ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಬ್ದಾರಿ ಮರೆತ ಸಚಿವರಿಂದ ವಿಜಯೋತ್ಸವ: ಎಚ್‌.ಡಿ. ಕುಮಾರಸ್ವಾಮಿ ಟೀಕೆ

Last Updated 9 ಆಗಸ್ಟ್ 2021, 4:08 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಮೂರನೇ ಅಲೆಯ ಭೀತಿ, ನೆರೆ ಆತಂಕಗಳ ಮಧ್ಯೆಯೂ ರಾಜ್ಯ ಸರ್ಕಾರದ ನೂತನ ಸಚಿವರು ವಿಜಯೋತ್ಸವ, ಸಂಭ್ರಮಾಚರಣೆ ನಡೆಸಿರುವ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನೂತನ ಸಚಿವರ ವಿಜಯೋತ್ಸವ, ಮಾಡಿಸಿಕೊಂಡಿರುವ ಸನ್ಮಾನಗಳನ್ನು ಕಂಡು ಜನ ನಾಚಿಕೆಪಟ್ಟಿದ್ದಾರೆ ಎಂದಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟದ ಸಚಿವರಿಗೆ ತಾತ್ಕಾಲಿಕವಾಗಿ ಒಂದೊಂದು ಜಿಲ್ಲೆಯ ಉಸ್ತುವಾರಿ ನೀಡಿ, ಅಲ್ಲಿನ ಪ್ರವಾಹ ಪರಿಸ್ಥಿತಿ, ಕೋವಿಡ್‌ ಸ್ಥಿತಿಗಳ ನಿರ್ವಹಣೆ ಮಾಡುವಂತೆ ಸೂಚಿಸಿದ್ದರು. ಬೊಮ್ಮಾಯಿ ಅವರು ಸದಾಶಯದಿಂದ ಜವಾಬ್ದಾರಿ ನೀಡಿದರೆ, ಜವಾಬ್ದಾರಿ ಮರೆತ ಸಚಿವರು ತಮಗೆ ನಿಗದಿಪಡಿಸಿದ ಜಿಲ್ಲೆಯಲ್ಲಿ ವಿಜಯೋತ್ಸವ ಆಚರಿಸಿದ್ದಾರೆ’ ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಹೊಸ ಸಚಿವರು ತಮಗೆ ನಿಗದಿಪಡಿಸಿದ ಜಿಲ್ಲೆಗಳಿಗೆ ಹೋದಾಗ ಮಾಡಿಸಿಕೊಂಡ ಸನ್ಮಾನಗಳು, ವಿಜಯೋತ್ಸವ, ಅದ್ದೂರಿ ಸ್ವಾಗತ ಕಂಡು ಜನ ನಾಚಿಕೆಪಟ್ಟಿದ್ದಾರೆ, ಮರುಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾದರೂ ಸರ್ಕಾರ ಮತ್ತು ಅದರ ವರ್ತನೆ ಬದಲಾದ ಭಾವನೆ ಯಾರಲ್ಲಿಯೂ ಕಾಣುತ್ತಿಲ್ಲ. ಮುಖ್ಯಮಂತ್ರಿ ಬದಲಾದರೆ ಸಾಲದು ಸಿಎಂ ರೀತಿಯೇ ಸಚಿವರೂ ನಡೆದುಕೊಳ್ಳಬೇಕು’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ, ನೆರೆ ಆತಂಕಗಳು ದೂರವಾಗಿಲ್ಲ. ಕೋವಿಡ್ 3ನೇ ಅಲೆಯೊಂದು ಬಾಗಿಲ ಬಳಿಯಲ್ಲೇ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕೋವಿಡ್‌ ಪ್ರಕರಣಗಳೂ ಏರುತ್ತಿವೆ. ನೆರೆ ಆತಂಕವೂ ದೂರವಾಗಿಲ್ಲ. ಸಚಿವ ಸ್ಥಾನ ಸಿಕ್ಕಿರಿವುದು ಸನ್ಮಾನ ಸ್ವೀಕರಿಸಲಲ್ಲ. ಸೇವೆ ನೀಡಲು ಎಂಬುದು ಈ ಮಂತ್ರಿ ಕೂಟಕ್ಕೆ ಅರಿವಾಗಲಿ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT