ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದಾಲಿಕೆ ಆರೋಪ: ದೂರವಾಣಿ ಸಮಸ್ಯೆ ಇದ್ದರೆ ಕಂಪನಿಗೆ ಮಾತನಾಡಿ ಎಂದ ಬೊಮ್ಮಾಯಿ

Last Updated 21 ಆಗಸ್ಟ್ 2020, 20:40 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸರ್ಕಾರ ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ನಮ್ಮ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡಿಲ್ಲ, ಡಿ.ಕೆ.ಶಿ. ಅವರ ಚಟುವಟಿಕೆಗಳ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ.

ಈ ಕುರಿತಂತೆ ಪರಸ್ಪರ ಆರೋಪ– ಪ್ರತ್ಯಾರೋಪಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಬಿಸಿ ಏರಿದೆ.

ನನ್ನ ಕರೆಗಳ ಕದ್ದಾಲಿಕೆ ನಡೆದಿದೆ: ‘ನನ್ನ ದೂರವಾಣಿ ಕದ್ದಾಲಿಕೆ ಆಗುತ್ತಿದೆ. ಇವತ್ತು ಬೆಳಿಗ್ಗೆಯಿಂದ ಯಾವುದೇ ದೂರವಾಣಿ ಕರೆಗಳು ಬರುತ್ತಿಲ್ಲ. ಈ ವಿಚಾರವಾಗಿ ದೂರು ನೀಡಿದ್ದೇನೆ. ನನ್ನ ಕರೆಗಳನ್ನು ಕದ್ದಾಲಿಸುತ್ತಿರುವುದು ನೂರಕ್ಕೆ ನೂರು ನಿಜ. ಹಿಂದೆಯೂ ನನ್ನ ಕರೆಗಳನ್ನು ಕದ್ದಾಲಿಸಲಾಗುತ್ತಿತ್ತು’ ಎಂದು ಶಿವಕುಮಾರ್ ಆರೋಪಿಸಿದ್ದಾರೆ.

ಕದ್ದಾಲಿಕೆ ಅವಶ್ಯಕತೆ ಇಲ್ಲ: ‘ನಮ್ಮದು ಜವಾಬ್ದಾರಿಯುತ ಸರ್ಕಾರ. ಕದ್ದಾಲಿಕೆ ಮಾಡುವ ಕೆಳಮಟ್ಟಕ್ಕೆ ಹೋಗು
ವುದಿಲ್ಲ. ಅದರ ಅಗತ್ಯವೂ ಇಲ್ಲ. ಶಿವಕುಮಾರ್‌ ದೂರವಾಣಿ ಕದ್ದಾಲಿಕೆ ಮಾಡುವ ಪ್ರಶ್ನೆಯೇ ಇಲ್ಲ. ಅವರ ಪಕ್ಷದ ನಾಯಕರು ಅವರಿಗೆ ಕರೆ ಮಾಡಿದಾಗ, ಕರೆ ತಲುಪಿಲ್ಲ ಎಂದರೆ ದೂರವಾಣಿ ಕಂಪನಿಯನ್ನು ವಿಚಾರಿಸಬೇಕು’ ಎಂದು ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಡಿ.ಕೆ.ಯವರಿಗೆ ಬೇರೆ ನಾಯಕರು ಮಾಡಿದ ಕರೆ ಸಿಕ್ಕಿಲ್ಲ ಎಂದರೆ, ಅದನ್ನು ದೂರವಾಣಿ ಕದ್ದಾಲಿಕೆ ಎಂದು ಆರೋಪ ಮಾಡುವುದು ಸರಿಯಲ್ಲ. ಹಿಂದೆ ಅವರ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡಿದ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದೆ. ಕದ್ದಾಲಿಕೆಯಲ್ಲಿ ಅಪಾರ ಅನುಭವ ಅವರ ಸರ್ಕಾರಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕದ್ದಾಲಿಕೆ ಕಾಂಗ್ರೆಸ್‌ ಸಂಸ್ಕೃತಿ: ‘ಕದ್ದಾಲಿಕೆ ಕಾಂಗ್ರೆಸ್ ಸಂಸ್ಕೃತಿ. ಅವರ ಸರ್ಕಾರ ಇದ್ದಾಗ ನಡೆದ ದೂರವಾಣಿ ಕದ್ದಾಲಿಕೆಯ ತನಿಖೆ ಈಗ ಅಂತಿಮ ಹಂತಕ್ಕೆ ಬಂದಿದೆ. ಆಗ ಕದ್ದಾಲಿಕೆ ಪ್ರಕರಣದಲ್ಲಿ ಸಿಕ್ಕಿಕೊಂಡವರೇ ಈಗ ತಮ್ಮ ದೂರವಾಣಿ ಕದ್ದಾಲಿಕೆ ಆಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ’ ಎಂದು ಸಚಿವ ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ. ಆ ಸಂಸ್ಕೃತಿಯೂ ಅವರದಲ್ಲ. ಅವರ ತಂದೆ ರಾಜ್ಯದ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು ಎಂದು ಅವರು ಹೇಳಿದರು.

ತನಿಖೆಯಲ್ಲಿ ಹಸ್ತಕ್ಷೇಪವಿಲ್ಲ
ಡಿ.ಜೆ.ಹಳ್ಳಿ ಗಲಭೆಯ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಮಾಡಿರುವ ಆರೋಪ ನಿರಾಧಾರ ಮತ್ತು ಶುದ್ಧ ಸುಳ್ಳು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪೋಲಿಸರು ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಪೋಲಿಸರ ನೈತಿಕ ಬಲವನ್ನು ಕುಗ್ಗಿಸುವ ಹಾಗೂ ಗಲಭೆಕೋರರನ್ನು ರಕ್ಷಿಸುವ ಪ್ರಯತ್ನವಾಗಿದೆ. ಅವರ ಉದ್ದೇಶ ಈಡೇರುವುದಿಲ್ಲ ಎಂದೂ ತಿಳಿಸಿದ್ದಾರೆ.

**

ಡಿ.ಜೆ.ಹಳ್ಳಿ ಗಲಭೆಯ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಮಾಡಿರುವ ಆರೋಪ ನಿರಾಧಾರ ಮತ್ತು ಶುದ್ಧ ಸುಳ್ಳು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT