ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಎಡವೂ ಅಲ್ಲ, ಬಲವೂ ಅಲ್ಲ, ಕನ್ನಡ ಪಂಥೀಯ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

ಪುರಪ್ರವೇಶ ಮಾಡಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ
Last Updated 5 ಜನವರಿ 2023, 15:51 IST
ಅಕ್ಷರ ಗಾತ್ರ

ಹಾವೇರಿ: ಕನ್ನಡವು ನಮ್ಮ ತಾಯಿ ಭಾಷೆಯಾಗಿದೆ. ನಮ್ಮೆದೆಗೆ ನಾಲ್ಕಕ್ಷರಗಳು ಬಿದ್ದರೆ ಬದುಕು ಬಂಗಾರವಾಗಲಿದೆ. ಜ್ಞಾನದ ಬೆಳಕಿನೆಡೆಗೆ ಹೋಗಲು ಸಾಧ್ಯವಾಗಲಿದೆ. ನಾನು ಎಡವೂ ಅಲ್ಲ, ಬಲವೂ ಅಲ್ಲ, ಕನ್ನಡ ಪಂಥೀಯ ಎಂದು ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ತಿಳಿಸಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಲೇಖಕ ಪುರುಷೋತ್ತಮ ಬಿಳಿಮಲೆ ಅವರ ಬಗ್ಗೆ ತಮಗೆ ಹೆಮ್ಮೆ ಮತ್ತು ಗೌರವ ಇದೆ. ಪರ್ಯಾಯ ಸಾಹಿತ್ಯ ಸಮಾವೇಶವಿರಲಿ, ಇನ್ಯಾವುದೇ ಕಾರ್ಯಕ್ರಮವಿರಲಿ ಅದನ್ನು ಮಾಡಲು ಅವರಿಗೆ ಎಲ್ಲ ರೀತಿಯ ಹಕ್ಕಿದೆ. ಭಿನ್ನಾಭಿಪ್ರಾಯ ಹೊಂದಿದವರು ಸಹ ನಮ್ಮೊಂದಿಗೆ ಬರಬೇಕು. ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಬೇಕು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿ, ಅವನ್ನು ವೇದಿಕೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ನಾನು ಮನವಿ ಮಾಡುತ್ತೇನೆ ಎಂದರು.

ವ್ಯಕ್ತಿತ್ವ ಮಾರಿಕೊಂಡ ಹಾಗೆ

ಬೆಳಗಾವಿ ನಮ್ಮದು ಅನ್ನುವ ಮರಾಠಿ ಜನರ ತಪ್ಪು ತಿಳಿವಳಿಕೆ ಕಂಡು ಅವರಿಗೆ ತಿಳಿ ಹೇಳಬೇಕು ಅನಿಸುತ್ತದೆ. ಕನ್ನಡಿಗರ ನೆಲವಾಗಿರುವ ಬೆಳಗಾವಿಯನ್ನು ಬಿಟ್ಟುಕೊಟ್ಟರೆ ನಮ್ಮ ವ್ಯಕ್ತಿತ್ವವನ್ನು ಮಾರಿಕೊಂಡ ಹಾಗೆ ಎಂದು ಗಡಿ ತಗಾದೆಯ ಬಗೆಗಿನ ತಮ್ಮ ನಿಲುವನ್ನು ಪ್ರಕಟಿಸಿದರು.

ಕೇಂದ್ರದಿಂದ ಅನುದಾಯ ತರಲಿ

ಕಾಸರಗೋಡು ಕೇರಳ ಗಡಿಯ ಶಾಲೆಗಳಲ್ಲಿ ಕನ್ನಡ ಭಾಷಾ ವಿಷಯವಿದೆ. ಆದರೆ, ಅಲ್ಲಿ ಕನ್ಮಡ ಬೋಧಿಸಲು ಕನ್ನಡ ಅಧ್ಯಾಪಕರಿಲ್ಲದಂತಾಗಿದೆ. ತಮಿಳುನಾಡು ರಾಜ್ಯದಲ್ಲಿ ಶಾಸ್ತ್ರೀಯ ಭಾಷೆಗಾಗಿ ಅಲ್ಲಿನ ಸಂಸದರು ಕೇಂದ್ರದಿಂದ ಕೋಟಿಗಟ್ಟಲೇ ಅನುದಾನ ತಂದಿರುವ ಉದಾಹರಣೆ ನಮ್ಮ ಕಣ್ಮುಂದಿದೆ. ಕನ್ನಡಕ್ಕೆ ಸಹ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಅಂದರೆ ಅದು ನಮ್ಮ ಘನತೆಯೇ ಆಗಿದೆ. ಹೀಗಾಗಿ ಕೇಂದ್ರದಿಂದ ಅನುದಾನ ತರುವ ಕಾರ್ಯವನ್ನು ರಾಜ್ಯದ ಸಂಸದರು ಸಹ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ನಾನು ಬರಹ ಆರಂಭಿಸಿ 6 ದಶಕಗಳೇ ಕಳಿದಿವೆ. ದೊಡ್ಡರಂಗೇಗೌಡ ಒಳ್ಳೆಯದಕ್ಕಾಗಿ ಹೋರಾಡುತ್ತಾನೆ, ಒಳ್ಳೆಯದರ ಪರ ಇರುತ್ತಾನೆ. ಮಾತೃಭಾಷೆಯ ಮೂಲಕವೇ ಕಲಿಕೆ ಆರಂಭವಾಗಬೇಕು ಎನ್ನುವ ವಿಚಾರಕ್ಕೆ ತಮ್ಮ ಸಹಮತವೂ ಇದೆ ಎಂಬುದಾಗಿ ತಿಳಿಸಿದ ದೊಡ್ಡರಂಗೇಗೌಡ ಅವರು, ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಏಳನೇ ತರಗತಿವರೆಗೆ ಶಿಕ್ಷಣ ನೀಡುವಂತಹ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡಿಗರು ಹೃದಯವಂತರು, ಪರಾಕ್ರಮಿಗಳು, ಪ್ರೀತಿ ಉಳ್ಳವರು. ತಮ್ಮ ಬರೆಹ, ಚಿಂತನೆಯಲ್ಲಿ ಇದನ್ನೇ ತಾವು ಅಭಿವ್ಯಕ್ತಿಸಿದ್ದಾಗಿ ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT