ಗುರುವಾರ , ಜೂನ್ 24, 2021
22 °C
ಯುವತಿ ಹೇಳಿಕೆ ಪಡೆಯಲು ಅನುಮತಿ ಕೋರಿದ ತನಿಖಾಧಿಕಾರಿ ಕವಿತಾ

ವಿಚಾರಣೆ: ಕ್ಷಣಕ್ಷಣದ ಕುತೂಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದೆನ್ನಲಾದ ವಿಡಿಯೊದಲ್ಲಿರುವ ಸಂತ್ರಸ್ತ ಯುವತಿಯು ನ್ಯಾಯಾಧೀಶರ ಮುಂದೆ ಹಾಜರು ಹಾಗೂ ನಂತರದ ಬೆಳವಣಿಗೆಗಳು ಕ್ಷಣಕ್ಷಣದ ಕುತೂಹಲಕ್ಕೆ ಮಂಗಳವಾರ ಕಾರಣವಾಗಿತ್ತು.

‘ತನಿಖಾಧಿಕಾರಿ ಬದಲು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಸಿಆರ್‌ಪಿಸಿ ಸೆಕ್ಷನ್ 164ರಡಿ ಹೇಳಿಕೆ ದಾಖಲಿಸಬಹುದೆ’ ಎಂಬ ಪ್ರಶ್ನೆ ಹಲವರಲ್ಲಿತ್ತು. ಹೀಗಾಗಿ, ನ್ಯಾಯಾಲಯದಲ್ಲಿ ವಿಚಾರಣೆ ಏನಾಗಬಹುದೆಂಬ ಕುತೂಹಲ ಮೂಡಿತ್ತು.

ಯುವತಿ‌ ಪರ‌ ವಕೀಲ ಕೆ.ಎನ್. ಜಗದೀಶ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 24ನೇ ಎಸಿಎಂಎಂ ನ್ಯಾಯಾಲಯ, 'ಸಿಆರ್‌ಪಿಸಿ ಸೆಕ್ಷನ್ 164ರಡಿ ಮೊದಲು ನ್ಯಾಯಾಲಯ ಹೇಳಿಕೆ ದಾಖಲು ಮಾಡಿಕೊಳ್ಳಲಿದೆ. ಅದಾದ ನಂತರ, ಪ್ರಕರಣದ ‌ತನಿಖಾಧಿಕಾರಿಯು ಯುವತಿ‌ ಹೇಳಿಕೆ ಪಡೆಯಬಹುದು' ಎಂದು ಆದೇಶಿಸಿತು.

ವಾದ ಮಂಡಿಸಿದ್ದ ಜಗದೀಶ್‌ಕುಮಾರ್ ಹಾಗೂ ಅವರ ತಂಡದಲ್ಲಿದ್ದ ವಕೀಲರು, 'ಪ್ರಕರಣ ಗಂಭೀರವಾಗಿದೆ. ಆರೋಪಿ ಮಾಜಿ‌ ಸಚಿವರಾಗಿದ್ದು, ಪ್ರಭಾವಿ ಆಗಿದ್ದಾರೆ. ಮಾಧ್ಯಮ‌ಗಳ‌ ಮೂಲಕ ಹಾಗೂ ಬಹಿರಂಗವಾಗಿಯೇ‌ ಯುವತಿಗೆ ಜೀವ‌ ಬೆದರಿಕೆ‌ ಹಾಕುತ್ತಿದ್ದಾರೆ. ಪ್ರಕರಣದ ಸಂತ್ರಸ್ತೆ ಜೀವ ಭಯದಲ್ಲಿದ್ದಾರೆ. ಈ ಬಗ್ಗೆ ಸಂತ್ರಸ್ತೆ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ' ಎಂದರು.

'ಎಸ್ಐಟಿ, ರಾಜ್ಯ ಸರ್ಕಾರ ಹಾಗೂ‌ ಪೊಲೀಸರು ಆರೋಪಿ‌ ಪರವೇ‌ ಕೆಲಸ ಮಾಡುತ್ತಿದ್ದು, ಅವರ ಮೇಲೆ ಸಂತ್ರಸ್ತೆಗೆ ವಿಶ್ವಾಸವಿಲ್ಲ. ನ್ಯಾಯಾಲಯದ‌ ಮೇಲೆ ವಿಶ್ವಾಸವಿದ್ದು, ಹೇಳಿಕೆ ದಾಖಲಿಸಿಕೊಳ್ಳಲು ಅವಕಾಶ‌ ನೀಡಬೇಕು. ಜೊತೆಗೆ, ಯುವತಿ ಹಾಗೂ ಅವರ ಕುಟುಂಬದವರಿಗೆ ಸೂಕ್ತ ಭದ್ರತೆ ನೀಡಲು ಸರ್ಕಾರಕ್ಕೆ ಸೂಚಿಸಬೇಕು' ಎಂದು ವಾದಿಸಿದರು.

ಮೆಮೊ ಸಲ್ಲಿಸಿದ್ದ ತನಿಖಾಧಿಕಾರಿ ಎಂ.ಸಿ.ಕವಿತಾ, 'ಇದುವರೆಗೂ ಯುವತಿ‌ ಮುಖ ನೋಡಿಲ್ಲ. ನೋಟಿಸ್ ನೀಡಿದರೂ ಹೇಳಿಕೆ ನೀಡಲು ಹಾಜರಾಗಿಲ್ಲ. ಅವರಿಂದ‌‌ ಮೊದಲು ಹೇಳಿಕೆ ಪಡೆಯಬೇಕು. ಅದಕ್ಕೆ‌ ಅನುಮತಿ‌ ನೀಡಿ' ಎಂದು ಕೋರಿದರು.

'ಸಿಆರ್‌ಪಿಸಿ 164ರಡಿ ಹೇಳಿಕೆ ದಾಖಲಿಸಲು ನಿಮ್ಮ ಆಕ್ಷೇಪ‌ ಇದೆಯಾ' ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅದಕ್ಕೆ ತನಿಖಾಧಿಕಾರಿ, 'ಇಲ್ಲ' ಎಂದರು. ಪೊಲೀಸರು ಆಕ್ಷೇಪಣೆ ಇಲ್ಲದ್ದನ್ನು ಪರಿಗಣಿಸಿ ನ್ಯಾಯಾಲಯ, ಯುವತಿ‌ ಹೇಳಿಕೆ‌ ಸಂಗ್ರಹಕ್ಕೆ ಆದೇಶಿಸಿತು.

ಸಂತ್ರಸ್ತೆ ನಂಬಿಕೆ ಗಳಿಸಲು ಪೊಲೀಸರ ಯತ್ನ: ‘ಎಸ್‌ಐಟಿ ಅಧಿಕಾರಿಗಳು ಹಾಗೂ ಪೊಲೀಸರು, ಆರೋಪಿ ಪರ ಇದ್ದಾರೆ’ ಎಂದು ಯುವತಿ ಇತ್ತೀಚೆಗೆ ವಿಡಿಯೊವೊಂದರಲ್ಲಿ ಆರೋಪಿಸಿದ್ದರು. ಹೀಗಾಗಿ, ಅರ್ಜಿ ವಿಚಾರಣೆ ಮುನ್ನವೇ ಸಭೆ ನಡೆಸಿದ್ದ ಪೊಲೀಸರು ಹಾಗೂ ಎಸ್‌ಐಟಿ ಅಧಿಕಾರಿಗಳು, ನ್ಯಾಯಾಲಯಕ್ಕೆ ಮೆಮೊ ಮಾತ್ರ ಸಲ್ಲಿಸಿ, ಆಕ್ಷೇಪಣೆ ದಾಖಲಿಸದಿರಲು ತೀರ್ಮಾನಿಸಿದ್ದರು ಎಂದು ಗೊತ್ತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು