ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಅಲೆಯಲ್ಲಿ 10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಏರಿಕೆ

10 ವರ್ಷದೊಳಗಿನ 61,894 ಮಕ್ಕಳಲ್ಲಿ ಸೋಂಕು
Last Updated 25 ಜುಲೈ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹತ್ತು ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಡುವ ಪ್ರಮಾಣವು ಏರುಗತಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಬಗ್ಗೆ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಮೇ ತಿಂಗಳಲ್ಲಿ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ 10 ವರ್ಷದೊಳಗಿನವರಲ್ಲಿ ಸೋಂಕು ದೃಢ ಪ್ರಮಾಣ ಸರಾಸರಿ ಶೇ 3.5ರಷ್ಟಿತ್ತು. ಇದು ಜೂನ್ ತಿಂಗಳಲ್ಲಿ ಶೇ 4ಕ್ಕೆ ಏರಿಕೆಯಾಗಿತ್ತು. ಜುಲೈ ತಿಂಗಳಲ್ಲಿ ಶೇ 4.4ಕ್ಕೆ ತಲುಪಿದೆ. ಕೋವಿಡ್ ಎರಡನೇ ಅಲೆಯಲ್ಲಿ (ಮಾ.12ರಿಂದ ಜು.23) ಈ ವಯೋಮಾನದ 61,894 ಮಕ್ಕಳು ಸೋಂಕಿತರಾಗಿದ್ದಾರೆ. 10ರಿಂದ 20 ವರ್ಷದೊಳಗಿನವರಲ್ಲಿ 1,56,789 ಮಂದಿ ಕೋವಿಡ್ ಪೀಡಿತರಾಗಿದ್ದಾರೆ.

ಕೋವಿಡ್‌ನಿಂದ ಚೇತರಿಸಿಕೊಂಡ ಕೆಲ ಮಕ್ಕಳಲ್ಲಿ ಬಹುಅಂಗಾಂಗ ಉರಿಯೂತ ಸಮಸ್ಯೆ (ಮೆಸ್ಸಿ) ಕಾಣಿಸಿಕೊಳ್ಳುತ್ತಿದೆ. ಮಕ್ಕಳ ತಜ್ಞರ ಪ್ರಕಾರ ಕೋವಿಡ್‌ನಿಂದ ಚೇತರಿಸಿಕೊಂಡ ಪ್ರತಿ ನೂರು ಮಕ್ಕಳಲ್ಲಿ ಒಂದು ಮಗು ಮೆಸ್ಸಿ ಸಮಸ್ಯೆ ಹೊಂದಿರುವುದು ಕಂಡುಬಂದಿದೆ. ಹೀಗಾಗಿ, ಈ ಕಾಯಿಲೆಯ ಚಿಕಿತ್ಸೆಗೂ ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

‘ಎರಡು ವಾರಗಳಿಂದ ಕೋವಿಡ್ ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಸ್ಪತ್ರೆಗೆ ಬರುತ್ತಿದ್ದಾರೆ. ಪ್ರವಾಸಿ ಸ್ಥಳಗಳಿಗೆ ಪ್ರಯಾಣ, ವಯಸ್ಕರ ಓಡಾಟ ಹೆಚ್ಚಳ, ಮನೆಯಲ್ಲಿನ ಸದಸ್ಯರು ತಡವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಸೇರಿದಂತೆ ವಿವಿಧ ಕಾರಣಗಳಿಂದ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ’ ಎಂದು ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ಮಕ್ಕಳ ಶ್ವಾಸಕೋಶ ತಜ್ಞ ಹಾಗೂ ಕೋವಿಡ್ ಮೂರನೇ ಅಲೆಯ ತಜ್ಞರ ಸಮಿತಿ ಸದಸ್ಯ ಡಾ.ಶ್ರೀಕಾಂತ್ ಜೆ.ಟಿ. ತಿಳಿಸಿದರು.

‘ನಾಲ್ಕನೇ ಸೆರೊ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಕ್ಕಳು (ಶೇ 59.4) ಸೋಂಕಿತರಾಗಿ, ಚೇತರಿಸಿಕೊಂಡಿದ್ದಾರೆ. ಇದು ಆಶಾದಾಯಕ ಬೆಳವಣಿಗೆ’ ಎಂದು ವಿವರಿಸಿದರು.

‘ರೂಪಾಂತರಿ ವೈರಾಣು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಅದೇ ರೀತಿ, 18 ವರ್ಷದೊಳಗಿನವರ ಮೇಲೆ ಹೆಚ್ಚಿನ ನಿಗಾ ಇಡಬೇಕಿದೆ’ ಎಂದು ರಾಜ್ಯದ ಜೀನೋಮಿಕ್ ಕಣ್ಗಾವಲು ಸಮಿತಿಯ ಸದಸ್ಯ ಡಾ. ವಿಶಾಲ್ ರಾವ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT