ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ: ಭೂಕುಸಿತ ಆಪತ್ತು ನಿಶ್ಚಿತ ಎಂದ ತಜ್ಞರ ಸಮಿತಿ

Last Updated 6 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗಲಿರುವ ಹುಬ್ಭಳ್ಳಿ– ಅಂಕೋಲಾ ರೈಲು ಯೋಜನೆಯ ಪ್ರಸ್ತಾವವನ್ನು ಈಗಿನ ಸ್ವರೂಪದಲ್ಲಿ ಒಪ್ಪಲು ಸಾಧ್ಯವೇ ಇಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಧಿಕ ಪ್ರಮಾಣದಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಇದರ ಕುರಿತು ರೈಲ್ವೆ ಇಲಾಖೆಯ ಪ್ರಸ್ತಾವದಲ್ಲಿ ಉಲ್ಲೇಖವೇ ಇಲ್ಲ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆಯ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರ ನೇತೃತ್ವದ ತಜ್ಞರ ಸಮಿತಿ ಹೇಳಿದೆ.

ಯೋಜನೆ ಹಾದು ಹೋಗುವ ಪ್ರದೇಶದ ಜನರನ್ನು ತಜ್ಞರ ಸಮಿತಿ ಭೇಟಿ ಮಾಡಿ ಅಹವಾಲು ಸ್ವೀಕರಿಸಿ ಪರಿಸರ ಸಚಿವಾಲಯಕ್ಕೆ 50 ಪುಟಗಳ ವರದಿ ಸಲ್ಲಿಸಿದೆ. ಈ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾಗಿದೆ.

‘ಭೂಕುಸಿತ ನಿಯಂತ್ರಣಕ್ಕೆ ಕೆಲವು ವೈಜ್ಞಾನಿಕ ಮಾದರಿಗಳು ನಮ್ಮ ಮುಂದೆ ಇವೆ. ಆದರೆ, ರೈಲ್ವೆ ಇಲಾಖೆಯ ಯೋಜನಾ ಪ್ರಸ್ತಾವನೆ ಯಲ್ಲಿ ಇವುಗಳ ಬಗ್ಗೆ ಉಲ್ಲೇಖಿಸಿಲ್ಲ. ಸುಸ್ಥಿರವಾದ ಹಾಗೂ ಅನುಷ್ಠಾನ ಯೋಗ್ಯವಾದ ಕ್ರಿಯಾಯೋಜನೆಯನ್ನು ರೈಲ್ವೆ ಇಲಾಖೆ ಸಿದ್ಧಪಡಿಸಬೇಕು ಎಂದೂ ಸಮಿತಿ ಸೂಚಿಸಿದೆ. ರೈಲು ಮಾರ್ಗ ನಿರ್ಮಾಣದ ವೇಳೆ ಭೂಕುಸಿತ ಉಂಟಾಗದಂತೆ 12 ಬಗೆಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದೂ ಸಮಿತಿ ಹೇಳಿದೆ.

‘161 ಕಿ.ಮೀ. ಉದ್ದದ ರೈಲು ಮಾರ್ಗವನ್ನು ಪ್ರಸ್ತಾಪಿಸಲಾಗಿದ್ದು, ಅದರಲ್ಲಿ 108 ಕಿ.ಮೀ. ದಟ್ಟ ಹಾಗೂ ವೈವಿಧ್ಯಮಯ ಅರಣ್ಯದಲ್ಲಿ ಹಾದು ಹೋಗಲಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ದಾಂಡೇಲಿ ಹಾಗೂ ಕಾರವಾರ ತಾಲ್ಲೂಕಿನ 32 ಪ್ರದೇಶಗಳಲ್ಲಿ ಆಗಾಗ ಭೂಕುಸಿತಗಳು ಸಂಭವಿಸುತ್ತಿವೆ. ಜಿಲ್ಲೆಯ ಶೇ 3.7ರಷ್ಟು ಪ್ರದೇಶದಲ್ಲಿ ಭೂಕುಸಿತದ ಸಾಧ್ಯತೆ ದಟ್ಟವಾಗಿದೆ. ಶೇ 25.8 ಪ್ರದೇಶದಲ್ಲಿ ಭೂಕುಸಿತದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಸಮಿತಿ ಬೊಟ್ಟು ಮಾಡಿದೆ.

ರೈಲು ಮಾರ್ಗ ನಿರ್ಮಾಣದ ಸಂದರ್ಭದಲ್ಲಿ ಅರಣ್ಯ ನಾಶ ಕಡಿಮೆ ಮಾಡಲು ಯೋಜನಾ ಸ್ವರೂಪದಲ್ಲಿ ಹಲವು ಸಲ ಬದಲಾವಣೆ ಮಾಡಲಾಗಿದೆ. ಯೋಜನೆಗೆ ಅರಣ್ಯ ಬಳಕೆ ಪ್ರಮಾಣ ಕಡಿಮೆ ಮಾಡಿ ಸುರಂಗಗಳು ಹಾಗೂ ಸೇತುವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಇಷ್ಟೆಲ್ಲ ಬೆಳವಣಿಗೆ ನಡೆದ ಬಳಿಕವೂ, ಯೋಜನೆ ಅನುಷ್ಠಾನದ ವೇಳೆ ಅರಣ್ಯ ನಾಶ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಆಗಲಿದೆ ಎಂದು ತಜ್ಞರ ಸಮಿತಿ ಎಚ್ಚರಿಸಿದೆ.

ಸುರಕ್ಷಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ರೈಲ್ವೆ ಸುರಂಗಗಳು ಕಾಡುಪ್ರಾಣಿಗಳಿಗೆ ಆಪತ್ತು ತಂದೊಡ್ಡಬಹುದು. ಬೇಸಿಗೆಯಲ್ಲಿ ತಣ್ಣನೆಯ ಪರಿಸರ ಅರಸಿ ಹುಲಿ, ಚಿರತೆ ಸೇರಿದಂತೆ ವನ್ಯಜೀವಿಗಳು ರೈಲಿನ ಸುರಂಗದೊಳಗೆ ಬರುತ್ತವೆ. ಈ ಸಂದರ್ಭದಲ್ಲಿ ಅವುಗಳು ರೈಲುಗಳಿಗೆ ಸಿಲುಕಿ ಮೃತಪಡುವ ಸಾಧ್ಯತೆ ಹೆಚ್ಚು. ಮಧ್ಯಪ್ರದೇಶದಲ್ಲಿ ಇಂತಹ ಘಟನೆ ನಡೆದಿದೆ. ಯೋಜನೆಯಿಂದ ವನ್ಯಜೀವಿಗಳ ಮೇಲಾಗುವ ಪರಿಣಾಮದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ ಮುಂದಿನ ಹೆಜ್ಜೆ ಇಡಬೇಕು ಎಂದು ಸಮಿತಿ ಕಿವಿಮಾತು ಹೇಳಿದೆ.

‘ರೈಲ್ವೆ ಹಳಿಗಳ ನಿರ್ಮಾಣಕ್ಕೆ 594 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ. ಯೋಜನೆ ಕಾರ್ಯರೂಪಕ್ಕೆ ತರಲು ರಸ್ತೆಗಳ ನಿರ್ಮಾಣ ಸೇರಿದಂತೆ ಸುಮಾರು 1 ಸಾವಿರ ಹೆಕ್ಟೇರ್ ಅರಣ್ಯ ನಷ್ಟವಾಗಲಿದೆ. ಇದು ಪಶ್ಚಿಮ ಘಟ್ಟದಲ್ಲಿ ಅಪರೂಪದ ಜೀವ ಸಂಕುಲಗಳ ನಾಶಕ್ಕೆ ಕಾರಣವಾಗುವ ಜತೆಗೆ ವನ್ಯಜೀವಿಗಳ ಸಂಚಾರ ಪಥ ನಾಶಪಡಿಸಲಿದೆ’ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.

2022ರ ಜೂನ್‌ನಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 68ನೇ ಸಭೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿ, ಸ್ಥಳದ ಸಮೀಕ್ಷೆ ಮಾಡಿ ಅರಣ್ಯ ಹಾಗೂ ವನ್ಯಜೀವಿಗಳ ಮೇಲಾಗುವ ಪರಿಣಾಮದ ಪರಿಶೀಲನೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಲಾಗಿತ್ತು.

‘ಈ ಯೋಜನೆಗಾಗಿ 594 ಹೆಕ್ಟೇರ್‌ ಅರಣ್ಯ ಭೂಮಿ ಬಳಕೆಯಾಗಲಿದೆ. ಪಶ್ಚಿಮಘಟ್ಟದಲ್ಲೇ ಸುಮಾರು 2 ಲಕ್ಷ ಮರಗಳ ಹನನಕ್ಕೆ ಕಾರಣವಾಗುವ ಈ ಯೋಜನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿ ವನ್ಯಜೀವಿ ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT