ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಪ್ರಕರಣ: ನಿಂಬಾಳ್ಕರ್‌, ಅಜಯ್‌ ಹಿಲೊರಿ ಪ್ರಾಸಿಕ್ಯೂಷನ್‌ಗೆ ಅನುಮತಿ

ಬಹುಕೋಟಿ ರೂಪಾಯಿ ವಂಚನೆ
Last Updated 14 ಸೆಪ್ಟೆಂಬರ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಹೇಮಂತ್‌ ಎಂ.ನಿಂಬಾಳ್ಕರ್ ಮತ್ತು ಅಜಯ್‌ ಹಿಲೊರಿ ಸೇರಿದಂತೆ ಒಟ್ಟು ಐವರು ಪೊಲೀಸ್‌ ಅಧಿಕಾರಿಗಳನ್ನು ಪ್ರಾಸಿಕ್ಯೂಷನ್‌ಗೆ ಗುರಿಪಡಿಸಲು ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿದೆ.

ಐಎಂಎ ಹಗರಣ ನಡೆದಾಗ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಡಿವೈಎಸ್‌ಪಿ ಆಗಿದ್ದ ಇ.ಬಿ. ಶ್ರೀಧರ್‌, ಕಮರ್ಷಿಯಲ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಎಂ.ರಮೇಶ ಮತ್ತು ಅದೇ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಪಿ. ಗೌರಿಶಂಕರ್‌ ಅವರೂ ಈ ಪಟ್ಟಿಯಲ್ಲಿದ್ದಾರೆ.

ಹಗರಣದಲ್ಲಿ ಈ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಸಾಕ್ಷ್ಯಗಳು ಸಿಕ್ಕಿವೆ. ಹೀಗಾಗಿ, ಈ ಅಧಿಕಾರಿಗಳ ವಿರುದ್ಧ, ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ –2004’ (ಕೆಪಿಐಡಿಎಫ್‌ಇ) ಅಡಿ ಪ್ರಾಸಿಕ್ಯೂಷನ್‌ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಿಬಿಐ ಪತ್ರ ಬರೆದಿತ್ತು.

ಐಎಂಎ ಹಗರಣಕ್ಕೆ ಸಂಬಂಧಿಸಿ ಸಿಬಿಐ 2019ರ ಆಗಸ್ಟ್‌ 30ರಂದು ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಅಲ್ಲದೇ, ಇದೇ ಫೆಬ್ರುವರಿಯಲ್ಲಿ ನಿಂಬಾಳ್ಕರ್ ಹಾಗೂ ಹಿಲೊರಿ ವಿರುದ್ಧವೂ ಎಫ್ಐಆರ್ ದಾಖಲಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ, ಹೇಮಂತ್ ನಿಂಬಾಳ್ಕರ್ ಮತ್ತು ಅಜಯ ಹಿಲೊರಿ ಅವರು ಐಎಂಎ ಪರವಾಗಿ ವರದಿ ಸಿದ್ಧಪಡಿಸಿ ಕ್ಲೀನ್ ಚಿಟ್ ನೀಡಿದ್ದನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ಪತ್ರ ಬರೆದಿತ್ತು.

ಇನ್ನು ಐಎಂಎ ಸಮೂಹದ ಕಂಪನಿಗಳ ವಿರುದ್ಧ ದೂರು ಕೇಳಿಬಂದಾಗ ಹೇಮಂತ್ ನಿಂಬಾಳ್ಕರ್ ತನಿಖೆ ನಡೆಸಿದ್ದರು. ಐಎಂಎ ಪರವಾಗಿ ವರದಿಗಳನ್ನು ಸಿದ್ಧಪಡಿಸಿದ್ದರು. ಹಾಗಾಗಿ, ಐಎಂಎ ವಿರುದ್ಧ ಕ್ರಮ ಜರುಗಿಸಲು ಯಾರೂ ಮುಂದಾಗಲಿಲ್ಲ. ಐಎಂಎ ವಂಚನೆ ಮುಂದುವರಿಯಲು ಇದು ಕಾರಣವಾಯಿತು ಎಂದೂ ಹೇಳಿದೆ.

ಅಕ್ರಮ ಎಸಗಲು ಐಎಂಎ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ಅವರಿಂದ ಪೊಲೀಸ್‌ ಅಧಿಕಾರಿಗಳು ಹಣ ಪಡೆದಿರುವ ಬಗ್ಗೆಯೂ ಸಿಬಿಐ ಪತ್ರದಲ್ಲಿ ಉಲ್ಲೇಖಿಸಿದೆ. ಐಎಂಎ ವಂಚನೆ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸಿದ್ದ ಕೆಳಹಂತದ ಅಧಿಕಾರಿಗಳಾಗಿದ್ದ ರಮೇಶ ಅವರು ನೀಡಿದ್ದ ವರದಿಯನ್ನು ಹಿಲೊರಿ ಮುಚ್ಚಿಹಾಕಲು ಯತ್ನಿಸಿದ್ದರು. ಇದಕ್ಕಾಗಿ, ಐಎಂಎಯಿಂದ ಅನೇಕ ಬಾರಿ ಹಣ, ಪೀಠೋಪಕರಣಗಳ ಬಿಲ್ ಪಾವತಿಯಂತಹ ಲಾಭ ಮಾಡಿಕೊಂಡಿದ್ದರು ಎಂದು ಸಿಬಿಐ ಉಲ್ಲೇಖಿಸಿತ್ತು.

ಸದ್ಯ ಬಂಧನದಲ್ಲಿರುವ ಐಎಂಎ ಕಂಪನಿ ಮಾಲೀಕ ಹಾಗೂ ಹಗರಣದ ಮುಖ್ಯ ಆರೋಪಿ ಮೊಹಮ್ಮದ್‌‌ ಮನ್ಸೂರ್ ತನಿಖೆ ವೇಳೆ ನೀಡಿರುವ ಹೇಳಿಕೆಗಳ ಆಧಾರದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೊಂಡಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT