ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆಗೆ ತೆರಳಿ ಆಮ್ಲಜನಕ ತರುವೆ: ನಾರಾಯಣಗೌಡ

ಸರ್ಕಾರ ನಮ್ಮನ್ನು ಉಳಿಸುವುದಿಲ್ಲ, ತಿಥಿ ಮಾಡುತ್ತದೆ; ಶಾಸಕ ಸಿ.ಎಸ್‌.ಪುಟ್ಟರಾಜು ಆರೋಪ
Last Updated 3 ಮೇ 2021, 12:03 IST
ಅಕ್ಷರ ಗಾತ್ರ

ಮಂಡ್ಯ: ‘ಸೋಮವಾರ ಸಂಜೆಯವರೆಗೆ ಮಾತ್ರ ಆಮ್ಲಜನಕ ಸಾಕಾಗಲಿದೆ. ರಾತ್ರಿ, ನಾಳೆಗೆ ಕೊರತೆಯಾಗಲಿದ್ದು ನಾನು ಖುದ್ದಾಗಿ ಮೈಸೂರಿನ ಕಾರ್ಖಾನೆಗೆ ತೆರಳಿ ಆಮ್ಲಜನಕ ತರುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸೋಮವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಆಮ್ಲಜನಕಕ್ಕೆ ದೊಡ್ಡ ಕೊರತೆ ಉಂಟಾಗಿದ್ದು ಚಾಮರಾಜನಗರದ ಸ್ಥಿತಿ ಮಂಡ್ಯಕ್ಕೆ ಬರಬಾರದು. ಆಮ್ಲಜನಕ ಇಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕಾರ್ಖಾನೆಗೆ ತರಳಿ ಎಷ್ಟು ಸಿಗುತ್ತೋ ಅಷ್ಟನ್ನು ಕಳುಹಿಸುತ್ತೇನೆ. ಮೈಸೂರಿನಲ್ಲೇ ಉಳಿದು ಮಂಡ್ಯ ಜಿಲ್ಲೆಗೆ ಆಮ್ಲಜನಕ ಪೂರೈಕೆ ಮಾಡುತ್ತೇನೆ’ ಎಂದರು.

‘ಎಲ್ಲಾ ಜಿಲ್ಲೆಗಳಲ್ಲೂ ಆಮ್ಲಜನಕದ್ದೇ ದೊಡ್ಡ ಸಮಸ್ಯೆ ಉಂಟಾಗಿದೆ, ಎಲ್ಲೂ ಸಿಗುತ್ತಿಲ್ಲ. ಆಮ್ಲಜನಕ ಕೊರತೆಯಿಂದ ಜಿಲ್ಲೆಯಲ್ಲಿ ಯಾವ ರೋಗಿಯೂ ಸಾಯಬಾರದು. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತೇನೆ, ಅಧಿಕಾರಿಗಳ ಜೊತೆ ನಿಂತು ಕೆಲಸ ಮಾಡುತ್ತೇನೆ’ ಎಂದರು.

ನಮ್ಮೆಲ್ಲರ ತಿಥಿ ಆಗುತ್ತೆ: ಪತ್ರಿಕಾಗೋಷ್ಠಿ ನಡೆಸಿದ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು, ಸೋಮವಾರ ಆಮ್ಲಜನಕ ಬಾರದಿದ್ದರೆ ಚಾಮರಾಜನಗರ ಸ್ಥಿತಿ ಮಂಡ್ಯ ಜಿಲ್ಲೆಗೂ ಬರುತ್ತದೆ. ಸರ್ಕಾರ ನಮ್ಮನ್ನು ಉಳಿಸುತ್ತದೆ ಎಂಬ ನಂಬಿಕೆ ಇಲ್ಲ, ಸರ್ಕಾರವನ್ನು ನಂಬಿದರೆ ನಮ್ಮ ತಿಥಿ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಿದಾಗ ಸೋಮವಾರ ಮಧ್ಯಾಹ್ನದೊಳಗೆ ಆಮ್ಲಜನಕ ಪೂರೈಸುವುದಾಗಿ ತಿಳಿಸಿದ್ದರು. ಸಂಜೆಯೊಳಗೂ ಬಾರದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ. ಮೈಸೂರಿಗೆ ಬೇಕಾಗುಷ್ಟು ಇಟ್ಟುಕೊಂಡು ಉಳಿದಿದ್ದನ್ನು ಮಂಡ್ಯ ಸೇರಿ ಇತರ ಜಿಲ್ಲೆಗಳಿಗೆ ತಕ್ಷಣವೇ ಪೂರೈಸಬೇಕು’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಆಮ್ಲಜನಕ ಇಲ್ಲ. ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿ ಒಂದು ಹೇಳುತ್ತಾನೆ, ಆರೋಗ್ಯ ಮಂತ್ರಿ ಇನ್ನೊಂದು ಹೇಳುತ್ತಾನೆ’ ಎಂದು ಏಕವಚನದಲ್ಲಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT