ಶುಕ್ರವಾರ, ಅಕ್ಟೋಬರ್ 22, 2021
29 °C
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ವೃದ್ಧಾಶ್ರಮಗಳ ಅನುದಾನ ₹15 ಲಕ್ಷಕ್ಕೆ ಏರಿಸಲು ಕ್ರಮ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ನಡೆಸುತ್ತಿರುವ ವೃದ್ಧಾಶ್ರಮಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರಸ್ತುತ ₹8 ಲಕ್ಷ ಅನುದಾನ ನೀಡಲಾಗುತ್ತಿದೆ. ಇದನ್ನು ₹15 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡಿದರು.

‘ಕೇಂದ್ರ ಸರ್ಕಾರ ₹25 ಲಕ್ಷ ಅನುದಾನ ನೀಡುತ್ತಿದೆ. ನಾವು ₹15 ಲಕ್ಷ ಕೊಟ್ಟರೆ ಇನ್ನಷ್ಟು ಉತ್ತಮವಾಗಿ ವೃದ್ಧಾಶ್ರಮಗಳನ್ನು ನಿರ್ವಹಣೆ ಮಾಡಬಹುದು. ಹೀಗಾಗಿ ಅನುದಾನ ಹೆಚ್ಚಿಸಲು ತೀರ್ಮಾನಿಸಲಾಗಿದೆ’ ಎಂದರು.

‘ಹಿರಿಯ ಜೀವಗಳು ಹಾಸ್ಯ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದನ್ನೂ ಗಂಭೀರವಾಗಿ ಪರಿಗಣಿಸಬಾರದು. ‘ನಾನು ಮಾಜಿ ಯುವಕ, ನೀನು ಭಾವಿ ಮುದುಕ’ ಎಂದು ದಿವಂಗತ ಸಿ.ಎಂ.ಉದಾಸಿ ಅವರು ಆಗಾಗ ಹೇಳುತ್ತಿದ್ದರು. ಅವರು ಬದುಕಿದಷ್ಟು ದಿನ ಲವಲವಿಕೆಯಿಂದ ಇದ್ದರು. ಬದುಕಿನ ಬಗೆಗಿನ ಸಂತೃಪ್ತ ಭಾವ ಅವರಲ್ಲಿತ್ತು. ಅದನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಆತ್ಮಚೈತನ್ಯ ಜೀವಂತವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು. 

‘ಹಿರಿಯರು ಅನುಭವದ ಭಂಡಾರ, ಸಂಪತ್ತು ಇದ್ದಂತೆ. ಈ ಸಂಪತ್ತು ನಾಡು ಹಾಗೂ ಸಮಾಜ ಕಟ್ಟಲು ಬಳಕೆಯಾಗಬೇಕು. ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಲು ಅವರ ಅನುಭವ ಬಳಕೆಯಾಗಬೇಕು’ ಎಂದರು.

‘ಲೆಕ್ಕ ಕೊಡದಿದ್ದರೆ ಎನ್‌ಜಿಒಗಳ ಅನುದಾನ ಸ್ಥಗಿತ’

‘ಖಾಸಗಿ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ತಾವು ಮಾಡುವ ಎಲ್ಲಾ ಕೆಲಸಗಳ ಬಗ್ಗೆ ದಾಖಲೆ ಇಡಬೇಕು. ಅದನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಇಲ್ಲದಿದ್ದರೆ ಅವುಗಳ ಅನುದಾನ ಸ್ಥಗಿತಗೊಳಿಸಲಾಗುತ್ತದೆ’ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಸಿದರು.

‘ಹಿರಿಯರ ಪ್ರೀತಿಗೆ ಮನಸೋಲುವ ಮನಸ್ಸುಗಳೇ ಇಲ್ಲ. ಬಾಲ್ಯದಲ್ಲಿ ಅಜ್ಜ ಅಜ್ಜಿಯ ಮನೆಗೆ ಹೋಗುವುದೇ ಒಂದು ಸಂಭ್ರಮ. ಹೀಗಾಗಿ ಶಾಲೆಗೆ ರಜೆ ಸಿಗುವುದನ್ನೇ ಕಾಯುತ್ತಿರುತ್ತಿದ್ದೆವು. ವೃದ್ಧಾಶ್ರಮ ಮತ್ತು ವೃದ್ಧಾಪ್ಯ ವೇತನದ ಸಂಸ್ಕೃತಿ ವಿದೇಶಿಯರದ್ದು. ಇದನ್ನು ತೊಡೆದುಹಾಕಬೇಕು’ ಎಂದರು.

ಸಹಾಯವಾಣಿಯ ಮೂಲಕ ಸಿಗುವ ಸೇವೆಗಳು

*ಮನೆ ಆರೈಕೆ, ಆಸ್ಪತ್ರೆ, ವೃದ್ಧಾಶ್ರಮ, ಕೋವಿಡ್‌ ಹಾಗೂ ಇನ್ನಿತರ ಸೇವೆಗಳ ಬಗ್ಗೆ ಮಾಹಿತಿ.

*ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಸೌಲಭ್ಯ, ಸರ್ಕಾರದ ಕಾರ್ಯಕ್ರಮಗಳು ಮತ್ತು ಮಾರ್ಗಸೂಚಿಗಳ ಕುರಿತ ಮಾಹಿತಿ.

*ಹಿರಿಯ ನಾಗರಿಕರ ಕಾಯ್ದೆ 2007ರ ಬಗ್ಗೆ ಅರಿವು.

*ಭಾವನಾತ್ಮಕ ಹಾಗೂ ನೈತಿಕ ಬೆಂಬಲ ನೀಡುವುದು. ಸಮಾಲೋಚನೆಗಳನ್ನು ನಡೆಸುವುದು.

ಕರೆ ಮಾಡಬೇಕಾದ ಶುಲ್ಕ ರಹಿತ ದೂರವಾಣಿ ಸಂಖ್ಯೆ: 14567

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು