ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾ ಸ್ಕೂಲ್‌: ಕನ್ನಡಿಗರಿಗೆ ಸಿಗದ ನ್ಯಾಯ

ವಿಶ್ವವಿದ್ಯಾಲಯಕ್ಕೆ ಕಾನೂನು ಸಚಿವರ ಖಾರವಾದ ಪತ್ರ
Last Updated 5 ಜನವರಿ 2023, 20:31 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳ ಪ್ರವೇಶದಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಸೀಟುಗಳನ್ನು (ಸ್ಥಳೀಯ ಕೋಟಾ) ಮೀಸಲಿಡುವ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದೆ. ಈ ಕುರಿತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಶ್ವವಿದ್ಯಾಲಯದ ಕುಲಪತಿಗೆ ಖಾರವಾದ ಪತ್ರ ಬರೆದಿದ್ದಾರೆ.

ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಶೇ 25 ರಷ್ಟು ಮೀಸಲು ನೀಡುವ ಸಂಬಂಧ 2020ರಲ್ಲಿ ‘ಎನ್‌ಎಲ್‌ಎಸ್‌ಐಯು ಕಾಯ್ದೆ’ಗೆ ತಿದ್ದುಪಡಿ ಮಾಡಲಾಗಿದೆ. ಆದರೆ, ಎರಡು ವರ್ಷಗಳಿಂದ ಇದನ್ನು ಸರಿ ಯಾಗಿ ಜಾರಿ ಮಾಡಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.

ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಮೀಸಲಾತಿ ನೀಡುವ ಬದಲು ಈ ಮೀಸಲಾತಿಯನ್ನು ವಿಭಾಗೀಕರಿಸಲಾಗಿದೆ (compartmentalize). ಅಖಿಲ ಭಾರತ ರ್‍ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಗಳನ್ನು ಗಳಿಸಿರುವ ಕನ್ನಡಿಗ ವಿದ್ಯಾರ್ಥಿಗಳನ್ನು ಮೀಸಲಾತಿ ಅಡಿ ತಂದು ಸೇರಿಸ ಲಾಗುತ್ತಿದೆ. ಮೆರಿಟ್‌ ಆಧಾರದಲ್ಲಿ ಸೀಟು ಪಡೆಯುವ ಅರ್ಹತೆ ಇದ್ದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಸ್ಥಳೀಯ ಕೋಟಾಗೆ ಸೇರಿಸಿರುವುದು ಸರಿಯಲ್ಲ. ಇದು ಮೀಸಲಾತಿಯ ಆಶಯಕ್ಕೆ ವಿರುದ್ಧ ವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಅಖಿಲ ಭಾರತ ರ್‍ಯಾಂಕಿಂಗ್‌ನಲ್ಲಿ ಯಾವುದೇ ಸಾಮಾನ್ಯ ಕೋಟಾದಡಿ ಆಯ್ಕೆ ಆಗದ ವಿದ್ಯಾರ್ಥಿಗಳಿಗಾಗಿ ಮೀಸಲಾತಿ ನಿಗದಿಯ ಉದ್ದೇಶವಾಗಿದೆ. ಸಾಮಾನ್ಯ ಕೋಟಾದ ವಿದ್ಯಾರ್ಥಿಗಳು ಕರ್ನಾಟಕ ಸ್ಥಳೀಯ ಕೋಟಾದ ಜತೆಗೆ ಸೇರಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ 10 ವರ್ಷ ಶಿಕ್ಷಣ ಪಡೆ ದವರು ಈ ಕೋಟಾಗೆ ಅರ್ಹರಾಗು ತ್ತಾರೆ. ವಿಧಾನಮಂಡಲದ ಉಭಯ ಸದನ ಗಳಲ್ಲಿ ಒಮ್ಮತದಿಂದ ಅಂಗೀಕರಿಸಿದ ಕಾಯ್ದೆಯನ್ನು ಗಾಳಿಗೆ ತೂರುವ ವಿಶ್ವವಿದ್ಯಾಲಯದ ಈ ನಡವಳಿಕೆಯಿಂದ ಆಘಾತವಾಗಿದೆ ಎಂದು ಹೇಳಿದ್ದಾರೆ.

2023–24 ನೇ ಸಾಲಿನ ಪ್ರವೇಶದಲ್ಲಿ ಅಖಿಲ ಭಾರತ ರ್‍ಯಾಂಕಿಂಗ್‌ನಲ್ಲಿ ಮೆರಿಟ್‌ ಆಧಾರದಲ್ಲಿ ಅರ್ಹತೆ ಪಡೆದವರನ್ನು ಈ ವರ್ಗಕ್ಕೆ ಸೇರಿಸದೇ, ಶೇ 25 ರಷ್ಟು ಕನ್ನಡಿಗ ವಿದ್ಯಾರ್ಥಿಗಳಿಗೆ ಸೀಟು ಕೊಡ ಬೇಕು. ಇದಕ್ಕಾಗಿ ಪ್ರವೇಶದ ಸಂದ ರ್ಭದಲ್ಲಿ ನೋಂದಣಿಯನ್ನು ತಕ್ಷಣವೇ ಆರಂಭಿಸಬೇಕು ಎಂದೂ ಮಾಧುಸ್ವಾಮಿ ಸೂಚಿಸಿದ್ದಾರೆ.

2 ವರ್ಷದಲ್ಲಿ ಕನ್ನಡಿಗರಿಗಾದ ಖೋತಾ

2021ರಲ್ಲಿ 5 ವರ್ಷಗಳ ಬಿಎ ಎಲ್‌ಎಲ್‌ಬಿ ಕೋರ್ಸ್‌ಗೆ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ಇವರಲ್ಲಿ 30 ವಿದ್ಯಾರ್ಥಿಗಳು ಕರ್ನಾಟಕದವರು. ಆದರೆ, ಈ 30 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು (9 ಸಾಮಾನ್ಯವರ್ಗ,1 ಅಂಗವಿಕಲ ಸಾಮಾನ್ಯ, 2 ಎಸ್‌ಸಿ) ಅಖಿಲ ಭಾರತ ಮಟ್ಟದಲ್ಲಿ ಉತ್ತಮ ರ್‍ಯಾಂಕಿಂಗ್‌ ಪಡೆದವರು. ಆದರೆ, ಇಷ್ಟೂ ಮಂದಿಯನ್ನು ಸ್ಥಳೀಯ ಮೀಸಲಾತಿ ಕೋಟಾಗೆ ತಂದು, ಕೇವಲ 18 ಮಂದಿಗೆ ಮಾತ್ರ ಸ್ಥಳೀಯ ಕೋಟಾದಡಿ ಪ್ರವೇಶ ನೀಡಲಾಗಿದೆ. ಶೇ 15 ರಷ್ಟು ಕನ್ನಡಿಗ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗಿದೆ.

2022 ರಲ್ಲಿ 180 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. 45 ವಿದ್ಯಾರ್ಥಿಗಳು ಕರ್ನಾಟಕದವರು. ಈ ಪೈಕಿ 13 ವಿದ್ಯಾರ್ಥಿಗಳು (9 ಸಾಮಾನ್ಯ, 1 ಅಂಗವಿಕಲ–ಸಾಮಾನ್ಯ, 2 ಎಸ್‌ಸಿ) ಅಖಿಲ ಭಾರತ ರ್‍ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆದಿದ್ದರು. ಇವರನ್ನು ಸ್ಥಳೀಯ ಕೋಟಾಗೆ ಸೇರಿಸಲಾಗಿದೆ. ಉಳಿದ 32 ವಿದ್ಯಾರ್ಥಿಗಳಿಗೆ ಮಾತ್ರ ಸ್ಥಳೀಯ ಕೋಟಾದಡಿ ಪ್ರವೇಶ ನೀಡಲಾಗಿದೆ. ಕೇವಲ ಶೇ 17.7 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಮೀಸಲು ನೀಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT