ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ದಳಗಳ ಸಮನ್ವಯ ಮಂತ್ರ - ಅಮಿತ್‌ ಶಾ

ಆವತಿಯಲ್ಲಿ ಕೇಂದ್ರೀಯ ಪತ್ತೆದಾರಿ ತರಬೇತಿ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್‌ ಶಾ
Last Updated 1 ಜನವರಿ 2023, 6:27 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಭಯೋತ್ಪಾದನೆ, ಗಡಿ ವ್ಯಾಜ್ಯ ಸೇರಿದಂತೆ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ದೇಶದ ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸಲು ಎಲ್ಲಾ ಪೊಲೀಸ್ ವಿವಿಧ ದಳಗಳ ನಡುವೆ ಸಮನ್ವಯ ಸಾಧಿಸಿ, ಭದ್ರತೆ ಹೆಚ್ಚಿಸಲು ಕೇಂದ್ರೀಯ ಪತ್ತೆದಾರಿ ತರಬೇತಿ ಶಾಲೆಯು ಮಹತ್ವದ ವೇದಿಕೆಯಾಗಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ತಾಲ್ಲೂಕಿನ ಆವತಿಯಲ್ಲಿ ಶನಿವಾರ ಕೇಂದ್ರೀಯ ಪತ್ತೆದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಟಿಬೆಟ್ ಗಡಿ ರಕ್ಷಣಾ ದಳದ ಬೆಂಗಳೂರು ವಿಭಾಗದ ವಿವಿಧ ಕಟ್ಟಡಗಳನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಉತ್ತಮ ವಾತಾವರಣವಿರುವ ಸ್ಥಳವನ್ನು ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ಒದಗಿಸಿದೆ‌. ಪೊಲೀಸ್‌ ದಳವನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಇದರಿಂದ ದೇಶದ ಆಂತರಿಕ ಭದ್ರತೆ ಮತ್ತು ಪೊಲೀಸ್‌ ವ್ಯವಸ್ಥೆಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.

ಸಮಾಜ ನಿರಂತರವಾಗಿ ಬದಲಾಗುತ್ತಿರುತ್ತದೆ. ಅದರ ವಿಚಾರ, ಧೋರಣೆ ಹಾಗೂ ಸ್ವರೂಪಕ್ಕೆ ತಕ್ಕಂತೆ ಪೊಲೀಸ್‌ ವ್ಯವಸ್ಥೆಯು ಮೇಲ್ದರ್ಜೆಗೊಳ್ಳಬೇಕು. ಇಲ್ಲಿ ನಡೆಯುವ ಸಂಶೋಧನೆ ಆಧಾರಿಸಿ ಸಾಕಷ್ಟು ಸುರಕ್ಷತಾ ತಂತ್ರಗಳು, ರಣ ನೀತಿಯನ್ನು ಸುಲಭವಾಗಿ ರೂಪಿಸಿಕೊಳ್ಳಬಹುದು. ವಿನಿಮಯ ತಂತ್ರದೊಂದಿಗೆ ಸಮಗ್ರ ಪೊಲೀಸಿಂಗ್‌ ಬಳಕೆ ಮೂಲಕ ವಿವಿಧ ಪೊಲೀಸ್‌ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಿ ಹೊಸ ವಿಚಾರ ಕಲಿಕೆಯೊಂದಿಗೆ ಸವಾಲು ನಿವಾರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಭಾರತದಂತಹ ದೊಡ್ಡ ದೇಶದಲ್ಲಿನ ಸಂಸ್ಕೃತಿ, ಆಚರಣೆಗೆ ಅನುಗುಣವಾಗಿ ದೇಶದ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಸಂವಿಧಾನದ ರಾಜ್ಯಪಟ್ಟಿಗೆ ಸೇರಿಸಲಾಗಿದೆ. ಕಾಲಾಂತರದಲ್ಲಿ ಹೆಚ್ಚಿದ ಭಯೋತ್ಪಾದನೆ, ಆತಂಕವಾದ, ಗಡಿ ವಿವಾದಗಳು ಹೊಸ ಸವಾಲು ಒಡ್ಡಿವೆ. ಇಂತಹ ಸವಾಲುಗಳಿಗೆ ಬ್ಯೂರೊ ಆಫ್‌ ಪೊಲೀಸ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಪರಿಹಾರ ಅನ್ವೇಷಿಸುತ್ತದೆ ಎಂದರು.

ದೇಶದ ಮಹಾನಗರಗಳಲ್ಲಿ ಬಹು ಭಾಷಿಕರು ನೆಲೆಸಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಪೊಲೀಸ್ ‌ಕಾರ್ಯವೈಖರಿಗೆ ಸವಾಲಾಗಲಿದೆ. ಮಹಾನಗರಗಳ ಸುರಕ್ಷತೆಯ ಸಂಶೋಧನೆ ಮತ್ತು ಅಧ್ಯಯನ ಇಲ್ಲಿ ನಡೆಯಲಿವೆ ಎಂದರು.

ದೇಶದ ಗಡಿ ರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರು ತಮ್ಮ ಕುಟುಂಬಗಳೊಂದಿಗೆ ನೆಮ್ಮದಿಯ ಬದುಕು ನಡೆಸಲು ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ್ದಾರೆ. ಇ-ಆವಾಸ್ ಪೋರ್ಟಲ್ ಮೂಲಕ ವಸತಿ ಸೌಕರ್ಯಗಳ ಸುಧಾರಣೆಯಾಗುತ್ತಿದೆ ಎಂದು ಹೇಳಿದರು.

ಆಯುಷ್ಮಾನ್ ಆರೋಗ್ಯ ಯೋಜನೆ ಮೂಲಕ ಸೈನಿಕರ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ, ಭಾರತ ಟಿಬೆಟ್ ಗಡಿ ಪೊಲೀಸ್ ದಳದ ಮಹಾನಿರ್ದೇಶಕ ಅನೀಶ್ ದಯಾಳ್, ಹೆಚ್ಚುವರಿ ಮಹಾನಿರ್ದೇಶಕ ನೀರಜ್ ಸಿನ್ಹಾ ಮತ್ತಿತರರು ಇದ್ದರು.

ಐಟಿಬಿಪಿ ಕಟ್ಟಡ ಉದ್ಘಾಟನೆ

ಬೆಂಗಳೂರಿನಲ್ಲಿರುವ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪ್ರಾದೇಶಿಕ ಪ್ರಧಾನ ಕಚೇರಿಯ ಹಲವು ಯೋಜನೆಗಳ ಉದ್ಘಾಟಿಸಲಾಯಿತು. 120 ಸೈನಿಕರ ಬ್ಯಾರಕ್‌, 42 ವಸತಿ ಕಟ್ಟಡ, ಜಂಟಿ ಆಡಳಿತಾತ್ಮಕ ಕಟ್ಟಡ, ಅಧಿಕಾರಿಗಳ ಹಾಗೂ ಅಧೀನ ಅಧಿಕಾರಿಗಳ ಮೆಸ್ ಕಟ್ಟಡವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಲಾಯಿತು.

ಸಂಸ್ಥೆ ಕಾರ್ಯವೈಖರಿ

ಬ್ಯೂರೋ ಆಫ್‌ ಪೊಲೀಸ್ ರೀಸರ್ಚ್ ಆ್ಯಂಡ್‌ ಡೆವಲಪ್‌ಮೆಂಟ್ (ಬಿಪಿಆರ್‌ಡಿ) ಸಂಸ್ಥೆಯಡಿ ಕಾರ್ಯ ನಿರ್ವಹಿಸುವ ಕೇಂದ್ರೀಯ ಪತ್ತೆದಾರಿ ತರಬೇತಿ ಸಂಸ್ಥೆಯನ್ನು ಅರ್ಬನ್ ಪೊಲೀಸಿಂಗ್ (ಸ್ಮಾರ್ಟ್ ಸಿಟಿ ಪೊಲೀಸಿಂಗ್) ಹಾಗೂ ಬ್ಲಾಕ್ ಚೈನ್ ತಂತ್ರಜ್ಞಾನದ ಉತ್ಕೃಷ್ಟತಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಈ ಕೇಂದ್ರದಲ್ಲಿ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಸಿಪಿಒಗಳು ಹಾಗೂ ಸಿಎಪಿಎಫ್‌ಗಳ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಪೊಲೀಸ್ ಅಧಿಕಾರಿಗಳ ತನಿಖಾ ಗುಣಮಟ್ಟವನ್ನು ಸುಧಾರಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT