ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜಕ್ಕೆ ನೈರುತ್ಯ ರೈಲ್ವೆ ನೌಕರರ ಸಂಬಳದಿಂದ ₹22 ಕಡಿತ

36 ಸಾವಿರ ನೌಕರರಿಗೆ ಪಾಲಿಸ್ಟರ್ ಧ್ವಜ ನೀಡಲು ಮುಂದಾದ ನೈರುತ್ಯ ರೈಲ್ವೆ
Last Updated 12 ಆಗಸ್ಟ್ 2022, 7:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಕರೆ ನೀಡಿರುವ ‘ಮನೆಮನೆಯಲ್ಲಿ ತ್ರಿವರ್ಣ’ ಅಭಿಯಾನಕ್ಕೆ ಕೈ ಜೋಡಿಸಿರುವ ನೈರುತ್ಯ ರೈಲ್ವೆಯು, ತನ್ನ ನೌಕರರ ಸಂಬಳದಿಂದ ತಲಾ ₹22 ಕಡಿತ ಮಾಡಿಕೊಂಡು ಎಲ್ಲರಿಗೂ ಪಾಲಿ ಸ್ಟರ್ ಧ್ವಜವನ್ನು ವಿತರಿಸುತ್ತಿದೆ. ಆಗಸ್ಟ್ 13ರಿಂದ 15ರವರೆಗೆ ನಡೆ ಯಲಿರುವ ಅಭಿಯಾನದಂದು ಮನೆ ಮೇಲೆ ಧ್ವಜ ಹಾರಿಸಲು ಸೂಚನೆ ನೀಡಿದೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾ ವ್ಯಾಪ್ತಿಯನ್ನು ಹೊಂದಿರುವ ನೈರುತ್ಯ ರೈಲ್ವೆಯಲ್ಲಿ ಸುಮಾರು 36 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ರೈಲ್ವೆಯು ಒಟ್ಟು ₹7.92 ಲಕ್ಷ ಮೊತ್ತವನ್ನು ಸಂಗ್ರಹಿಸಿದೆ.

‘ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಅಭಿಯಾನದ ಯಶಸ್ಸಿಗೆ ಕೈ ಜೋಡಿಸಲು ರೈಲ್ವೆ ಇಲಾಖೆಯ 17 ವಲಯಗಳೂ ಮುಂದಾಗಿವೆ. ಟೆಂಡರ್‌ ಕರೆದು 30X20 ಅಳತೆಯ ಗುಣಮಟ್ಟದ ಪಾಲಿಸ್ಟರ್ ರಾಷ್ಟ್ರಧ್ವಜಗಳನ್ನು ಖರೀದಿಸಲಾಗಿದೆ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಸೆಲ್ಫಿ ಸ್ಟ್ಯಾಂಡ್: ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸುವುದಕ್ಕಾಗಿ, ವಲಯದ ವ್ಯಾಪ್ತಿಯ ಹಲವು ರೈಲು ನಿಲ್ದಾಣಗಳಲ್ಲಿ ಸೆಲ್ಫಿ ಸ್ಟ್ಯಾಂಡ್‌ಗಳನ್ನು ಅಳವಡಿಸಲಾಗಿದೆ. ನಿಲ್ದಾಣಗಳ ಡಿಜಿಟಲ್ ಡಿಸ್‌ಪ್ಲೇಗಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

‘ನಿಲ್ದಾಣಗಳಲ್ಲಿ ವಿಶೇಷ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಅದರಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ, ‘ಹರ್ ಘರ್ ತಿರಂಗಾ’ ವೆಬ್‌ಸೈಟ್‌ಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿರುವ ತ್ರಿವರ್ಣವನ್ನು ಪಿನ್‌ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ತಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಕಳಿಸಬಹುದಾಗಿದೆ’ ಎಂದರು.

ದೇಶ ವಿಭಜನೆ ದಿನದ ಚಿತ್ರ ಪ್ರದರ್ಶನ 14ಕ್ಕೆ
ದೇಶ ವಿಭಜನೆಯಾದ ಆಗಸ್ಟ್ 14ರಂದು ‘ವಿಭಜನೆಯ ಕರಾಳ ನೆನಪಿನ ದಿನ’ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ, ನೈರುತ್ಯ ರೈಲ್ವೆಯು ಆ ದಿನ ವಿಭಜನೆಯ ಕರಾಳ ದಿನದ ಚಿತ್ರಗಳ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ಸಚಿವಾಲಯದ ಸೂಚನೆ ಮೇರೆಗೆ ರಾಜ್ಯದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ, ತುಮಕೂರು, ಮಂಡ್ಯ, ಬಂಗಾರಪೇಟೆ, ಮೈಸೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ ಹಾಗೂ ತಮಿಳುನಾಡಿನ ಹೊಸೂರು ರೈಲು ನಿಲ್ದಾಣಗಳಲ್ಲಿ ದೇಶ ವಿಭಜನೆಯ ದಿನದ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ದೇಶ ವಿಭಜನೆ ಸಂದರ್ಭದ ಚಿತ್ರಗಳನ್ನು ಈಗಾಗಲೇ ಕಳಿಸಿ ಕೊಟ್ಟಿದೆ’ ಎಂದು ಅನೀಶ್ ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT