ಬೋಟ್‌ನಲ್ಲಿ ಬೆಂಕಿ ಅನಾಹುತ: 11 ಜನ ಮೀನುಗಾರರ ರಕ್ಷಣೆ

ಮಂಗಳೂರು: ಇಲ್ಲಿನ ಎನ್‌ಎಂಪಿಟಿಯಿಂದ 140 ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 11 ಮಂದಿ ಮೀನುಗಾರರನ್ನು ಭಾನುವಾರ ಬೆಳಿಗ್ಗೆ ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.
ತಮಿಳುನಾಡಿನ ಐಎಫ್‌ಬಿ ಎವಿಕೆಎಂ ಬೋಟ್‌ನಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಮುಂಬೈನ ಕಡಲ ರಕ್ಷಣಾ ಸಹಕಾರ ಕೇಂದ್ರ (ಎಂಆರ್‌ಸಿಸಿ) ಮಾಹಿತಿ ಬಂದಿದ್ದು, ತಕ್ಷಣವೇ ಎಂಆರ್‌ಸಿಸಿಯ ಸಚೇತ್ ಮತ್ತು ಸುಜೀತ್ ಹಡಗುಗಳು ರಕ್ಷಣಾ ಕಾರ್ಯಾಚರಣೆ ಧಾವಿಸಿದವು. ಜೊತೆಗೆ ಅನಾಹುತಕ್ಕೀಡಾದ ಬೋಟ್‌ನ ಸನಿಹದಲ್ಲಿದ್ದ ಸರಕು ಸಾಗಣೆ ಹಡಗುಗಳಿಗೂ ಮಾಹಿತಿ ರವಾನಿಸಲಾಯಿತು. 3 ಗಂಟೆಯಲ್ಲಿಯೇ ಕರಾವಳಿ ಕಾವಲು ಪಡೆಯ ತಂಡವೂ ಸ್ಥಳಕ್ಕೆ ಧಾವಿಸಿತು.
ಪಡೆಯ ನಿಗಾ ವಿಮಾನ ಸಿಸಿ ಡ್ರೋನಿಯರ್ ಅನ್ನು ಬೋಟ್ ಇರುವ ಸ್ಥಳಕ್ಕೆ ತೆರಳಲು ಸೂಚಿಸಲಾಯಿತು. ಬೆಳಿಗ್ಗೆ 11.15ಕ್ಕೆ ವಿಮಾನವು ಬೆಂಕಿ ಅನಾಹುತ ಸಂಭವಿಸಿದ ಬೋಟ್ ಅನ್ನು ಪತ್ತೆ ಮಾಡಿತು. ಬೋಟ್‌ನಲ್ಲಿದ್ದವರ ಜೊತೆಗೆ ಸಂಪರ್ಕ ಸಾಧಿಸಿ, ಧೈರ್ಯ ತುಂಬಲಾಯಿತು.
ಮಧ್ಯಾಹ್ನ 1 ಗಂಟೆಗೆ ಸಚೇತ್ ಮತ್ತು ಸುಜೀತ್ ಹಡಗುಗಳು ಬೋಟ್ ಇರುವ ಸ್ಥಳಕ್ಕೆ ಬಂದಿದ್ದು, ಕೂಡಲೇ ಬೋಟ್‌ನಲ್ಲಿದ್ದ 11 ಜನರನ್ನು ರಕ್ಷಣೆ ಮಾಡಿದವು. ಗಾಯಗೊಂಡಿದ್ದ ಮೀನುಗಾರರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಎಲ್ಲರನ್ನು ಎನ್‌ಎಂಪಿಟಿಗೆ ಕರೆತಂದಿದ್ದು, ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್ ಸಿ.ಜಿ. ವೆಂಕಟೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.