ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ: ಟರ್ಮಿನಲ್‌–2 ಎಂಬ ‘ಕಿನ್ನರಲೋಕ’

ಕಲೆ–ಸಂಸ್ಕೃತಿಯ ಬೆಸುಗೆ; 180 ಜಾತಿ ಮರಗಳು, 6 ಲಕ್ಷಕ್ಕೂ ಅಧಿಕ ಸಸ್ಯಗಳು
Last Updated 13 ನವೆಂಬರ್ 2022, 12:28 IST
ಅಕ್ಷರ ಗಾತ್ರ

ಬೆಂಗಳೂರು: ತಣ್ಣನೆಯ ವಾತಾವರಣದಲ್ಲಿ ಜಗಮಗಿಸುವ ದೀಪಗಳು, ತಲೆ ಎತ್ತಿದರೆ ಬಿದಿರ ಹಂದರ, ಅದಕ್ಕೆ ಜೋತು ಬಿದ್ದಿರುವ ದೊಡ್ಡ ಗಂಟೆಯಾಕಾರದ ಕಲಾಕೃತಿಗಳು, ಅವುಗಳಿಗೆ ಹೊದಿಕೆಯಾಗಿರುವ ಗಿಡ–ಬಳ್ಳಿಗಳು, ಅಲ್ಲಲ್ಲಿ ಕಿರು ಜಲಪಾತಗಳು, ಕಾರಂಜಿಗಳು...

ಇದು ಯಾವುದೋ ಉದ್ಯಾನವಲ್ಲ, ಶುಕ್ರವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಅವರು ಉದ್ಘಾಟನೆ ಮಾಡಿರುವ, ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್. ಪರಿಸರ, ಸುಸ್ಥಿರ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಶಯಗಳನ್ನು ಹೊಸೆದು ನಿರ್ಮಿಸಿರುವ ಟರ್ಮಿನಲ್ ಪ್ರವಾಸಿ ತಾಣದಂತೆ ಭಾಸವಾಗುತ್ತಿದೆ.

ಸದ್ಯ ಇರುವ ಟರ್ಮಿನಲ್ –1ರ ಎಡಭಾಗಕ್ಕೆ ಐಷಾರಾಮಿ ರೆಸ್ಟಾರಂಟ್‌ವೊಂದರಂತೆ ಕಾಣಿಸುವ ಟರ್ಮಿನಲ್ –2 ಪ್ರವೇಶಿಸಿದ ಕೂಡಲೇ ಅಲ್ಲೊಂದು ಕಿನ್ನರಲೋಕ ತೆರೆದುಕೊಳ್ಳುತ್ತದೆ. ಎಲ್ಲವೂ ಸೆನ್ಸಾರ್ ಮಯವಾದ ಮಾಯಾಲೋಕವನ್ನೇ ಹೊಕ್ಕಿದ ಅನುಭವವಾಗುತ್ತದೆ. ಜಗಮಗಿಸುವ ದೀಪಗಳ ಮಧ್ಯೆ ತಾರಸಿಯಿಂದ ಇಳಿಬಿದ್ದಿರುವ ಕಿರು ಉದ್ಯಾನಗಳು ಪ್ರಯಾಣಿಕರನ್ನು ಕ್ಷಣಕಾಲ ಅಚ್ಚರಿಗೆ ತಳ್ಳುತ್ತವೆ.

ಕಟ್ಟಡಗಳ ಸುತ್ತ ಉದ್ಯಾನಗಳನ್ನು ನಿರ್ಮಿಸುವುದು ಹೊಸದಲ್ಲ. ಕಟ್ಟಡದೊಳಗೆ ತೂಗು ಉದ್ಯಾನಗಳನ್ನು ನಿರ್ಮಿಸಿರುವುದು ಇಲ್ಲಿನ ವಿಶೇಷ. ಅಳಿವಿನಂಚಿನಲ್ಲಿರುವ 180 ಜಾತಿಯ ಗಿಡಗಳು, 800 ವರ್ಷಗಳಷ್ಟು ಹಳೆಯದಾದ ಮರಗಳು ಸೇರಿ 6 ಲಕ್ಷಕ್ಕೂ ಹೆಚ್ಚು ಸಸ್ಯಗಳು ಈ ವಿಮಾನ ನಿಲ್ದಾಣದ ಆವರಣದಲ್ಲಿವೆ. ಪ್ರತಿ ಗೋಡೆಗಳಲ್ಲೂ ಗಿಡಗಳಿದ್ದು, ಹಸಿರು ಹೊದ್ದಿವೆ.

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ: ಟರ್ಮಿನಲ್‌–2 ಎಂಬ ‘ಕಿನ್ನರಲೋಕ’

ಪ್ರವೇಶ ದ್ವಾರದ ಎದುರಿನಲ್ಲೇ ನಾಡಿನ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳನ್ನು ಜೋಡಿಸಲಾಗಿದೆ. ಮರ ಮತ್ತು ಚರ್ಮದ ತೊಗಲು ಗೊಂಬೆಗಳು ನಾಡಿನ ಪರಂಪರೆ ಸಾರುತ್ತಿವೆ. ಇನ್ನು ತಂತ್ರಜ್ಞಾನದ ಬಳಕೆ ಕೂಡ ಅಷ್ಟೇ ಆಧುನಿಕವಾಗಿದೆ. ಪ್ರವೇಶ ದ್ವಾರದಿಂದ ವಿಮಾನ ಹತ್ತುವ ತನಕ ಪ್ರತಿ ಹಂತದಲ್ಲೂ ಪ್ರಯಾಣಿಕರಿಗೆ ತಂತ್ರಜ್ಞಾನದ ಸ್ಪರ್ಶವಾಗುತ್ತದೆ.

ಫೇಸ್ ಬಯೊಮೆಟ್ರಿಕ್, ಬಾಡಿ ಸ್ಕ್ಯಾನಿಂಗ್, ಭದ್ರತಾ ತಪಾಸಣೆ, ಬ್ಯಾಗ್ ಟ್ರ್ಯಾಕಿಂಗ್, ತೂಗು ಉದ್ಯಾನಗಳಿಗೆ ನೀರುಣಿಸಲು ಸ್ವಯಂ ಚಾಲಿತ ಸೆನ್ಸಾರ್ ವ್ಯವಸ್ಥೆ ಸೇರಿ ಎಲ್ಲದಕ್ಕೂ ತಂತ್ರಜ್ಞಾನದ ಲೇಪನವಿದೆ. ಇಡೀ ಟರ್ಮಿನಲ್ ಪ್ರಯಾಣಿಕರಲ್ಲಿ ಹೊಸ ಚೈತನ್ಯವನ್ನು ತುಂಬುವುದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಬಿಐಎಎಲ್) ಅಧಿಕಾರಿಗಳು.

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ: ಟರ್ಮಿನಲ್‌–2 ಎಂಬ ‘ಕಿನ್ನರಲೋಕ’

ಡಿಸೆಂಬರ್‌ನಲ್ಲಿ ಕಾರ್ಯಾರಂಭ
ಈ ಎಲ್ಲಾ ವಿಶೇಷಗಳನ್ನು ಒಳಗೊಂಡಿರುವ ಟರ್ಮಿನಲ್‌–2 ಸಾರ್ವಜನಿಕರ ಸೇವೆಗೆ ಡಿಸೆಂಬರ್‌ನಲ್ಲಿ ಮುಕ್ತವಾಗಲಿದೆ.

ಆರಂಭದಲ್ಲಿ ದೇಶಿಯ ವಿಮಾನಗಳ ಹಾರಾಟಕ್ಕೆಷ್ಟೇ ಅವಕಾಶ ದೊರಕಲಿದೆ. ಜನವರಿಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಬಿಐಎಎಲ್) ನಿರ್ಧರಿಸಿದೆ.

ದೇಶದಲ್ಲೇ 2ನೇ ಅತೀ ಹೆಚ್ಚು ಪ್ರಯಾಣಿಕ ದಟ್ಟಣೆ ಹೊಂದಿರುವ ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪೂರ್ವದಲ್ಲಿ ವಾರ್ಷಿಕ 3.3 ಕೋಟಿ ಪ್ರಯಾಣಿಕರ ಸಂಚಾರ ಇತ್ತು. ದೇಶದ 76 ನಗರ ಮತ್ತು ವಿದೇಶಗಳ 25 ನಗರಗಳಿಗೆ ವಿಮಾನ ಸೇವೆ ಲಭ್ಯವಿದೆ ಎಂದು ಬಿಐಎಎಲ್ ಅಧಿಕಾರಿಗಳು ಹೇಳುತ್ತಾರೆ.

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ: ಟರ್ಮಿನಲ್‌–2 ಎಂಬ ‘ಕಿನ್ನರಲೋಕ’

ಏನೆಲ್ಲಾ ವಿಶೇಷ
* ₹13 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್–2
* 2.55 ಲಕ್ಷ ಚದರ ಮೀಟರ್‌ನಲ್ಲಿ ಟರ್ಮಿನಲ್
* ವರ್ಷಕ್ಕೆ 2.50 ಕೋಟಿ ಜನ ಪ್ರಯಾಣಿಸಲು ಸೌಕರ್ಯ
* ಹೊರಗಿನ ವಾತಾವರಣಕ್ಕಿಂತ 2ರಿಂದ 3 ಡಿಗ್ರಿ ಕಡಿಮೆ ತಾಪಮಾನ
* ನಿಲ್ದಾಣಕ್ಕೆ ಶೇ 24.9ರಷ್ಟು ಸೌರವಿದ್ಯುತ್ ಬಳಕೆ
* 41.30 ಕೋಟಿ ಲೀಟರ್ ಮಳೆ ನೀರು ಸಂಗ್ರಹ ಸಾಮರ್ಥ್ಯ
*923 ಕಿಲೋ ಮೀಟರ್‌ ಉದ್ದದಷ್ಟು ವಿನ್ಯಾಸಗೊಳಿಸಿದ ಬಿದಿರು ಬಳಸಿ ಹಂದರ ನಿರ್ಮಾಣ
* 3,600ಕ್ಕೂ ಹೆಚ್ಚಿನ ಪ್ರಭೇದಗಳ ಸಸ್ಯಗಳಿರುವ ಉದ್ಯಾನ
* 1,200 ಕಾರುಗಳ ನಿಲುಗಡೆಗೆ ಸೌಲಭ್ಯ
* ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಬಸ್ ಪಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT