಿರಸ್ಕರಿಸಿದೆ. ಅಲ್ಲದೆ, ಈ ಭೂಮಿಯನ್ನು ಸಾರ್ವಜನಿಕರು ಬಳಸಿಕೊಳ್ಳಬಹುದು ಎಂದು 1991ರಲ್ಲಿ ಸಿವಿಲ್ ಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ. ಈ ಜಾಗವನ್ನು ಪೂಜಾ ಸ್ಥಳವಾಗಿದೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಅರ್ಜಿದಾರರು ಒದಗಿಸಿಲ್ಲ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

‘ಒಂದೊಮ್ಮೆ ಮುಸ್ಲಿಂ ಹಬ್ಬಗಳ ದಿನದಂದೇ ಗಣೇಶ ಆಚರಣೆಗೆ ಅವಕಾಶ ನೀಡಿದ್ದರೆ ಅರ್ಜಿದಾರರು ಅದನ್ನು ಪ್ರಶ್ನಿಸಬಹುದಿತ್ತು. ಅಂತಹ ಪರಿಸ್ಥಿತಿ ಸದ್ಯ ಇಲ್ಲ. ಜಾಗವನ್ನು ಭೋಗ್ಯ ನೀಡಿದ ಕಾರಣಕ್ಕೇ ಸ್ವತ್ತಿನ ಮೇಲೆ ಸಂಪೂರ್ಣ ಹಕ್ಕು ಅರ್ಜಿದಾರರು ಹೊಂದುವುದಿಲ್ಲ. ಪಾಲಿಕೆಯ ಮೇಯರ್ ನೇತೃತ್ವದ ಸಮಿತಿಯ ವರದಿ ಆಧರಿಸಿ ಆಯುಕ್ತರು ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಆ.31ರಿಂದ ಮೂರು ದಿನ ಅವಧಿಗೆ ಷರತ್ತಿನ ಅನುಮತಿ ನೀಡಿದ್ದಾರೆ. ಆದ್ದರಿಂದ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲವಾಗಿದೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ‘ಜಾಗ ಪಾಲಿಕೆಯದ್ದೇ ಆದರೂ ಇದೇ ಮೊದಲ ಬಾರಿಗೆ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಸದಸ್ಯ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ನ್ಯಾಯಾಲಯ ಪ್ರಕರಣವನ್ನು ತೀರ್ಮಾನಿಸಬೇಕು’ ಎಂದು ಕೋರಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಚಾಮರಾಪೇಟೆ ಈದ್ಗಾ ಮೈದಾನ ಮತ್ತು ಹುಬ್ಬಳ್ಳಿ ಈದ್ಗಾ ಮೈದಾನವು ಪ್ರಕರಣಗಳ ವಿಭಿನ್ನವಾಗಿದೆ. ಚಾಮರಾಜಪೇಟೆ ಪ್ರಕರಣದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಮತ್ತು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪುಗಳು ಈ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT