ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ವಿ.ವಿ.ಗೆ ಯಲಹಂಕದಲ್ಲಿ 100 ಎಕರೆ: ನಾರಾಯಣಗೌಡ

Last Updated 26 ಏಪ್ರಿಲ್ 2022, 11:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರಥಮ ಕ್ರೀಡಾ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಯಲಹಂಕದಲ್ಲಿ 100 ಎಕರೆ ಜಮೀನು ಗುರುತಿಸಲಾಗಿದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 65 ಎಕರೆಯನ್ನು ಈಗಾಗಲೇ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇನ್ನೂ 35 ಎಕರೆ ಸ್ವಾಧೀನಕ್ಕೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ₹504 ಕೋಟಿ ಅನುದಾನ ನೀಡಲಾಗಿದೆ. ಪಾಠದ ಜೊತೆಗೆ ಆಟವೂ ನಡೆಯಬೇಕು. ಪ್ರತಿಯೊಂದು ಶಾಲೆಯಲ್ಲಿ 1 ರಿಂದ ಒಂದೂವರೆ ಗಂಟೆ ಆಟ ಆಡಿಸಬೇಕು. 8 ಸಾವಿರ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದ್ದು, ಅದನ್ನು ಭರ್ತಿ ಮಾಡಲು ಚರ್ಚೆ ನಡೆದಿದೆ ಎಂದರು.

ಅಮೃತದತ್ತು ಯೋಜನೆಯಡಿ 75 ಮಕ್ಕಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಲು ಯೋಜನೆ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ನೆರವು ನೀಡುತ್ತಿವೆ. 25 ಗ್ರಾಮೀಣ ಮಕ್ಕಳಿಗೆ ಚೆನ್ನೈ ಮತ್ತು ಆಂಧ್ರದಲ್ಲಿ ಕೇವಲ ಒಂದು ತಿಂಗಳ ತರಬೇತಿ ನೀಡಿದ್ದರಿಂದ ಅವರು ಸ್ವರ್ಣ ಪದಕ ಪಡೆದಿರುವುದನ್ನು ಗುರುತಿಸಿದ್ದೇವೆ ಎಂದು ಹೇಳಿದರು.

ತುಮಕೂರಿನಲ್ಲಿ ₹4.5 ಕೋಟಿ ವೆಚ್ಚದಲ್ಲಿ ದೊಡ್ಡ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರವೂ ಇದಕ್ಕೆ ಅನುದಾನ ನೀಡಿದೆ. ಬೆಂಗಳೂರು ಮತ್ತು ಮಂಡ್ಯದಲ್ಲಿ ಮಕ್ಕಳ ಕ್ರೀಡಾ ಸಾಮರ್ಥ್ಯ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಎಲ್ಲ ಜಿಲ್ಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು. ಈಗಾಗಲೇ 10 ರಿಂದ 15 ಹಾಸ್ಟೆಲ್‌ಗಳು ಆರಂಭಗೊಂಡಿವೆ. ಈಜುಕೊಳ ನಿರ್ವಹಣೆ, ಕ್ರೀಡಾ ಸೌಲಭ್ಯ ನೀಡಲು ಖಾಸಗಿ–ಸಾರ್ವಜನಿಕ ಸಹಭಾಗಿತ್ವವನ್ನು ಬಳಸಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT