ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಿನ್ ಕುಮಾರ್‌ಗೆ ನೋಟಿಸ್‌ ಕೊಡುವೆ: ಎಂ.ಬಿ.ಪಾಟೀಲ

ಮಲಪ್ರಭಾ ನಾಲೆ ಆಧುನೀಕರಣ ಕಾಮಗಾರಿ– ವೈಯಕ್ತಿಕ ಆರೋಪಕ್ಕೆ ಕಿಡಿ
Last Updated 26 ಸೆಪ್ಟೆಂಬರ್ 2022, 7:05 IST
ಅಕ್ಷರ ಗಾತ್ರ

ಮಂಗಳೂರು: ‘ಮಲಪ್ರಭಾ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ₹ 420 ಕೋಟಿ ಭ್ರಷ್ಟಾಚಾರ ಮಾಡಿರುವುದಾಗಿ ನನ್ನ ವಿರುದ್ಧ ಆರೋಪ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಲೀಗಲ್ ನೋಟಿಸ್‌ ಜಾರಿ ಮಾಡುತ್ತೇನೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿಳಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಲಪ್ರಭಾ ನಾಲೆ ಆಧುನೀಕರಣ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿದ ಬಗ್ಗೆ ನನಗೆ ಗರ್ವ ಇದೆ. ಈ ಕಾಮಗಾರಿಗಿಂತ ಹೆಚ್ಚು ಮೊತ್ತವನ್ನು ಇದರ ವಿತರಣಾ ನಾಲೆಗಳ ಅಭಿವೃದ್ಧಿಗೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವೆಚ್ಚ ಮಾಡಲಾಗಿದೆ. ಅವರ ವಿರುದ್ಧ ನೀವು ₹ 840 ಕೋಟಿ ಭ್ರಷ್ಟಾಚಾರದ ಆರೋಪ ಮಾಡುತ್ತೀರಾ’ ಎಂದು ಪ್ರಶ್ನೆ ಮಾಡಿದರು.

‘ಮಲಪ್ರಭಾ ನಾಲೆ ಹಾದುಹೋಗುವ ಪ್ರದೇಶ ಎರಿಭೂಮಿ. ಇಂತಹ ಮಣ್ಣಿನಲ್ಲೂ ದೀರ್ಘ ಬಾಳಿಕೆ ಬರುವಂತೆ ಯಾವರೀತಿ ಕಾಲುವೆ ನಿರ್ಮಿಸಬೇಕು ಎಂಬ ಬಗ್ಗೆ ತಜ್ಞರು ಶಿಫಾರಸು ಮಾಡಿದ್ದರು. ಅದರ ಪ್ರಕಾರವೇ ಕಾಮಗಾರಿ ನಡೆಸಲಾಗಿದೆ. ಪುಣ್ಯಾತ್ಮ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಮಲಪ್ರಭಾ ನಾಲೆ ಬಿಡಿ, ಈ ಭಾಗದ ವಾರಾಹಿ ನಾಲೆಯ ಬಗ್ಗೆಯೂ ಗೊತ್ತಿರಲಿಕ್ಕಿಲ್ಲ. ಅವರ ಮಿದುಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹಾಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ’ ಎಂದರು.

‘ಬೆಲೆ ಏರಿಕೆ, ಕಾಮಗಾರಿಗಳಲ್ಲಿ ಶೇ 40 ಕಮಿಷನ್‌, ಆಡಳಿತದಲ್ಲಿ ಭ್ರಷ್ಟಾಚಾರದಿಂದಾಗಿ ಜನ ಬೇಸತ್ತಿದ್ದಾರೆ. ಈ ವಿಚಾರಗಳೇ ನಮ್ಮ ಚುನಾವಣಾ ಕಾರ್ಯತಂತ್ರ. ರಾಜ್ಯದಲ್ಲಿ ಕೆಂಗಲ್‌ ಹನುಮಂತಯ್ಯ ಅವರಿಂದ ಹಿಡಿದು ಸಿದ್ದರಾಮಯ್ಯವರೆಗೂ ಸುಭದ್ರ ಸರ್ಕಾರವನ್ನು ನೀಡಿರುವ ಕಾಂಗ್ರೆಸ್‌ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 140ರಿಂದ 150 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಪಕ್ಷದ ಆಂತರಿಕ ಸಮೀಕ್ಷೆಯೂ ಇದೇ ವರದಿಯನ್ನು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 2013ರಂತೆಯೇ ಎಂಟು ಸ್ಥಾನಗಳಲ್ಲಿ ಏಳು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಅವರವರ ಬೆಂಬಲಿಗರು, ಬೆಂಬಲಿಗ ಶಾಸಕರು ಹೇಳುವುದರಲ್ಲಿ ತಪ್ಪಿಲ್ಲ. ಪಕ್ಷದಲ್ಲಿ ಆಂತರಿಕ ಕಚ್ಚಾಟ ಇದೆ ಎಂಬುದು ಇದರ ಅರ್ಥವಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ಹೈಕಮಾಂಡ್‌ ನಿರ್ಧಾರ ಮಾಡಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಅವರ ಬೆಂಬಲಿಗ ಶಾಸಕರ ಬಯಕೆ. ಹಾಗಾಗಿ ಅಲ್ಲಿ ಗೊಂದಲ ಸೃಷ್ಟಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಅಲ್ಲಿನ ಗೊಂದಲಗಳು ಶೀಘ್ರ ಬಗೆಹರಿಲಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಒಳ್ಳೆಯ ದಿನಗಳನ್ನು ತರುವ ಭರವಸೆ ನೀಡಿ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದಿವೆ. ಈಗ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ನಮಗೆ ಹಳೆಯ ದಿನಗಳನ್ನೇ ಮರಳಿಸಿ ಎಂದು ಜನರು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. 2024ರಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್‌ ಮುಖಂಡರಾದ ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಶಕುಂತಳಾ ಶೆಟ್ಟಿ, ಜೆ.ಆರ್‌.ಲೋಬೊ, ಐವನ್‌ ಡಿಸೋಜ, ಮೊಯ್ದೀನ್ ಬಾವ, ಕೃಪಾ ಆಳ್ವ, ಮಮತಾ ಗಟ್ಟಿ, ಮಿಥುನ್‌ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT