ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಗೂ ನನ್ನದೇ ನಾಯಕತ್ವ: ಬಿ.ಎಸ್‌.ಯಡಿಯೂರಪ್ಪ

Last Updated 30 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಎರಡು ವರ್ಷದ ನಂತರ 130 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸವಾಲು ನನ್ನ ಮುಂದೆ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ವರಿಷ್ಠರು ಸೂಚಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುವೆ’ ಎಂದು ತಿಂಗಳ ಹಿಂದಷ್ಟೇ ಹೇಳಿದ್ದ ಯಡಿಯೂರಪ್ಪ, ‘ಇ‌ನ್ನೂ ಒಳ್ಳೆಯ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನಗಳನ್ನು ಬರುವಂತಹ ಎರಡು ವರ್ಷಗಳಲ್ಲಿ ಮಾಡಬೇಕಾಗಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಈಗಿನಿಂದಲೇ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತೇನೆ ಎಂದು ಕಾರ್ಯಕರ್ತರಿಗೆ, ರಾಜ್ಯದ ಜನರಿಗೆ ಭರವಸೆ ನೀಡುತ್ತೇನೆ’ ಎಂದು ದಿಢೀರ್ ಹೇಳಿಕೆ ನೀಡಿರುವುದು ಜಿಜ್ಞಾಸೆಗೆ ಗ್ರಾಸವಾಗಿದೆ.

ರಾಜಭವನಕ್ಕೆ ಬುಧವಾರ ಸಂಜೆ ಭೇಟಿ ನೀಡಿದ್ದ ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್ಲಿಂದ ತಮ್ಮ ಮನೆಗೆ ಹಿಂತಿರುಗುವ ಮುನ್ನ ರಾಜಭವನದ ಎದುರು ಸುದ್ದಿಗಾರರ ಜತೆ ಮಾತನಾಡಿದರು.

ನಾಯಕತ್ವ ಬದಲಾವಣೆ ವಿಷಯದ ಗೊಂದಲ ಬಿಜೆಪಿಯಲ್ಲಿ ಇನ್ನೂ ಬಗೆಹರಿದಿಲ್ಲ. ‘ಪರೀಕ್ಷೆ ಬರೆದಿದ್ದು, ವಾದ ವಿವಾದ ಮುಗಿದಿದೆ, ಫಲಿತಾಂಶವಷ್ಟೇ ಬಾಕಿ ಇದೆ’ ಎಂದು ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಸಿ.ಪಿ. ಯೋಗೇಶ್ವರ್ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಈ ವಿದ್ಯಮಾನಗಳ ಮಧ್ಯೆಯೇ ‘ಮುಂದಿನ ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ’ ಎಂದು ಅವರ ಮಗ ಬಿ.ವೈ. ವಿಜಯೇಂದ್ರ ಬುಧವಾರ ಬೆಳಿಗ್ಗೆಯಷ್ಟೇ ಹೇಳಿದ್ದರು.

ಈ ರಾಜಕೀಯ ಹೇಳಿಕೆಗಳ ಮಧ್ಯೆಯೇ ಯಡಿಯೂರಪ್ಪ, ಮುಂದಿನ ಚುನಾವಣೆಯ ನಾಯಕತ್ವವೂ ತಮ್ಮದೇ ಎಂದು ಹೇಳಿರುವುದು ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗೂ ಕಾರಣವಾಗಿದೆ. ಹೀಗೆ ಹೇಳುವ ಮೂಲಕ ‘ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಅವರು ವರಿಷ್ಠರಿಗೆ ರವಾನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಬಿಜೆಪಿಯವರೇ ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ರಮೇಶ ಜಾರಕಿಹೊಳಿ ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಅವರು ಹೇಳಿದ್ದೆಲ್ಲವನ್ನೂ ಮಾಧ್ಯಮಗಳಲ್ಲಿ ಓದಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದ್ದೇನೆ’ ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಷಯದಲ್ಲಿ ಗೊಂದಲ ಮುಂದುವರಿದಿದೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಕೈ ಮುಗಿದು ಹೊರಟೇ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT