ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಪರಿವರ್ತನೆಗೆ ಭಾರತ ಧ್ವನಿಯಾಗಲಿದೆ: ಆರ್.ಕೆ. ಸಿಂಗ್‌

Last Updated 5 ಫೆಬ್ರುವರಿ 2023, 15:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಲಿನ್ಯ ತಡೆ ಮತ್ತು ಇಂಧನ ಪರಿವರ್ತನೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಆದರೆ, ದೇಶವು ಇಂಧನ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇಂಧನ ಪರಿವರ್ತನೆಗೆ ಸಂಬಂಧಿಸಿದಂತೆ ಬಡ ರಾಷ್ಟ್ರಗಳ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಲಿದೆ ಎಂದು ಕೇಂದ್ರ ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ಹೇಳಿದರು.

ಭಾನುವಾರ ನಗರದಲ್ಲಿ ಆರಂಭವಾದ ಜಿ-20 ರಾಷ್ಟ್ರಗಳ ಇಂಧನ ಪರಿವರ್ತನಾ ಗುಂಪಿನ ಸಮಾವೇಶ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿ-20 ರಾಷ್ಟ್ರಗಳು ಜಗತ್ತಿನ ಜಿಡಿಪಿಯ ಶೇಕಡ 85ರಷ್ಟು ಮತ್ತು ಜಗತ್ತಿನ ಒಟ್ಟು ವಿದೇಶಿ ವ್ಯಾಪಾರದ ಶೇ 75ರಷ್ಟನ್ನು ಹೊಂದಿವೆ. ಈ ರಾಷ್ಟ್ರಗಳು ಅಭಿವೃದ್ಧಿಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಭಾರತವು ಚರ್ಚೆಯ ಮುನ್ನೆಲೆಗೆ ತರುತ್ತಿದೆ ಎಂದರು.

2005ರ ಪ್ರಮಾಣಕ್ಕೆ ಹೋಲಿಸಿದರೆ ಮಾಲಿನ್ಯದ ಪ್ರಮಾಣವನ್ನು ಶೇ 33ರಷ್ಟು ತಗ್ಗಿಸಬೇಕು ಎಂಬ ತೀರ್ಮಾನವನ್ನು 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 2030ರ ವೇಳೆಗೆ ಭಾರತವು ಈ ಗುರಿ ತಲುಪಲಿದೆ. ನಾವು ಈಗಾಗಲೇ ಶೇ 30ರಷ್ಟು ಮಾಲಿನ್ಯ ತಗ್ಗಿಸುವ ಗುರಿ ತಲುಪುವ ಹಂತದಲ್ಲಿದ್ದೇವೆ. ಪಳೆಯುಳಿಕೆಯೇತರ ಇಂಧನ ಬಳಕೆಗೆ ಒತ್ತು ನೀಡಲಾಗುತ್ತಿದೆ. ಇಂಧನ ಲಭ್ಯತೆ, ಇಂಧನ ಭದ್ರತೆ ಮತ್ತು ಇಂಧನ ಬಳಕೆಯ ಅವಕಾಶಗಳ ಕುರಿತು ಮುಕ್ತವಾದ ಚರ್ಚೆಯನ್ನು ದೇಶವು ಬಯಸುತ್ತದೆ ಎಂದು ಹೇಳಿದರು.

ಮಾಲಿನ್ಯ ತಗ್ಗಿಸುವ ವಿಚಾರದಲ್ಲಿ ಗುರಿ ತಲುಪಲು ಬಡ ರಾಷ್ಟ್ರಗಳು ಭಾರತದಂತೆ ಸಂಪನ್ಮೂಲಗಳನ್ನು ಹೊಂದಿಲ್ಲ. ಈಗಲೂ 60ರಿಂದ 80 ಕೋಟಿಯಷ್ಟು ಜನರಿಗೆ ವಿದ್ಯುತ್‌ ಸಂಪರ್ಕವೇ ಲಭಿಸಿಲ್ಲ. ಅಂತಹ ದೇಶಗಳ ಧ್ವನಿಯಾಗಿ ಕೆಲಸ ಮಾಡಲು ನಾವು ಬಯಸುತ್ತೇವೆ. ಇಂಧನ ಬಳಕೆಯ ಅವಕಾಶ ಮತ್ತು ಇಂಧನ ಭದ್ರತೆಯ ಸಮಸ್ಯೆಗಳೇ ಪರಿಹಾರ ಆಗದೇ ಉಳಿದಿರುವಾಗ ಇಂಧನ ಪರಿವರ್ತನೆಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಕಲ್ಲಿದ್ದಲು ಅವಲಂಬಿತ ವಿದ್ಯುತ್‌ ಯೋಜನೆಗಳನ್ನು ದೇಶವು ಮುಂದುವರಿಸಲಿದೆ. ದೇಶದ ಅಭಿವೃದ್ಧಿ ಮತ್ತು ಜನರ ಜೀವನದ ಗುಣಮಟ್ಟ ಹೆಚ್ಚಳಕ್ಕೆ ಅಗತ್ಯವಿರುವಷ್ಟು ವಿದ್ಯುತ್‌ ಪೂರೈಕೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ವಿದ್ಯುತ್‌ ಯಾವ ಮೂಲದಿಂದಾದರೂ ಲಭಿಸಲಿ, ಅದನ್ನು ಪೂರೈಕೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT