ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಸಿಂಹಾಸನ, ಕುಟುಂಬಕ್ಕೆ ನಮಿಸುವೆ: ಸುಧಾ ಮೂರ್ತಿ

ಇನ್ಫೊಸಿಸ್ ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿಕೆ *ಸಪ್ನ ಬುಕ್ ಹೌಸ್‌ನಿಂದ ಪುಸ್ತಕ ಜಾತ್ರೆ ಆಚರಣೆ
Last Updated 1 ನವೆಂಬರ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಭಾಷೆಗೆ ಮೈಸೂರು ಮಹಾರಾಜರು ಹಾಕಿದ ಭದ್ರ ಅಡಿಪಾಯದ ಮೇಲೆ ನಾವಿಂದು ಕಟ್ಟಡ ಕಟ್ಟುತ್ತಿದ್ದೇವೆ.ಮೈಸೂರು ಮಹಾರಾಜರು ಇರದಿದ್ದರೆ ಕನ್ನಡ ಭಾಷೆಯೇ ಇರುತ್ತಿರಲಿಲ್ಲ. ಆದ್ದರಿಂದಮೈಸೂರು ರತ್ನ ಸಿಂಹಾಸನ ಹಾಗೂ ಮೈಸೂರು ಮಹಾರಾಜರ ಕುಟುಂಬದವರಿಗೆ ನಾನು ನಮಿಸುತ್ತೇನೆ’ ಎಂದು ಇನ್ಫೊಸಿಸ್ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ ತಿಳಿಸಿದರು.

ಅವರು ಇತ್ತೀಚೆಗೆರಾಜಮಾತೆ ಪ್ರಮೋದಾ ದೇವಿ ಅವರ ಪಾದಕ್ಕೆ ನಮಸ್ಕಾರ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಪ್ನಾ ಬುಕ್ ಹೌಸ್ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪುಸ್ತಕ ಜಾತ್ರೆಗೆ ಚಾಲನೆ ನೀಡಿ, ಘಟನೆ ಬಗ್ಗೆ ಪರೋಕ್ಷವಾಗಿ ಸ್ಪಷ್ಟನೆ ನೀಡಿದರು. ‘ಮೈಸೂರು ಮಹಾರಾಜರು ಕಟ್ಟಿದ ಕನ್ನಡ ನಾಡಿನಲ್ಲಿ ಇಂದು ಅನೇಕ ವಿದ್ವಾಂಸರು, ಬರಹಗಾರರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಅನೇಕ ಸಂಸ್ಥೆಗಳು ಬೆಳೆದಿವೆ.ಮಹಾರಾಜರ ಕೊಡುಗೆಯನ್ನು ನಾವು ಮರೆಯಬಾರದು. ನಾವೆಲ್ಲ ಅವರಿಗೆ ಕೃತಜ್ಞತೆ ಹೊಂದಿರಬೇಕು. ಅವರ ಕುಟುಂಬದವರು ಯಾವುದೇ ವಯಸ್ಸಿನವರಿದ್ದರೂ ಸರಿ, ಅವರಿಗೆ ನಮಸ್ಕರಿಸುತ್ತೇನೆ’ ಎಂದು ಹೇಳಿದರು.

‘ಕನ್ನಡ ಕೇವಲ ಭಾಷೆಯಲ್ಲ, ಸಂಸ್ಕೃತಿಯೂ ಹೌದು. ಎರಡು ಸಾವಿರಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ಭಾಷೆ ಬೆಳೆಸುವ ಜವಾಬ್ದಾರಿ ಹೆಣ್ಣುಮಕ್ಕಳ ಮೇಲಿದೆ. ಮನೆಯಲ್ಲಿ ಮಕ್ಕಳೊಂದಿಗೆ, ಸಂಬಂಧಿಕರೊಂದಿಗೆ ಕನ್ನಡ ಭಾಷೆಯಲ್ಲೇ ಮಾತನಾಡಬೇಕು.ಕನ್ನಡ ಪುಸ್ತಕ, ಕನ್ನಡ ಪತ್ರಿಕೆಗಳನ್ನು ಓದಿಸುವ ಹವ್ಯಾಸ ಬೆಳೆಸಬೇಕು’ ಎಂದರು.

ಸೀರೆ ಬದಲು ಪುಸ್ತಕ ಖರೀದಿಸಿ:‘ಕೃಷ್ಣನಿಗೆ ಯಶೋದೆ ಹಾಗೂ ದೇವಕಿ ಇಬ್ಬರು ತಾಯಿಯರು ಇದ್ದರು. ಹಾಗೆಯೇ ಭಾಷೆ ಕೂಡ. ಮಾತೃಭಾಷೆಯಾಗಿ ಕನ್ನಡವನ್ನು ಉಳಿಸಿ, ಬೆಳೆಸಬೇಕು. ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ ಕಲಿಯಬೇಕು. ನನಗೆ 62ನೇ ವರ್ಷದವರೆಗೂ ಪ್ರತಿ ಹುಟ್ಟುಹಬ್ಬಕ್ಕೂ ತಾಯಿ ಕನ್ನಡ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಅದೇ ರೀತಿ, ಇಂದಿನ ತಾಯಂದಿರು ವರ್ಷದಲ್ಲಿ ಒಂದು ಸೀರೆ ಕಡಿಮೆ ಕೊಂಡು, ಆ ಹಣದಲ್ಲಿ ಕನ್ನಡ ಪುಸ್ತಕ ಖರೀದಿಸಿ ಮಕ್ಕಳಿಗೆ ಕೊಡಬೇಕು. ಆ ಮೂಲಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕು’ ಎಂದು ಸುಧಾಮೂರ್ತಿ ಕಿವಿಮಾತು ಹೇಳಿದರು.

ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್,‘ನಮ್ಮ ಮಕ್ಕಳು ಮೊಬೈಲ್ ಆಟಗಳು, ಡಿಜಿಟಲ್ ಭಾಷೆಯ ಕಲಿಕೆಯೊಂದಿಗೆ ಅಪರಿಚಿತ ಲೋಕಕ್ಕೆ ಹೋಗುತ್ತಿದ್ದಾರೆ. ಅವರಿಗೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವ ಮೂಲಕ ತಾಯಂದಿರು ಮಕ್ಕಳನ್ನು ಡಿಜಿಟಲ್ ಲೋಕದಿಂದ ಸಹಜ ಲೋಕಕ್ಕೆ ಕರೆತರಬೇಕು’ ಎಂದು ತಿಳಿಸಿದರು.

‘ಕನ್ನಡ ಪುಸ್ತಕಕ್ಕೆ ವಿಶೇಷ ರಿಯಾಯಿತಿ’

‘ಕನ್ನಡ ರಾಜೋತ್ಸವದ ಪ್ರಯುಕ್ತ ಇಡೀ ತಿಂಗಳು ಕನ್ನಡ ಪುಸ್ತಕಗಳಿಗೆ ಶೇ 10ರಿಂದ ಶೇ 25ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ₹ 300 ಮೌಲ್ಯದ ಪುಸ್ತಕಗಳನ್ನು ಕೊಂಡವರಿಗೆ ವಿಶೇಷ ರಿಯಾಯಿತಿ ಕಾರ್ಡ್ ಕೊಡಲಾಗುತ್ತದೆ. ಆ ಕಾರ್ಡ್‌ ಹೊಂದಿರುವವರು ಇಡೀ ವರ್ಷ ಶೇ 10 ರಿಯಾಯಿತಿಯಲ್ಲಿ ಕನ್ನಡ ಪುಸ್ತಕಗಳನ್ನು ಕೊಳ್ಳಬಹುದು’ ಎಂದು ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT