ಮಂಗಳವಾರ, ಅಕ್ಟೋಬರ್ 19, 2021
23 °C
ಬೊಮ್ಮಾಯಿಗೆ ‘ಒತ್ತಡ’ ಮುಕ್ತ ಆಡಳಿತ: ವರಿಷ್ಠರ ತಂತ್ರ

ಯಡಿಯೂರಪ್ಪ–ವಿಜಯೇಂದ್ರರಿಗೆ ಕಡಿವಾಣ ಹಾಕಲು ‘ದಾಳಿ’ ಅಸ್ತ್ರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒತ್ತಡ ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹಾದಿ ಸುಗಮ ಮಾಡುವುದು ಮತ್ತು ಸರ್ಕಾರದ ಮೇಲೆ ನಿಯಂತ್ರಣ ಸಾಧಿಸುವ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರ ಯತ್ನಕ್ಕೆ ಕಡಿವಾಣ ಹಾಕಲು ಅವರ ಆಪ್ತರ ಮೇಲೆ ಆದಾಯ ತೆರಿಗೆ(ಐ.ಟಿ) ಇಲಾಖೆ ದಾಳಿ ನಡೆದಿದೆ ಎಂಬ ವ್ಯಾಖ್ಯಾನ ಬಿಜೆಪಿ ವಲಯದಲ್ಲಿ ನಡೆದಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ವಿಜಯೇಂದ್ರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಐದಾರು ತಿಂಗಳಿನಿಂದ ಮಾಹಿತಿ ಕಲೆ ಹಾಕಿದ ಐ.ಟಿ ಅಧಿಕಾರಿಗಳು ವಿಜಯೇಂದ್ರ ಆಪ್ತರ ಮೇಲೆ ದಾಳಿ ನಡೆಸಿದ್ದಾರೆ. ಈ ಬೆನ್ನಲ್ಲೇ, ದಾಳಿಯ ರಾಜಕೀಯ ಆಯಾಮ ಚರ್ಚೆಯ ಮುನ್ನೆಲೆಗೆ ಬಂದಿದೆ. 

ವಿವಿಧ ನೇಮಕಗಳು, ಕಾಮಗಾರಿಗಳ ಗುತ್ತಿಗೆ, ಅಧಿಕಾರಿಗಳ ವರ್ಗಾವಣೆಗಳೂ ಸೇರಿ ಸಾಕಷ್ಟು ವಿಚಾರಗಳಲ್ಲಿ ಇಬ್ಬರೂ ಒತ್ತಡ ಹೇರುತ್ತಿದ್ದು, ಇದರಿಂದಾಗಿ ಬೊಮ್ಮಾಯಿ ಅವರು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ವಾತಾವರಣ ಸೃಷ್ಟಿಯಾಗಿರುವುದು ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ. ಪಕ್ಷದಲ್ಲಿ ಯಾರೂ ಯಾರ ಮೇಲೂ ಸವಾರಿ ಮಾಡುವುದು ಅಥವಾ ಬ್ಲಾಕ್‌ಮೇಲ್‌ ತಂತ್ರವನ್ನು ಅನುಸರಿಸಿ ತಮ್ಮ ಕಾರ್ಯಸಾಧಿಸುವುದಕ್ಕೆ ಸಾಧ್ಯವಿಲ್ಲ. ಅಂತಹ ಪ್ರಯತ್ನ ಮಾಡಿದರೆ, ಕಡಿವಾಣ ಹಾಕಲು ನಾವು ಇದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ನೀಡುವುದು ಐ.ಟಿ ದಾಳಿ ಉದ್ದೇಶ ಇದ್ದಂತಿದೆ ಎಂಬ ಚರ್ಚೆಯೂ ಶುರುವಾಗಿದೆ.

ಬೊಮ್ಮಾಯಿ ಮೊದಲ ಬಾರಿ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಸಚಿವರ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರನ್ನು ಸೇರಿಸುವಂತೆ ಯಡಿಯೂರಪ್ಪ ಅವರು ಬೊಮ್ಮಾಯಿ ಅವರಿಗೆ ದೂರವಾಣಿ ಮೂಲಕ ಪದೇ ಪದೇ ಒತ್ತಡ ಹೇರಿದ್ದರು. ಆದರೆ, ಪಕ್ಷದ ವರಿಷ್ಠರು ಇದಕ್ಕೆ ಮಣಿಯಲಿಲ್ಲ. ತಾವು ಅಂದುಕೊಂಡಿದ್ದನ್ನೇ ವರಿಷ್ಠರು ಮಾಡಿದ್ದರು.

ಆದರೆ, ಯಡಿಯೂರಪ್ಪ ಅವರ ಪ್ರಭಾವಳಿಯಿಂದ ಬೊಮ್ಮಾಯಿ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿರುವುದನ್ನು ವರಿಷ್ಠರು ಗಮನಿಸಿದ್ದಾರೆ. ಹೀಗಾಗಿ ಎಲ್ಲಿ ಒತ್ತಿ ಹಿಡಿದರೆ ಎಲ್ಲಿ ಸರಿ ಹೋಗಬಹುದು ಎಂಬ ಪ್ರಯೋಗ ಈಗ ನಡೆದಿದೆ ಎಂಬ ವಿಶ್ಲೇಷಣೆಯೂ ನಡೆದಿದೆ.

‘ಹಾನಗಲ್‌ ಮತ್ತು ಸಿಂದಗಿ ಉಪಚುನಾವಣೆಗೂ ಮೊದಲೇ ತಮ್ಮನ್ನು ಸಚಿವರನ್ನಾಗಿ ಮಾಡಬೇಕು ಎಂಬ ಒತ್ತಡವನ್ನೂ ವಿಜಯೇಂದ್ರ ಹೇರಿದ್ದರು. ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಾನಗಲ್‌ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಅಲ್ಲಿಗೆ ಟಿಕೆಟ್‌ಗಾಗಿ ಶಿಫಾರಸು ಮಾಡಬೇಕು ಎಂದೂ ಒತ್ತಾಯಿಸಿದ್ದರು’ ಎಂದೂ ಮೂಲಗಳು ಹೇಳಿವೆ.

ಈ ಮಧ್ಯೆ ಉಪಚುನಾವಣೆಯ ಉಸ್ತುವಾರಿಗಳ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲದಿರುವ ಬಗ್ಗೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಪಕ್ಷದ ನಾಯಕರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ, ಉಸ್ತುವಾರಿ ಪಟ್ಟಿಗೆ ವಿಜಯೇಂದ್ರ ಹೆಸರು ಸೇರಿಸಲಾಯಿತು. ಆದರೆ, ಹಾನಗಲ್‌ ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆಯನ್ನು ವರಿಷ್ಠರು ತಮ್ಮ ವಿವೇಚನೆಗೆ ಅನುಗುಣವಾಗಿ ಮಾಡಿದ್ದಾರೆ. ಸಂಸದ ಶಿವಕುಮಾರ ಉದಾಸಿ ಪತ್ನಿ ರೇವತಿ ಅವರಿಗೆ ಟಿಕೆಟ್‌ ನೀಡಬೇಕು ಎಂಬ ರಾಜ್ಯದ ಶಿಫಾರಸ್ಸನ್ನು ವರಿಷ್ಠರು ತಳ್ಳಿ ಹಾಕಿದ್ದಾರೆ.

ಯಡಿಯೂರಪ್ಪ ಅವರ ಆಪ್ತ ವಲಯದ ವ್ಯಕ್ತಿಗಳ ಮೇಲೆ ನಡೆದಿರುವ ಐಟಿ ದಾಳಿ ಪಕ್ಷದಲ್ಲಿ ಹಲವರಿಗೆ ಆಘಾತ ಮೂಡಿಸಿದೆ. ಹೀಗಾಗಿ ಮುಂದೆ ಯಾವುದೇ ಹೆಜ್ಜೆ ಇಡಬೇಕಾದರೂ ಯೋಚಿಸಿಯೇ ಮುಂದಡಿ ಇಡಬೇಕು ಎಂಬ ಎಚ್ಚರಿಕೆಯ ಸಂದೇಶವೂ ರವಾನೆಯಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.   

ದಾಳಿ ಹಿಂದೆ ಐಎಎಸ್‌ ಅಧಿಕಾರಿಗಳು?

ಉಮೇಶ್‌ ಮತ್ತು ಇತರರ ಮೇಲೆ ದಾಳಿಯ ಹಿಂದೆ ಕೆಲವು ಐಎಎಸ್ ಅಧಿಕಾರಿಗಳು ಇದ್ದಾರೆ ಎಂದು ಮೂಲಗಳು ಹೇಳಿವೆ.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಉಮೇಶ್‌ ಮತ್ತು ಅವರ ಅನುಚರರು, ಹಿರಿಯ ಅಧಿಕಾರಿಗಳನ್ನೇ ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದರು. ಅವರು ಹೇಳಿದ ಜಾಗಗಳಿಗೇ ಕಡತಗಳನ್ನು ತಂದು ಕೈಕಟ್ಟಿ ನಿಲ್ಲುವಂತೆ ವರ್ತಿಸುವ ಜತೆಗೆ ಮತ್ತು ಏಕ ವಚನದಲ್ಲಿ ಮಾತನಾಡಿಸುತ್ತಿದ್ದರು. ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಿಸಿದ್ದ ವ್ಯವಹಾರಗಳನ್ನು ಖುದ್ದು ಉಮೇಶ್‌ ನೋಡಿಕೊಳ್ಳುತ್ತಿದ್ದರು. ಇವರ ವರ್ತನೆಯಿಂದ ರೋಸಿ ಹೋಗಿದ್ದ ಅಧಿಕಾರಿಗಳು ಪೂರಕ ದಾಖಲೆಗಳ ಸಮೇತ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು.

‘ಸುಮಾರು ಒಂದೂವರೆ ವರ್ಷದಿಂದ ಇವರಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನೂ ಅಧಿಕಾರಿಗಳು ಕಲೆ ಹಾಕಿದ್ದರು. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುವುದನ್ನೇ ಕಾಯುತ್ತಿದ್ದರು’ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು