ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 852 ಕೊಟಿಯಲ್ಲಿ ಐಐಟಿ ಧಾರವಾಡದ ಮೊದಲ ಹಂತ ಸಿದ್ಧ

ಐಐಟಿ ಧಾರವಾಡ ನಿರ್ದೇಶಕ ಡಾ. ವೆಂಕಪ್ಪಯ್ಯ ಆರ್. ದೇಸಾಯಿ ಹೇಳಿಕೆ
Last Updated 9 ಮಾರ್ಚ್ 2023, 14:15 IST
ಅಕ್ಷರ ಗಾತ್ರ

ಧಾರವಾಡ: ‘ಐಐಟಿ ಧಾರವಾಡದ ನೂತನ ಕ್ಯಾಂಪಸ್‌ನ ಮೊದಲ ಹಂತ ಸಿದ್ಧಗೊಂಡಿದ್ದು, ಇದೇ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ವೆಂಕಪ್ಪಯ್ಯ ಆರ್. ದೇಸಾಯಿ ಹೇಳಿದರು.

‘2016ರಲ್ಲಿ ಕೇಂದ್ರ ಸರ್ಕಾರ ಐಐಟಿ ಧಾರವಾಡ ಘೋಷಿಸಿತು. ರಾಜ್ಯ ಸರ್ಕಾರವು 65 ಎಕರೆ ಮೀಸಲು ಅರಣ್ಯ ಪ್ರದೇಶ ಹಾಗೂ 470 ಎಕರೆ ಜಾಗ ಸೇರಿ ಒಟ್ಟು 535 ಎಕರೆ ಜಾಗವನ್ನು ನೀಡಿತ್ತು. ಅಲ್ಲಿ ಪ್ರಥಮ ಹಂತದಲ್ಲಿ ₹852ಕೋಟಿ ವೆಚ್ಚದಲ್ಲಿ ವಿವಿಧ ಉದ್ದೇಶಕ್ಕಾಗಿ 18 ಕಟ್ಟಡಗಳನ್ನು ನಿರ್ಮಿಸಲಾಗಿದೆ’ ಎಂದು ಗುರುವಾರ ಸುದ್ದಿಗೊಷ್ಠಿಯಲ್ಲಿ ಹೇಳಿದರು

‘ಮುಖ್ಯ ಕಟ್ಟಡ ಚಾಲುಕ್ಯ ಹಾಗೂ ವಿಜಯನಗರದ ವಾಸ್ತು ಶೈಲಿಯ ವಿನ್ಯಾಸವನ್ನು ಹೊಂದಿದೆ. ನೈಸರ್ಗಿಕ ಬೆಳಕನ್ನೇ ಹೆಚ್ಚಾಗಿ ಬಳಸುವಂತೆ ಕಟ್ಟಡಗಳನ್ನು ವಿನ್ಯಾಸಗೊಳಿಸಲಾಗಿದೆ. ಸೌರ, ಪವನ ವಿದ್ಯುತ್‌ ಬಳಕೆಯನ್ನೂ ಮಾಡಲಾಗುತ್ತಿದೆ. ಮಳೆ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿದೆ. ಘನತ್ಯಾಜ್ಯ ನಿರ್ವಹಣೆಯೂ ಶೇ 100ರಷ್ಟು ಆಗಲಿದೆ. ಹೀಗಾಗಿ ಬೃಹತ್‌ ಕಟ್ಟಡಗಳ ವಿಭಾಗದಲ್ಲಿ ಪಂಚತಾರಾ ಹಸಿರು ರೇಟಿಂಗ್‌ ಪಡೆದಿದೆ’ ಎಂದು ತಿಳಿಸಿದರು.

‘2016ರಲ್ಲಿ ನೆಲ ಮತ್ತು ಜಲ ನಿರ್ವಹಣಾ ಸಂಸ್ಥೆಯಲ್ಲಿ ತಾತ್ಕಾಲಿಕ ಕ್ಯಾಂಪಸ್ ಆರಂಭಗೊಂಡಾಗ ಕಂಪ್ಯೂಟರ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ವಿಷಯದಲ್ಲಿ 4 ವರ್ಷಗಳ ಬಿ.ಟೆಕ್. ಪದವಿ ಆರಂಭಿಸಲಾಗಿತ್ತು. 2021ರಲ್ಲಿ ಭೌತವಿಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಆರಂಭಿಸಲಾಯಿತು. ಈ ವರ್ಷದಿಂದ ಸಿವಿಲ್, ರಸಾಯನ ವಿಜ್ಞಾನ ಮತ್ತು ಜೈವಿಕ ಎಂಜಿನಿನಿಯರಿಂಗ್, ಗಣಿತ ಮತ್ತು ಗಣಕ ವಿಜ್ಞಾನ ಎಂಜಿನಿಯರಿಂಗ್‌ ಆರಂಭಿಸಲಾಗುತ್ತಿದೆ. ಇದರೊಂದಿಗೆ ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಗಣಿತದಲ್ಲಿ ಐದು ವರ್ಷಗಳ ಬಿ.ಎಸ್. ಮತ್ತು ಎಂ.ಎಸ್. ಪದವಿಯನ್ನೂ ಆರಂಭಿಸಲಾಗಿದೆ. ಎಲ್ಲಾ ವಿಷಯಗಳಲ್ಲೂ ಎಂ.ಟೆಕ್, ಎಂ.ಎಸ್. ಮತ್ತು ಪಿಎಚ್‌ಡಿ ಕೋರ್ಸ್‌ಗಳು ಇವೆ. ನೂತನ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡ ಐಐಟಿ ಇದಾಗಿದೆ’ ಎಂದು ಡಾ. ದೇಸಾಯಿ ಹೇಳಿದರು.

‘ನೂತನ ಕ್ಯಾಂಪಸ್‌ನಲ್ಲಿ 2500 ವಿದ್ಯಾರ್ಥಿಗಳ ವ್ಯಾಸಂಗ ಮಾಡುವ ಸೌಕರ್ಯಗಳಿವೆ. ಸದ್ಯ 250 ವಿದ್ಯಾರ್ಥಿಗಳು ಕಾಯಂ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿದ್ದು, ವಾರದಲ್ಲಿ ಮೂರು ದಿನ ಅಲ್ಲಿನ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೇ ಅಂತ್ಯದಲ್ಲಿ ನೂತನ ಕ್ಯಾಂಪಸ್‌ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ. ಆಗ 856 ವಿದ್ಯಾರ್ಥಿಗಳು ಕಾಯಂ ಕ್ಯಾಂಪಸ್‌ಗೆ ವರ್ಗಾವಣೆಗೊಳ್ಳಲಿದ್ದಾರೆ’ ಎಂದರು.

‘ಐಐಟಿ ಧಾರವಾಡ ಮೂಲಕ ಈವರೆಗೂ ಮೂರು ತಂಡಗಳು ಪದವಿ ಪೂರ್ಣಗೊಳಿಸಿವೆ. ಇವರಲ್ಲಿ ಶೇ 90ರಷ್ಟು ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದರೆ, ಶೇ 10ರಷ್ಟು ವಿದ್ಯಾರ್ಥಿಗಳು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಕೈಗೊಂಡಿದ್ದಾರೆ. ಕ್ಯಾಂಪಸ್ ಮೂಲಕ ಉದ್ಯೋಗ ಪಡೆದವರು ಸರಾಸರಿ ₹17ಲಕ್ಷ ವಾರ್ಷಿಕ ವೇತನವನ್ನು ಪಡೆದಿದ್ದಾರೆ. ಧಾರವಾಡ ಕ್ಯಾಂಪಸ್‌ನಲ್ಲಿ ವಿದ್ಯುತ್ ಚಾಲಿತ ವಾಹನ, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಭಾರತೀಯ ಬಾಷೆಗಳ ಮೇಲಿನ ಸಂಶೋಧನೆಗಳು ನಡೆದಿವೆ’ ಎಂದು ಡಾ. ದೇಸಾಯಿ ವಿವರಿಸಿದರು.

ಐಐಟಿ ಧಾರವಾಡದ ಡಾ. ಬಾಲಚಂದ್ರ ಟೇಂಬೆ, ಡಾ. ನಾರಾಯಣ ಎಸ್. ಪುಣೇಕರ್, ಡಾ. ಮಹಾದೇವ ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT