ಶನಿವಾರ, ಮೇ 28, 2022
31 °C
ನಿರ್ಲಕ್ಷ್ಯಕ್ಕೆ ಕಾದಿದೆ ಶಾಸ್ತಿ

ಅನಧಿಕೃತ ಕಟ್ಟಡ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಕ್ರಮ ಅಥವಾ ಅನಧಿಕೃತ ಕಟ್ಟಡಗಳ ವಿರುದ್ಧ ಕಾನೂನು ಕ್ರಮ ಜರುಗಿಸದೇ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಆದೇಶ ಮಾಡಿದೆ.

ಶಿವಮೊಗ್ಗದ ಕೆ.ಎಸ್. ಈಶ್ವರಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿದ್ದು, ಅರ್ಜಿದಾರರಿಗೆ ₹ 50 ಸಾವಿರ ದಂಡ ವಿಧಿಸಿದೆ.

‘ಕರ್ನಾಟಕ ಮುನ್ಸಿಪಲ್‌ ಕಾಯ್ದೆ–1976ರ ಅಡಿ ಸಹಾಯಕ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ಅಥವಾ ಅಕ್ರಮ ಕಟ್ಟಡಗಳ ತಪಾಸಣೆ ನಡೆಸಬೇಕು. ಒಂದು ವೇಳೆ ಅಂತಹ ಕಟ್ಟಡಗಳು ಕಂಡುಬಂದರೆ ತಡಮಾಡದೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ.

‘ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ ಹಾಗೂ ತಮ್ಮ ಕರ್ತವ್ಯದಲ್ಲಿ ಲೋಪ ಎಸಗಿದರೆ ಅಂತಹ ಅಧಿಕಾರಿಗಳ ವಿರುದ್ಧ ಪಾಲಿಕೆಗಳ ಆಯುಕ್ತರು ಇಲಾಖಾ ವಿಚಾರಣೆ ನಡೆಸಬೇಕು. ತಪ್ಪೆಸಗಿರುವುದು ಕಂಡುಬಂದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ತಿಳಿಸಿದೆ.

‘ಅರ್ಜಿದಾರರು ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡಬೇಕು. ಅರ್ಜಿದಾರರ ವಿರುದ್ಧ ಕೈಗೊಂಡಿರುವ ಕ್ರಮವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು’ ಎಂದು ನ್ಯಾಯಪೀಠ ಮಹಾನಗರ ಪಾಲಿಕೆಗೆ ಆದೇಶಿಸಿದೆ. ಅಕ್ರಮ ಕಟ್ಟಡ ತೆರವಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಈಶ್ವರಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು.

‘ಆಡಳಿತಾತ್ಮಕ ಅಸಹಿಷ್ಣುತೆ ಸಲ್ಲದು’
‘ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧದ ಆಡಳಿತಾತ್ಮಕ ಸಹಿಷ್ಣುತೆ ಸಲ್ಲದು. ನಾಗರಿಕರು ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲು ಮುಂದಾದರೆ ಅಂತಹುದನ್ನು ಕಠಿಣ ಕ್ರಮಗಳ ಮೂಲಕ ಹತ್ತಿಕ್ಕಬೇಕು. ಅಕ್ರಮಗಳಿಗೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟರೆ ಅವರ ವಿರುದ್ಧವೂ ಅಷ್ಟೇ ಕಠಿಣ ಕ್ರಮ ಕೈಗೊಳ್ಳಬೇಕು‘ ಎಂದು ನ್ಯಾಯಪೀಠ ತಾಕೀತು ಮಾಡಿದೆ.

*
ಸಾಮಾನ್ಯ ಜನರು ಅಕ್ರಮ ಅಥವಾ ಅನಧಿಕೃತ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಅಧಿಕಾರಿಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಲಾಭ ಪಡೆಯುತ್ತಾರೆ. ಇದರಿಂದ ಜನರೂ ವಂಚನೆಗೆ ಒಳಗಾಗುತ್ತಾರೆ.
-ಎಂ.ನಾಗಪ್ರಸನ್ನ, ನ್ಯಾಯಮೂರ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು