ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಿಟ್ಟಿಗೆಗಳಿಂದ ಪರಿಸರಸ್ನೇಹಿ ಕಟ್ಟಡ: ಹೊಸ ಆವಿಷ್ಕಾರ

ಕುದಾಪುರ ವಿಜ್ಞಾನ ಸಂಶೋಧನಾ ಕೇಂದ್ರ
Last Updated 11 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಕುದಾಪುರದ ಭಾರತೀಯ ವಿಜ್ಞಾನ ಸಂಶೋಧನಾ ಕೇಂದ್ರವು ಹೋಬಳಿಯ ಎನ್.ಗೌರೀಪುರ ಗ್ರಾಮದಲ್ಲಿ ಹೊಸ ವಿನ್ಯಾಸದ ಮಣ್ಣಿನ ಒತ್ತಿಟ್ಟಿಗೆಗಳಿಂದ ಸಮುದಾಯ ಭವನವನ್ನು ನಿರ್ಮಿಸಿದೆ.

ಗ್ರಾಮ ಪಂಚಾಯಿತಿಗೆ ಸಮುದಾಯ ಭವನವನ್ನು ಹಸ್ತಾಂತರಿಸಿ ಮಾತನಾಡಿದ ಸಂಶೋಧನಾ ಕೇಂದ್ರದ ಪ್ರೊ.ವೆಂಕಟರಾಮ ರೆಡ್ಡಿ, ‘ಭಾರತೀಯ ವಿಜ್ಞಾನ ಸಂಶೋಧನಾ ಕೇಂದ್ರವು ಪರಿಸರಕ್ಕೆ ಪೂರಕವಾದ ಹಾಗೂ ಇಂಗಾಲವನ್ನು ಕಡಿಮೆ ಮಾಡುವ ತಂತ್ರಜ್ಞಾನವನ್ನು ಆವಿಷ್ಕರಿಸಿದೆ. ಸಾಮಾನ್ಯವಾಗಿ ಮಣ್ಣಿನಿಂದ ಇಟ್ಟಿಗೆಗಳನ್ನು ನಿರ್ಮಿಸಿ, ಸುಟ್ಟು ತಯಾರಿಸಲಾಗುತ್ತದೆ. ಆದರೆ, ಹೊಸ ತಂತ್ರಜ್ಞಾನದಲ್ಲಿ ಇಟ್ಟಿಗೆಗಳನ್ನು ಸುಡದೇ ಹೆಚ್ಚಿನ ಒತ್ತಡದಲ್ಲಿ ಒತ್ತಿ ತಯಾರಿಸಲಾಗುವುದು. ಇದು ಬಿಸಿಲು ಹೆಚ್ಚಾಗಿರುವ ಬಯಲುಸೀಮೆ ಪ್ರದೇಶಕ್ಕೆ ಸೂಕ್ತವಾಗಿದೆ’ ಎಂದು ಹೇಳಿದರು.

‘ಗ್ರಾಮೀಣ ಜನರು ಇಂಥ ಮನೆಗಳನ್ನು ನಿರ್ಮಿಸಿದಾಗ ಸಂಸ್ಥೆಯ ಸಂಶೋಧನೆ ಸಾರ್ಥಕವಾಗುತ್ತದೆ. ಈ ರೀತಿಯ ನಿರ್ಮಾಣದಲ್ಲಿ ಶೇ 20ರಿಂದ 25ರಷ್ಟು ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ. ಇಂಥ ಇಟ್ಟಿಗೆಗಳನ್ನು ತಯಾರಿಸುವ ತಂತ್ರಜ್ಞಾನ ಸೇರಿ ಅಗತ್ಯ ಎಲ್ಲ ಸಹಾಯವನ್ನು ಸಾರ್ವಜನಿಕರಿಗೆ ಸಂಸ್ಥೆ ನೀಡಲಿದೆ. ಸಮುದಾಯ ಭವನದ ಜೊತೆಗೆ ಪರಿಸರಕ್ಕೆ ಪೂರಕವಾದ ಶೌಚಾಲಯವನ್ನೂ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಗ್ರಾಮದಲ್ಲಿ ನಡೆಯುವ ಸಭೆ, ಸಮಾರಂಭ, ತರಬೇತಿ ಸೇರಿ ಇತರ ಕಾರ್ಯಕ್ರಮಗಳಿಗೆ ಬಳಸಬಹುದು. ನೈಸರ್ಗಿಕವಾಗಿ ಗಾಳಿ–ಬೆಳಕು ಇರುವಂತೆ ಕಟ್ಟಡವನ್ನು ನಿರ್ಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸಂಶೋಧನಾ ಕೇಂದ್ರದ ನಿವೃತ್ತ ಅಧಿಕಾರಿ ಪ್ರೊ.ಬಿ.ಎನ್.ರಘುನಂದನ್, ‘ವಾತಾವರಣದಲ್ಲಿ ಇಂಗಾಲದ ಅಂಶವನ್ನು ಕಡಿಮೆ ಮಾಡುವುದಕ್ಕಾಗಿ ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕಾಗಿ ಸಂಸ್ಥೆಯು 40 ವರ್ಷಗಳಿಂದ ಶ್ರಮಿಸುತ್ತಿದೆ. ಈ ತಂತ್ರಜ್ಞಾನವನ್ನು ಸಾಮಾನ್ಯರಿಗೆ ತಲುಪಿಸುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಮಣ್ಣಿನಿಂದ ತಯಾರಿಸಿದ ಒತ್ತಿಟ್ಟಿಗೆಗಳಿಂದ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಹೊರಮಠ ದೇವಾಲಯದ ಆವರಣದಲ್ಲಿ ಧ್ಯಾನಮಂದಿರ ನಿರ್ಮಿಸಲಾಗುತ್ತಿದೆ. ಇಂಥ ಕಟ್ಟಡಗಳನ್ನು ನೋಡಿದ ಜನರು ಇದೇ ಮಾದರಿಯಲ್ಲಿ ತಮ್ಮ ಮನೆಗಳನ್ನು ನಿರ್ಮಿಸುವುದರಿಂದ ನೋಡಲೂ ಆಕರ್ಷಕವಾಗಿರುತ್ತದೆ. ಕಡಿಮೆ ವೆಚ್ಚದಲ್ಲಿ ಸುಂದರ ಮನೆಯನ್ನು ಹೊಂದಬಹುದು’ ಎಂದು ಹೇಳಿದರು.

ಕುದಾಪುರ ಕ್ಯಾಂಪಸ್‌ನ ಮುಖ್ಯಸ್ಥ ಡಿ.ಆರ್.ರಾವ್, ಪ್ರೊ.ಮಾಲತಿ, ಪ್ರೊ.ಸತೀಶ್, ಡಾ.ಉಲ್ಲಾಸ್, ಎಂಜಿನಿಯರ್ ಹೇಮಂತ್, ಪಿಡಿಒ ರಾಘವೇಂದ್ರ, ಎನ್.ಮಹಾದೇವಪುರ ಗ್ರಾ.ಪಂ. ಅಧ್ಯಕ್ಷೆ ಜಯಂತಿಬಾಯಿ, ಎಸ್.ಯೋಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT