ಬುಧವಾರ, ಸೆಪ್ಟೆಂಬರ್ 22, 2021
23 °C
10 ವರ್ಷಗಳಲ್ಲಿ 344 ವೈದ್ಯರ ಮೇಲೆ ದಾಳಿ

ರಾಜ್ಯದಲ್ಲಿ ವೈದ್ಯರ ಮೇಲೆ ಹೆಚ್ಚಿದ ಹಲ್ಲೆ: 9 ತಿಂಗಳಲ್ಲಿ 40 ಪ್ರಕರಣಗಳು ವರದಿ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ತಂದಿರುವ ಕಾರ್ಯ ಒತ್ತಡದಿಂದ ವೈದ್ಯರು ರಜೆ ರಹಿತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವಧಿಯಲ್ಲೇ, ಅವರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಿವೆ. ಕಳೆದ 9 ತಿಂಗಳಿನಲ್ಲಿ ಒಟ್ಟು 40 ವೈದ್ಯರ ಮೇಲೆ ಹಲ್ಲೆ ನಡೆದಿದೆ.

ವೈದ್ಯರ ರಕ್ಷಣೆಗೆ ರಾಜ್ಯದಲ್ಲಿ 2009 ರಲ್ಲಿಯೇ ಪ್ರತ್ಯೇಕ ಕಾನೂನು ರೂಪಿಸಲಾಗಿದೆ. ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದರೆ 3 ವರ್ಷ ಜೈಲು ಶಿಕ್ಷೆ ಸಹಿತ ದಂಡ ವಿಧಿಸಲು ಅವಕಾಶವಿದೆ. ಆಸ್ಪತ್ರೆಯ ವಸ್ತುಗಳನ್ನು ನಾಶ ಮಾಡಿದಲ್ಲಿ ಮೂಲ ದರದ ಮೂರು ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತದೆ. ಆದರೆ, ಈ ಕಾನೂನು ಪರಿಣಾಮಕಾರಿಯಾಗಿ ಜಾರಿ ಮಾಡದಿರುವುದು ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ತೊಡಕಾಗಿದೆ ಎನ್ನುವುದು ವೈದ್ಯರ ವಾದ.

ಚಿಕಿತ್ಸೆ ನಿರಾಕರಣೆ, ಅಧಿಕ ಶುಲ್ಕ ವಸೂಲಿ, ಸೂಕ್ತ ಚಿಕಿತ್ಸೆ ಸಿಗದೆ ರೋಗಿ ಸಾವು ಸೇರಿದಂತೆ ವಿವಿಧ ಆರೋಪಗಳನ್ನು ಮುಂದಿಟ್ಟುಕೊಂಡು ಹಲ್ಲೆ ನಡೆಸಲಾಗುತ್ತಿದೆ. ಹತ್ತು ವರ್ಷಗಳಲ್ಲಿ ರಾಜ್ಯದ 344 ವೈದ್ಯರ ಮೇಲೆ ರೋಗಿಗಳ ಸಂಬಂಧಿಗಳು ಹಲ್ಲೆ ನಡೆಸಿರುವುದು ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ (ಐಎಂಎ) ಮಾಹಿತಿ ಪ್ರಕಾರ ಕೋವಿಡ್ ಕಾಣಿಸಿಕೊಂಡ ಬಳಿಕ ಪ್ರತಿ ವಾರ ಸರಾಸರಿ ಒಂದು ಹಲ್ಲೆ ಪ್ರಕರಣ ವರದಿಯಾಗುತ್ತಿದೆ. ಇದರಲ್ಲಿ ಬೆಂಗಳೂರಿನ ಯಲಹಂಕದಲ್ಲಿ ಚಿಕಿತ್ಸೆ ನಡೆಸುತ್ತಿರುವ ವೈದ್ಯನ ಮೇಲೆ ಹಲ್ಲೆ ನಡೆಸುವ ಜತೆಗೆ ಆಂಬುಲೆನ್ಸ್ ಚಾಲಕನ ಹಲ್ಲು ಉದುರಿಸಿರುವುದು, ಬೆಳಗಾವಿಯ ಆಸ್ಪತ್ರೆಯಲ್ಲಿ ದಾಂದಲೆ ನಡೆಸಿ ಆಂಬುಲೆನ್ಸ್‌ ಸುಟ್ಟು ಹಾಕಿರುವ ಘಟನೆಗಳೂ ಸೇರಿವೆ. 

‘ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದೆ. ಹಲ್ಲೆ ನಡೆದಾಗ ವೈದ್ಯರು ಮರ್ಯಾದೆಗೆ ಅಂಜಿ, ಪೊಲೀಸ್ ಠಾಣೆಯ ಮೆಟ್ಟಿಲೇರಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಹಲವು  ಪ್ರಕರಣಗಳು ಹೊರಗಡೆ ಬರುತ್ತಿಲ್ಲ’ ಎಂದು ಹೆಸರು ಬಹಿರಂಗ‍ಪಡಿಸಲು ಇಚ್ಛಿಸದ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು. 

ಪ್ರಕರಣ ದಾಖಲಿಸಲು ಹಿಂದೇಟು: ‘ಹಲ್ಲೆ ಪ್ರಕರಣಗಳು ನಡೆದಾಗ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಗಳು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ವೈದ್ಯರನ್ನು ಹೆದರಿಸುತ್ತಿದ್ದಾರೆ. ಇದರಿಂದಾಗಿ ವೈದ್ಯರು ಅಸಹಾಯಕರಾಗಿದ್ದಾರೆ’ ಎಂದು ಐಎಂಎಯ ಕಿರುಕುಳ ನಿರ್ವಹಣೆ ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ತಿಳಿಸಿದರು. 

‘ಈ ಹಿಂದೆ ಪೊಲೀಸ್ ಮಹಾನಿರ್ದೇಶಕರು ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ
ವಾಗಿ ದೂರು  ದಾಖಲಿಸಿಕೊಳ್ಳಬೇಕು ಎಂದು ಮಾರ್ಗದರ್ಶಿ ಸೂತ್ರಗಳನ್ನು (ಎಸ್‌ಒಪಿ) ಹೊರಡಿಸಿದ್ದರು. ಆದರೆ, ಅದನ್ನು ಪೊಲೀಸರು ಪಾಲಿಸುತ್ತಿಲ್ಲ. ವೈದ್ಯರು ತಪ್ಪು ಮಾಡಿದ್ದರೆ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಮಾಡಲಿ’ ಎಂದರು. 

ರಾಜ್ಯದಲ್ಲಿ 38 ವೈದ್ಯರ ಸಾವು: ಐಎಂಎ ಕರ್ನಾಟಕ ಶಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 38 ವೈದ್ಯರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ಸೇರಿದ್ದಾರೆ. ಕೋವಿಡ್ ಕಾರ್ಯದಲ್ಲಿ ನಿರತರಾಗಿರುವ ಖಾಸಗಿ ವೈದ್ಯರಿಗೂ ಸರ್ಕಾರ ₹ 50 ಲಕ್ಷ ವಿಮಾ ಸೌಲಭ್ಯ ಒದಗಿಸಬೇಕು ಎಂದು ಐಎಂಎ ಒತ್ತಾಯಿಸಿದೆ.   

‘ಮಹಾರಾಷ್ಟ್ರ ಸರ್ಕಾರ ಖಾಸಗಿ ಆಸ್ಪತ್ರೆಗಳ ವೈದ್ಯರಿಗೂ ವಿಮೆ ಸೌಲಭ್ಯ ಒದಗಿಸಿದೆ. ಅದೇ ರೀತಿ, ಇಲ್ಲಿಯೂ ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದು  ಡಾ.ಎಸ್. ಶ್ರೀನಿವಾಸ್ ತಿಳಿಸಿದರು. 

ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣಗಳು:
2016;  31

2017;  51

2018;  45

2019;  50

2020;  40

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು