ಬುಧವಾರ, ಆಗಸ್ಟ್ 10, 2022
24 °C
₹ 4,235 ಕೋಟಿ ಸಂಗ್ರಹ l 62,609 ಹೂಡಿಕೆದಾರರಿಗೆ 1,913 ಕೋಟಿ ವಂಚನೆ

ಐಎಂಎ ಬಹುಕೋಟಿ ಹಗರಣ: ಉಳಿದದ್ದು ₹ 977 ಕೋಟಿ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಹುಕೋಟಿ ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿ, ಅಧಿಕ ಲಾಭದ ಆಮಿಷ ತೋರಿಸಿ 94,757 ಮಂದಿಯಿಂದ ಸಂಗ್ರಹಿಸಿದ ಮೊತ್ತ ₹4,235 ಕೋಟಿ!

ಈ ಮೊತ್ತದಲ್ಲಿ, ಹೂಡಿಕೆದಾರರಿಗೆ ಕಂಪನಿ ₹1,344.65 ಕೋಟಿ ವಾಪ‍ಸು ನೀಡಿದೆ. ಇನ್ನೂ ₹1,913 ಕೋಟಿ ಪಾವತಿಸಲು ಬಾಕಿ ಇದೆ. ಐಎಂಎ ಜುವೆಲ್ಲರಿಯೂ ಸೇರಿದಂತೆ ಕಂಪನಿಯ ಎಲ್ಲ ಘಟಕಗಳಲ್ಲಿ ಈಗ ಉಳಿದಿರುವುದು ಕೇವಲ ₹ 977.47 ಕೋಟಿ.

ಕಂಪನಿಯಲ್ಲಿ ಹೂಡಿಕೆ ಮಾಡಿದವರ ಡೇಟಾ ಬೇಸ್ ಅನ್ನು ಫೊರೆನ್ಸಿಕ್‌ ಆಡಿಟ್‌ ಸಂಸ್ಥೆಯಾದ ಡೆಲಾಯಿಟ್ ಲೆಕ್ಕ ಪರಿಶೋಧನೆಗೆ ಒಳಪಡಿಸಿದಾಗ ಈ ಅಂಶ ಬಹಿರಂಗವಾಗಿದೆ. ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಕಂಪನಿಯ ವ್ಯವಹಾರವನ್ನು ಪರಿಶೀಲಿಸಿ ವರದಿ ನೀಡುವ ಕೆಲಸವನ್ನು ಡೆಲಾಯಿಟ್‌ಗೆ ವಹಿಸಿತ್ತು.

ಕಂಪನಿಯಲ್ಲಿ ಎಷ್ಟು ಮಂದಿ ಹೂಡಿಕೆ ಮಾಡಿದ್ದಾರೆ? ಆ ಹಣ ಯಾವ ರೀತಿ ವೆಚ್ಚವಾಗಿದೆ? ಯಾರ ಖಾತೆಗಳಿಗೆ ಎಷ್ಟು ಹಣ ಜಮೆ ಆಗಿದೆ? ದುರ್ಬಳಕೆಯಾದ ಹಣ ಎಷ್ಟು? ಮುಂತಾದ ಮಾಹಿತಿಗಳ ಸಹಿತ ಕಂಪನಿಯ ಎಲ್ಲ ವ್ಯವಹಾರಗಳನ್ನು ಅಧ್ಯಯನ ನಡೆಸಿ ಡೆಲಾಯಿಟ್‌ ವರದಿ ಸಲ್ಲಿಸಿದೆ. ಇದರಲ್ಲಿರುವ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಒಟ್ಟು ಹೂಡಿಕೆದಾರರ ಪೈಕಿ 32,148 ಮಂದಿಗೆ ಕಂಪನಿಯು ಪೂರ್ಣವಾಗಿ ಹಣ ಮರಳಿಸಿದೆ. ಹೀಗಾಗಿ, ಆ ಗ್ರಾಹಕರ ಖಾತೆಗಳನ್ನು ಕಂಪನಿ ಸ್ಥಗಿತಗೊಳಿಸಿದೆ. ಇನ್ನೂ 62,609 ಖಾತೆಗಳು ಚಾಲ್ತಿಯಲ್ಲಿದ್ದು, ಅವರು ವಂಚನೆಗೆ ಒಳಗಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷ ಗುಪ್ತ, ‘ಕಂಪನಿಯ ಖಾತೆಯಲ್ಲಿ ಇರುವ ಮೊತ್ತ ಹೊರತುಪಡಿಸಿದರೆ, ಗ್ರಾಹಕರಿಗೆ ಮರಳಿಸಲು ಇನ್ನೂ ₹ 1,000 ಕೋಟಿ ಬೇಕಾಗಿದೆ. ಕಂಪನಿಗೆ ಸೇರಿದ ನಗದು, ಚಿನ್ನ, ಆಸ್ತಿ ಸೇರಿ ಒಟ್ಟು ₹ 450 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ’ ಎಂದರು.

‘ಹಣ ಕಳೆದುಕೊಂಡವರಿಂದ ಶೀಘ್ರದಲ್ಲೇ ಆನ್‌ಲೈನ್‌ ಮೂಲಕ ಕ್ಲೇಮ್‌ ಅರ್ಜಿ ಆಹ್ವಾನಿಸಲಾಗುವುದು. ಆಧಾರ್‌ ಮೂಲಕ ಹೂಡಿಕೆದಾರರ ‘ಗುರುತು’ ದೃಢೀಕರಿಸಿಕೊಳ್ಳಲಾಗುವುದು. ಹಣ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಕ್ಲೇಮುದಾರರು ಅಪ್‌ಲೋಡ್‌ ಮಾಡಬೇಕು’ ಎಂದು ವಿವರಿಸಿದರು.

ಐಎಂಎ ಕಂಪನಿ– ಹೂಡಿಕೆದಾರರ ಮಾಹಿತಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು