ಶನಿವಾರ, ಅಕ್ಟೋಬರ್ 31, 2020
27 °C
ದಾಖಲಾತಿಯಲ್ಲಿ ಹೆಚ್ಚಳ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಿಕ್ಕಿದೆ ಸದವಕಾಶ

PV Web Exclusive| ಸೌಕರ್ಯ, ಶಿಕ್ಷಣ ಗುಣಮಟ್ಟ ಸುಧಾರಿಸಿದರೆ ಮಕ್ಕಳ ಕಲರವ ನಿರಂತರ

ಎಂ. ನಾಗರಾಜ Updated:

ಅಕ್ಷರ ಗಾತ್ರ : | |

 ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ಹೆಸರುವಾಸಿಯಾಗಿರುವ ಕೆಲ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪೈಪೋಟಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅಲ್ಲಿನ ಮೂಲ ಸೌಕರ್ಯಗಳ ಕೊರತೆ, ಅವ್ಯವಸ್ಥೆ, ಶಿಕ್ಷಕರ ರಾಜಕೀಯ, ಬೋಧಿಸುವ ಕೌಶಲ ಇದ್ದರೂ ವಿದ್ಯಾರ್ಥಿಗಳಿಗೆ ಕಲಿಸಲು ಅದನ್ನು ಬಳಸದ ಶಿಕ್ಷಕರನ್ನು ನೋಡಿ ಹೆಚ್ಚು ಹಣ ತೆತ್ತಾದರೂ ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ, ಅದರಲ್ಲೂ ಹೆಚ್ಚಾಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ, ಶಿಕ್ಷಣ ಕೊಡಿಸಲು ಪೋಷಕರು ಮುಗಿ ಬೀಳುತ್ತಿರುವುದು ಸುಳ್ಳಲ್ಲ. ಅಂತಹದ್ದರಲ್ಲಿ ಈಗ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ಇದಕ್ಕೆ ಏನು ಕಾರಣ ಎಂದು ಹುಡುಕುವ ಗೋಜಿಗೆ ಹೋಗಬೇಕಿಲ್ಲ. ಎಲ್ಲವೂ ಕೊರೊನಾ ಮಹಿಮೆ!

ಈ ವರ್ಷದ ಕಾಲಚಕ್ರವನ್ನು ಕೊರೊನಾ ಹೆಸರಲ್ಲಿ ತಿರುಗಿಸಲಾಗುತ್ತಿದೆ. ಸದ್ಯದ ಎಲ್ಲ ಪರಿಸ್ಥಿತಿಗೂ ಕೊರೊನಾದ ಕಡೆಗೆ ಬೊಟ್ಟುಮಾಡಿ ತೋರಲಾಗುತ್ತಿದೆ. ಇದಕ್ಕೂ ಮೊದಲೂ ದೇಶದ ಆರ್ಥ ವ್ಯವಸ್ಥೆಯೇನು ಸುಸ್ಥಿತಿಯಲ್ಲಿರಲಿಲ್ಲ. 2016ರಿಂದಲೇ ನಾನಾ ಕಾರಣಗಳಿಗೆ ದೇಶದ ಆರ್ಥಿಕ ಪರಿಸ್ಥಿತಿ ಹಳಿ ತಪ್ಪಿತ್ತು. ಇದನ್ನು ಕೊರೊನಾ ಮತ್ತಷ್ಟು ಬಿಗಡಾಯಿಸುವಂತೆ ಮಾಡಿತು ಅಷ್ಟೆ. ಕೊರೊನಾ ಸೋಂಕು ಹರಡಲು ಆರಂಭಿಸುತ್ತಿದ್ದಂತೆಯೇ ದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಜಾರಿ ಮಾಡಿದ ಸಂಪೂರ್ಣ ಲಾಕ್‌ಡೌನ್‌ ಜನರನ್ನು ಹೈರಾಣು ಮಾಡಿತು. ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗದಲ್ಲಿರುವವರ ಸಂಬಳ–ಸಾರಿಗೆ ಸೌಲಭ್ಯವೂ ಕಡಿತವಾಗಿದೆ. ತುತ್ತು ಅನ್ನಕ್ಕೂ ಜನ ಪರದಾಡುವಂತಹ ಸಂಕಷ್ಟವನ್ನು ಕೋವಿಡ್‌– 19 ಸೃಷ್ಟಿಸಿದ ಪರಿಣಾಮ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಖರ್ಚಿಲ್ಲದ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮನಸು ಮಾಡಿದ್ದಾರೆ.


ಪಾಠ ಮಾಡುತ್ತಿರುವ ಶಿಕ್ಷಕಿ (ಪ್ರಾತಿನಿಧಿಕ ಚಿತ್ರ)

ಹಿಂದೆಯೂ ಇವರೆಲ್ಲ ಸ್ಥಿತಿವಂತರೇನೂ ಆಗಿರಲಿಲ್ಲ. ಆದರೆ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ತಮ್ಮ ಹೊಟ್ಟೆ–ಬಟ್ಟೆಗೆ ಕಡಿಮೆಯಾದರೂ ಪರವಾಗಿಲ್ಲ ಎಂದು ಶುಲ್ಕ ತೆತ್ತು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದರು. ಈಗ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಹಲವಾರು ಪೋಷಕರು ತಮ್ಮ ಮಕ್ಕಳ ಶಿಕ್ಷಣವನ್ನು ಖಾಸಗಿ ಶಾಲೆಗಳಲ್ಲಿ ಮುಂದುವರಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಹಣದ ಕೊರತೆ ಒಂದೆಡೆಯಾದರೆ, ಈ ವರ್ಷ ಶಾಲೆ ನಡೆಯತ್ತದೆಯೋ ಇಲ್ಲವೋ ಎಂಬ ಭೀತಿ ಇನ್ನೊಂದೆಡೆ. ಜತೆಗೆ ಮಕ್ಕಳ ಆರೋಗ್ಯದ ಮೇಲೆ ಏನಾದರೂ ಕೆಟ್ಟ ಪರಿಣಾಮ ಬೀರಿದರೆ ಹೇಗೆ ಎಂಬ ಆತಂಕವೂ ಅವರ ಕೈಗಳನ್ನು ಕಟ್ಟಿ ಹಾಕಿದೆ. ಆದ್ದರಿಂದಲೇ ದೂರದ ವಸತಿ ಶಾಲೆಗಳಿಗೆ ಸೇರಿಸಿದ್ದ ಎಷ್ಟೋ ಪೋಷಕರು ಮತ್ತೆ ಆ ಶಾಲೆಗಳಿಗೆ ಮಕ್ಕಳನ್ನು ಕಳುಹಿಸದಿರಲು ನಿರ್ಧರಿಸಿ, ತಮ್ಮ ಊರಿನಲ್ಲೇ ಅಥವಾ ಸಮೀಪದ ಊರಿನ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ದಾಖಲು ಮಾಡಿಸಿದ್ದಾರೆ.

ಇದಲ್ಲದೇ, ಹಳ್ಳಿಗಳಲ್ಲಿ ಜೀವನ ಸಾಗಿಸುವುದು ಕಷ್ಟವಾಗಿ, ಹತ್ತಾರು ವರ್ಷಗಳ ಹಿಂದೆ ಊರುಗಳನ್ನು ತೊರೆದಿದ್ದವರು ಈಗ ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಮತ್ತೆ ತಮ್ಮೂರುಗಳನ್ನು ಸೇರಿಕೊಂಡಿದ್ದಾರೆ. ಮತ್ತೆ ನಗರಗಳಿಗೆ ವಲಸೆ ಹೋಗುವ ಆಸಕ್ತಿಯೂ ಅವರಲ್ಲಿ ಉಳಿದಿಲ್ಲ. ಆಗ ಬೇಸಾಯ ಮಾಡಲಾಗದೆ ಅಥವಾ ಕೂಲಿ ಕೆಲಸವೂ ಇಲ್ಲದೆ ಊರು ಬಿಟ್ಟಿದ್ದವರಿಗೆ ಈಗ ಆ ಊರುಗಳಲ್ಲಿ ಸಿಗುತ್ತಿರುವ ನರೇಗಾ ಕೆಲಸವೇ ಸಾಕು ಎಂಬ ಭಾವನೆ ಮೂಡಿದೆ. ಮತ್ತೊಂದಿಷ್ಟು ಮಂದಿ ನಗರಗಳಲ್ಲಿ ದುಡಿಮೆಗೆ ಆಧರಿಸಿದ್ದ ವಾಹನಗಳನ್ನು ಮಾರಿ ಬೋರ್‌ವೆಲ್‌ ಹಾಕಿಸಿಕೊಂಡೋ, ಟ್ರ್ಯಾಕ್ಟರ್‌ ಖರೀದಿಸಿಯೋ, ಹೈನುಗಾರಿಕೆ, ಕೋಳಿ ಸಾಕಾಣಾಕೆ ಆರಂಭಿಸಿಯೋ ಬದುಕು ಕಟ್ಟಿಕೊಳ್ಳಲಾರಂಭಿಸಿದ್ದಾರೆ. ಅವರಿಗೆ ಅದೇ ಹಳ್ಳಿಗಳಲ್ಲಿ ಅಥವಾ ಸಣ್ಣ ಪಟ್ಟಣಗಳಲ್ಲಿ ಉಳಿಯುವ ಅನಿವಾರ್ಯತೆ ಇದೆ. ಏಕೆಂದರೆ ಲಾಕ್‌ಡೌನ್‌ ತೆರವುಗೊಂಡು ನಾಲ್ಕು ತಿಂಗಳು ಕಳೆದರೂ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಹಾಗಾಗಿ ಅಂತಹವರು ಸಹ ತಮ್ಮ ಮಕ್ಕಳನ್ನು ಈಗ ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಬದಲಿಗೆ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ, ಮಧ್ಯಾಹ್ನದ ಬಿಸಿ ಊಟ ಮತ್ತು ‘ವಿದ್ಯಾಗಮ’ ಕಾರ್ಯಕ್ರಮಕ್ಕೆ ಸಿಕ್ಕ ಪ್ರತಿಕ್ರಿಯೆ ಎಂದು ಭಾವಿಸಬಾರದು.


ಪ್ರಯೋಗಾಲಯದಲ್ಲಿ ಮಕ್ಕಳು (ಬೆಳಗಾವಿ ಶಾಲೆ)

ಈ ಪೋಷಕರು ಮುಂದೆ ಮಕ್ಕಳನ್ನು ಮತ್ತೆ ಖಾಸಗಿ ಶಾಲೆಗಳಿಗೆ ಕಳುಹಿಸದಂತೆ ಮಾಡಬೇಕಿದ್ದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಬೇಕಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಪಾಠ ಪ್ರವಚನಗಳ ಗುಣಮಟ್ಟ ಉತ್ತಮವಾಗಿರುವುದರಿಂದಲೇ ಅಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಯಾವಾಗಲೂ ಕಡಿಮೆಯಾಗಿಲ್ಲ. ಆದರೆ ರಾಜ್ಯದ ಇತರೆಡೆ  ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಉತ್ತಮ ಗುಣಮಟ್ಟದ ಶಾಲೆಗಳ ಸಂಖ್ಯೆ ಬೇರೆ ಜಿಲ್ಲೆಗಳಲ್ಲಿ ಬಹಳ ಕಡಿಮೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಶಾಲೆಗೆ ಪ್ರವೇಶ ಪಡೆದುಕೊಳ್ಳಲು ಭಾರಿ ಪೈಪೋಟಿ ಏರ್ಪಟ್ಟಿದೆ ಎಂದರೆ ಇದಕ್ಕೆ ಗುಣಮಟ್ಟ ಉತ್ತಮವಾಗಿರುವುದೂ ಕಾರಣ. ಈ ನಿದರ್ಶನ ಕಣ್ಣ ಮುಂದೆಯೇ ಇದ್ದರೂ ಕಾಣಿಸುತ್ತಿಲ್ಲ ಎಂಬಂತೆ ಸರ್ಕಾರದ ವರ್ತನೆ ಇರಬಾರದು. ಬೇರೆ ಶಾಲೆಗಳಲ್ಲೂ ಇಂತಹದ್ದೇ ವಾತಾವರಣ ನಿರ್ಮಿಸಲು ಗಮನಕೊಟ್ಟು, ಶಾಶ್ವತವಾಗಿ ಈ ಮಕ್ಕಳು ಆ ಶಾಲೆಗಳಲ್ಲಿಯೇ ಕಲಿಕೆ ಮುಂದುವರಿಸುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.

ಮೂಲಸೌಕರ್ಯ ಕೊರತೆ ಇರುವ ಶಾಲೆಗಳಿಗೆ ಅತ್ಯಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಸರ್ಕಾರ ಅಂತ ಎಲ್ಲೆಲ್ಲಿ ಬೋರ್ಡ್‌ ಹಾಕಿಕೊಂಡ ವ್ಯವಸ್ಥೆಗಳು ಇರುತ್ತವೆಯೋ ಅಲ್ಲೆಲ್ಲ ರಾಜಕಾರಣಿಗಳು ಮೂಗು ತೂರಿಸುವುದು ಹೆಚ್ಚು. ಯಾವ ಸೌಲಭ್ಯಗಳ  ಅಗತ್ಯವಿದೆ ಎನ್ನುವುದಕ್ಕಿಂತ ತಮ್ಮೂರಿನ ಶಾಲೆಯಲ್ಲಿ ಕೊಠಡಿಗಳು ಹೆಚ್ಚಿರಬೇಕು ಎಂಬ ಪ್ರತಿಷ್ಠೆ ಅಥವಾ ತಮ್ಮ ಬೆಂಬಲಿಗರಿಗೆ ಕೆಲಸ ಕೊಡಬೇಕು ಎಂಬ ದುರುದ್ದೇಶದಿಂದ ಅವರು ಅನಗತ್ಯ ಕಾಮಗಾರಿ ಕೈಗೊಳ್ಳುವುದು ಹೆಚ್ಚು. ಇಂತಹದ್ದಕ್ಕೆ ಅವಕಾಶವಿರಬಾರದು. ಆ ಶಾಲೆಗೆ ಏನು ಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಮುಖ್ಯ ಶಿಕ್ಷಕರಿಗೆ ಇರಬೇಕು. ಅವರೂ ಪ್ರಾಮಾಣಿಕವಾಗಿ ಶಾಲೆಯ ಹಿತವನ್ನೇ ಕಾಪಾಡಬೇಕು.  ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಗತ್ಯವಿರದಿದ್ದರೂ ಕೊಠಡಿಗಳ ಸಂಖ್ಯೆ ಹೆಚ್ಚಿಸಲು ಅನುವು ಮಾಡಬಾರದು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇರುವಂತೆ ನೋಡಿಕೊಳ್ಳಬೇಕು.


ಅಭ್ಯಾಸದಲ್ಲಿ ನಿರತ ಮಕ್ಕಳು

ಶಾಲೆಗಳ ಸೋರುವ ಮಾಳಿಗೆ ರಿಪೇರಿ, ಮೇಜು–ಕುರ್ಚಿ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಸುಸಜ್ಜಿತ ಕಂಪ್ಯೂಟರ್‌ ಶಿಕ್ಷಣ, ಇಂಟರ್‌ನೆಟ್‌ ಸೌಲಭ್ಯ, ಕಲಿಕಾ ಉಪಕರಣಗಳನ್ನು ಒದಗಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಮರ್ಪಕವಾದ ನಿರ್ವಹಣೆಗೆ ಅಗತ್ಯವಾದ  ಅನುದಾನವನ್ನು ಕೊಡಬೇಕು. ಈಗ ಸರ್ಕಾರ ಕೊಡುತ್ತಿರುವ ಅನುದಾನ ಏನೇನೂ ಸಾಲದು. ವಿದ್ಯುತ್‌ ಶುಲ್ಕ ಕಟ್ಟಲೂ ಈ ಹಣ ಸಾಕಾಗುವುದಿಲ್ಲ. ಇನ್ನು ಕಂಪ್ಯೂಟರ್‌ ತರಬೇತಿ ಕೊಡುವುದು ಹೇಗೆ? ಇಂಟರ್‌ನೆಟ್‌ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯವೇ?  ಬರೀ ಕಂಪ್ಯೂಟರ್‌ಗಳನ್ನು ಒದಗಿಸಿದರೆ ಆಗುವುದಿಲ್ಲ, ತರಬೇತಿ ನೀಡಲು ಪ್ರತ್ಯೇಕ ಸಿಬ್ಬಂದಿಯನ್ನೂ ನೇಮಿಸಬೇಕು. ಈಗ ಬಹುತೇಕ ಕಡೆ ಇಂಗ್ಲಿಷ್‌ ಅಥವಾ ಗಣಿತ ಶಿಕ್ಷಕರಿಗೆ ತರಬೇತಿ ನೀಡಿ ಅವರೇ ಕಂಪ್ಯೂಟರ್‌ ತರಗತಿಗಳನ್ನೂ ನಿರ್ವಹಿಸುವಂತೆ ಮಾಡಲಾಗುತ್ತಿದೆ. ಇದು ಸರಿಯಲ್ಲ.

ಎಷ್ಟೋ ಖಾಸಗಿ ಶಾಲೆಗಳಲ್ಲಿ ಅರ್ಹತೆ ಹೊಂದಿರುವ ಬೋಧಕರಿಲ್ಲದಿದ್ದರೂ ಸತತ ಪರಿಶ್ರಮದಿಂದ ಅವರು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಾಗಿ ಕಲಿಸುವುದರಿಂದ ಅಲ್ಲಿ ಗುಣಮಟ್ಟ ಉತ್ತಮವಾಗಿದೆ ಎಂದೇ ಪೋಷಕರು ನಿಗದಿತ ಶುಲ್ಕ ತೆತ್ತು ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಇದಕ್ಕೆ ನಂಬಿಕೆ ಕಾರಣ. ಆ ನಂಬಿಕೆಯನ್ನು ಗಳಿಸಿಕೊಳ್ಳಲು ಸರ್ಕಾರಿ ಶಾಲಾ ಶಿಕ್ಷಕರೂ ಮುಂದಾಗಬೇಕು. ಬರೀ ಸೌಲಭ್ಯದ ಕೊರತೆಗಳನ್ನೇ ಬೊಟ್ಟು ಮಾಡಿ ತೋರಿಸುವ ಚಾಳಿಯನ್ನು ಬಿಡಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಪರಿತಪಿಸಬೇಕಾಗುತ್ತದೆ. ಇದನ್ನು ಶಿಕ್ಷಕರು ಮರೆಯಬಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು