ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕರಿಸಬಹುದಾದ ಇಂಧನ ಉತ್ಪಾದನೆ-ಕರಾವಳಿಯಲ್ಲಿ ಭಾರಿ ಹೂಡಿಕೆ: ಬೊಮ್ಮಾಯಿ  

Last Updated 19 ನವೆಂಬರ್ 2022, 6:47 IST
ಅಕ್ಷರ ಗಾತ್ರ

ಮಂಗಳೂರು: ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಕಡಲನೀರಿನಿಂದ ಅಮೋನಿಯಾ ಉತ್ಪಾದನೆ ಸೇರಿದಂತೆ ಕರಾವಳಿಯಲ್ಲಿ ₹1.5ಲಕ್ಷ ಕೋಟಿಯಿಂದ ₹ 2 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು.

ಹಸಿರು ಯೋಜನೆ:ಹಸಿರು ಇಂಧನ ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ತಯಾರಿ ನಡೆಸಲಾಗಿದೆ. ಈಗಾಗಲೇ ಮೂರು ನವೀಕರಿಸಬಹುದಾದ ಇಂಧನ ಕಂಪೆನಿಗಳೊಂದಿಗೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಬಹಳ ವೇಗದಲ್ಲಿ ಕೆಲಸಗಳಾಗುತ್ತಿದ್ದು, ಮಾರ್ಚ್ ಏಪ್ರಿಲ್ ವೇಳೆಗೆ ಕೆಲಸ ಪ್ರಾರಂಭ ಮಾಡುವುದಾಗಿ 2-3 ಕಂಪನಿಗಳು ಹೇಳಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರಾವಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಹೈಡ್ರೋಜನ್ ಹಾಗೂ ಅಮೋನಿಯಾ ಉತ್ಪಾದನೆಯ ಎರಡು ಪ್ರಮುಖ ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬರಲಿದ್ದು, ಗಲ್ಫ್ ದೇಶದಲ್ಲಿ ಮತ್ತು ಮಂಗಳೂರಿನಲ್ಲಿ ತಲೆ ಎತ್ತಲಿವೆ. ಮಂಗಳೂರಿನ ಆಸುಪಾಸಿನಲ್ಲಿ ಕಡಲ ನೀರಿನಿಂದ ಅಮೋನಿಯಾ ತಯಾರಿಸುವ ಪ್ರಮುಖ ಘಟ್ಟಗಳು ಬರಲಿವೆ. ನವೀಕರಿಸಬಹುದಾದ ಇಂಧನ ಘಟಕಗಳಿಗೆ ಅಗತ್ಯವಿರುವ ಇಂಧನವನ್ನೂ ನವೀಕರಿಸಬಹುದಾದ ಸೌರ ಹಾಗೂ ಗಾಳಿ ಯಂತ್ರಗಳಿಂದಲೇ ಪಡೆಯಲಾಗುವುದು. ಸಂಪೂರ್ಣವಾಗಿ ಹಸಿರು ಯೋಜನೆ ಇದಾಗಲಿದೆ ಎಂದರು.

ಉದ್ಯೋಗ ಸೃಷ್ಟಿ:ನೇರ ಹಾಗೂ ಪರೋಕ್ಷವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು ಕರಾವಳಿ ಭಾಗದ ಯುವಕರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು.ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿ ನಿರಂತರವಾಗಿ ಮಳೆ ಬಂದಿದ್ದರಿಂದ ತಡವಾಗಿದೆ. ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಲಿದ್ದೇನೆ.

ಈ ವಾರದಲ್ಲಿ ಅದಕ್ಕೆ ಪೂರಕವಾಗಿ ಇಡೀ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಭೆ ಕರೆಯಲಾಗುವುದು. ಆದ್ಯತೆ ಮೇರೆಗೆ ಮಂಗಳೂರು- ಬೆಂಗಳೂರು ಹೆದ್ದಾರಿ ದುರಸ್ತಿ ಕೆಲಸಗಳಾದ ಸುರಂಗ ಮಾರ್ಗ, ವೈಟ್ ಟಾಪಿಂಗ್ ಮುಂತಾದ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಅಲ್ಪಾವಧಿ ಕಾಮಗಾರಿಯಲ್ಲಿ ರಸ್ತೆಯನ್ನು ಬಳಕೆಗೆ ಯೋಗ್ಯವಾಗಿಸಲು ಕ್ರಮ ಕೈಗೊಳ್ಳಲಾಗುವುದು‌ ಶಿರಾಡಿ ಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತದಾರರ ಪರಿಷ್ಕರಣೆ:ಮತದಾರರ ಪರಿಷ್ಕರಣೆ ಪ್ರತಿ ವರ್ಷ ಹಾಗೂ ಚುನಾವಣೆ ಸಂದರ್ಭದಲ್ಲಿ ಮಾಡಲಾಗುತ್ತದೆ. ಚುನಾವಣಾ ಆಯೋಗದ ನಿರಂತರ ಪ್ರಕ್ರಿಯೆಯಾಗಿದೆ ಎಂದರು.ಈ ಬಗ್ಗೆ ವಿರೋಧ ಪಕ್ಷದವರು ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಎಲ್ಲದ್ದಕ್ಕೂ ಅವರು ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಾರೆ. ಅವರು ಅಧಿಕಾರದಲ್ಲಿದ್ದಾಗ ಬಿಡಿಎ ವಿಚಾರದಲ್ಲಿ ನ್ಯಾಯಾಂಗ ತನಿಖೆಯಾದಾಗ ಅದರಿಂದ ಪಾರಾಗಲು ಅನುಕೂಲವಾಯಿತು. ಶೀಘ್ರವಾಗಿ ಅಪರಾಧಿಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT