ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನಕ್ಕೆ ಹೊರತಾದ ಸಾಹಿತ್ಯ ಸೃಷ್ಟಿ ಅಸಾಧ್ಯ’

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಲ್ಲೇಪುರಂ ಜಿ. ವೆಂಕಟೇಶ್
Last Updated 23 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಜೀವನ ಮತ್ತು ಸಾಹಿತ್ಯ ಒಂದೇ ಸ್ತರದಲ್ಲಿ ಚಲಿಸುತ್ತವೆ. ಜೀವನವನ್ನು ಹೊರತುಪಡಿಸಿದ ಸಾಹಿತ್ಯ ಸೃಷ್ಟಿ ಎಂದಿಗೂ ಸಾಧ್ಯವಿಲ್ಲ’ ಎಂದು ಬಹುಶ್ರುತ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಸೃಷ್ಟಿಯಾಗಿರುವಷ್ಟು ವಿಭಿನ್ನ, ವಿಫುಲ ಸಾಹಿತ್ಯ ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ. ಕನ್ನಡದ ಆಧುನಿಕ ಸಾಹಿತ್ಯವಂತೂ ಸೀಮಾತೀತ ವಿಸ್ತಾರವನ್ನು ಹೊಂದಿದೆ’ ಎಂದರು.

ಪೋಷಕರಿಗೆ ಇಂಗ್ಲಿಷ್‌ ವ್ಯಾಮೋಹ: ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ‘ಅನಿಕೇತನ’ ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ, ‘ಪೋಷಕರಿಗೆ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿದೆ. ಕನ್ನಡ ಭಾಷಾ ಬೆಳವಣಿಗೆ ದೃಷ್ಟಿಯಿಂದ ಇದು ಆರೋಗ್ಯಕರ ಬೆಳವಣಿಗೆಯಲ್ಲ’ ಎಂದರು.

‘ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕನ್ನಡ ಭಾಷೆಯ ಬೋಧನೆ ಅಗತ್ಯ. ಪೋಷಕರು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು’ ಎಂದರು.

ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿ, ‘ಕೊರೊನಾ ಕಾಲಘಟ್ಟದ ನಡುವೆಯೂ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಕಾರ್ಯಕ್ರಮ ರೂಪಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಿಸುವಲ್ಲಿ ಅಕಾಡೆಮಿ ಯಶಸ್ವಿಯಾಗಿದೆ’ ಎಂದರು.

ಸಾಧಕರಿಗೆ ಸನ್ಮಾನ
ಕನ್ನಡದ ಹಿರಿಯ ಕಾದಂಬರಿಗಾರ್ತಿ ಉಡುಪಿಯ ಉಷಾ ಪಿ.ರೈ, ಗುಬ್ಬಿ ತಾಲ್ಲೂಕು ಕಲ್ಲೂರಿನ ಹಿರಿಯ ವಿಮರ್ಶಕ ಪ್ರೊ. ಕೆ.ಜಿ.ನಾಗರಾಜಪ್ಪ, ಸಾಹಿತಿ ಮತ್ತು ಪತ್ರಿಕೋದ್ಯಮಿ ಡಾ.ಬಾಬು ಕೃಷ್ಣಮೂರ್ತಿ, ಕೊಪ್ಪಳದ ವಿದ್ವಾಂಸ ಡಾ.ವೀರಣ್ಣ ರಾಜೂರ, ಚಿತ್ರದುರ್ಗದ ಹಿರಿಯ ಸಂಶೋಧಕ ಪ್ರೊ.ಲಕ್ಷ್ಮಣ ತೆಲಗಾವಿ ಅವರಿಗೆ 2019ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

**

ನನ್ನದು ಹೋರಾಟದ ಬದುಕು, ಬರಹ. ಸತ್ಯವನ್ನು ಹೇಳಿ ಹಲವರಿಂದ ಮತ್ತು ಹಲವು ಪ್ರಶಸ್ತಿಗಳಿಂದ ದೂರವಾಗಿ ಉಳಿದೆ. ಒಂಟಿಯಾದೆ. ಆದರೂ ವಿಮರ್ಶೆ ಮೂಲಕ ಸತ್ಯವನ್ನು ಹೇಳಿದ ತೃಪ್ತಿ ನನಗಿದೆ.
-ಪ್ರೊ.ಕೆ.ಜಿ. ನಾಗರಾಜಪ್ಪ,ಹಿರಿಯ ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT