ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬದಲಾವಣೆಯತ್ತ ಮಹಿಳೆಯರು ದಾಪುಗಾಲಿಡಲಿ: ಸಿಎಂ ಬಸವರಾಜ ಬೊಮ್ಮಾಯಿ

Last Updated 8 ಮಾರ್ಚ್ 2022, 11:28 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್ಥಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ. ಈ ದಿಸೆಯಲ್ಲಿ ರಾಜ್ಯದ ತಾಯಂದಿರು ಹೆಜ್ಜೆ ಇಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಮಹಿಳೆ ಮತ್ತು ಮಕ್ಕಳ ದಿನ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.

‘ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಆಗ ದೇಶವು ಪ್ರಗತಿ ಕಾಣಲು ಸಾಧ್ಯ. ಮಹಿಳಾ ಶಕ್ತಿಯ ವಿನಿಯೋಗವಾಗದಿದ್ದರೆ ದೇಶ ಅಭಿವೃದ್ಧಿ ಹೊಂದುವುದಿಲ್ಲ. ದೇಶ ಕಟ್ಟುವ ಕಾಯಕದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಅವರು ಕರೆನೀಡಿದರು.

‘ಮಹಿಳೆಯರು ಪ್ರಾಮಾಣಿಕತೆ, ಉಳಿತಾಯ ಹಾಗೂ ಕಠಿಣ ಪರಿಶ್ರಮದ ಪ್ರತಿರೂಪವಿದ್ದಂತೆ. ಈ ಮೂರು ಅಂಶಗಳ ಆಧಾರದ ಮೇಲೆ ಅವರ ಆರ್ಥಿಕತೆ ಉತ್ತಮಪಡಿಸಬೇಕು. ಈ ಬಾರಿಯ ಬಜೆಟ್‌ನಲ್ಲಿ ಆ ಪ್ರಯತ್ನ ಮಾಡಿದ್ದೇವೆ’ ಎಂದರು.

‘ಸರ್ಕಾರ ಮತ್ತು ಸಮಾಜ ಒಟ್ಟಾಗಿ ದುಡಿದಾಗ ರಾಜ್ಯ ಸುಭೀಕ್ಷವಾಗುತ್ತದೆ. ದುಡ್ಡೇ ದೊಡ್ಡಪ್ಪ ಎಂಬ ಕಾಲ ಮರೆಯಾಗಿದೆ. ದುಡಿಮೆಯೇ ದೊಡ್ಡಪ್ಪ ಎಂಬ ಮಾತು ಈಗ ಚಾಲ್ತಿಯಲ್ಲಿದೆ. ಗ್ರಾಮೀಣ ಭಾಗದ ತಾಯಂದಿರ ದುಡಿಮೆ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಅವರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಸಾಗಿಸಬೇಕು. ಹಾಗಾದಾಗ ಅವರ ಬೆವರ ಹನಿಗೆ ಗೌರವ ದಕ್ಕುತ್ತದೆ. ಹೀಗಾಗಿ ಮಹಿಳೆಯರು ಮತ್ತು ಮಕ್ಕಳ ಚಟುವಟಿಕೆಗಿರುವ ವಿವಿಧ ಇಲಾಖೆಗಳಿಗೆ ಸುಮಾರು ₹43,118 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಎಲ್ಲಾ ಸ್ವಸಹಾಯ ಸಂಘಗಳು ಕಿರು ಉದ್ಯೋಗದ ನೆಲೆಗಳಾಗಬೇಕು. ಇದಕ್ಕಾಗಿ ₹500 ಕೋಟಿ ಮೀಸಲಿಡಲಾಗಿದ್ದು, ಪ್ರತಿ ಸ್ವಸಹಾಯ ಸಂಘಕ್ಕೆ ₹1.5 ಲಕ್ಷ ನೆರವು ನೀಡಲು ನಿರ್ಧರಿಸಿದ್ದೇವೆ. ಅವರು ತಯಾರಿಸಿದ ಪದಾರ್ಥಗಳನ್ನು ಸಂಸ್ಕರಿಸುವ, ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಮೇಳಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ನಮ್ಮ ಮಹಿಳೆಯರು ತಯಾರಿಸಿದ ಪದಾರ್ಥಗಳು ಅಂತರರಾಷ್ಟ್ರೀಯ ಮಾರುಕಟ್ಟೆಗೂ ಲಭಿಸುವಂತಾಗಬೇಕು. ಹೀಗಾಗಿ ಅಮೆಜಾನ್‌, ಫ್ಲಿಪ್‌ಪಾರ್ಟ್‌ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ತಾಯಂದಿರು ಮತ್ತು ಮಕ್ಕಳ ಆರೋಗ್ಯ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನೂ ರೂಪಿಸಿದ್ದೇವೆ. ಗುಡಿ ಕೈಗಾರಿಕೆಯಿಂದ ನವೋದ್ಯಮ ತೆರೆಯುವವರೆಗೂ ಮಹಿಳೆಯರಿಗೆ ಎಲ್ಲಾ ಬಗೆಯ ಪ್ರೋತ್ಸಾಹ ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೂ ಬೆಂಬಲ ನೀಡಲು ಹಲವು ಯೋಜನೆಗಳನ್ನು ಕೈಗೊಂಡಿದ್ದೇವೆ’ ಎಂದು ವಿವರಿಸಿದರು.

‘ಸದೃಢ ಸಮಾಜ ನಿರ್ಮಾಣಕ್ಕೆ ತಾಯಿ ಮತ್ತು ಮಗುವಿನ ಆರೋಗ್ಯ ತುಂಬಾ ಮುಖ್ಯ. ಹೀಗಾಗಿ ಅಪೌಷ್ಟಿಕತೆ ನಿವಾರಣೆಗೆ ಒತ್ತು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮಹಿಳೆಯರಿಂದ ದೊಡ್ಡ ಆರ್ಥಿಕ ಕ್ರಾಂತಿ ನಡೆಯಬೇಕು. ಸರ್ಕಾರ ಅದರ ನಿರೀಕ್ಷೆಯಲ್ಲಿದೆ. ಇಂದಿರಾಗಾಂಧಿ, ನಿರ್ಮಲಾ ಸೀತಾರಾಮನ್‌, ಕಿತ್ತೂರು ರಾಣಿ ಚನ್ನಮ್ಮ, ಓನಕೆ ಓಬವ್ವ ಹೀಗೆ ಹಲವು ಸಾಧಕಿಯರನ್ನು ಆದರ್ಶವಾಗಿಟ್ಟುಕೊಂಡು ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಬರಬೇಕು’ ಎಂದರು.

‘ತಾಯಿಯಿಂದಲೇ ಸಂಸ್ಕಾರ, ತಾಯಿಯಿಂದಲೇ ಸಂಸ್ಕೃತಿ. ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಿದೆ. ಜಾತೀಕರಣ, ಉದಾರೀಕರಣ, ಖಾಸಗೀಕರಣದ ನಡುವೆ ಅಂತಃಕರಣ ಮರೆಯಾಗಿದೆ. ಅಂತಃಕರಣವುಳ್ಳ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಶ್ರಮಿಸಬೇಕು. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರ ಸೇವೆ ಅಮೋಘವಾದುದು. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಅವರ ಗೌರವಧನ ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಮತ್ತಷ್ಟು ಶಕ್ತಿ ತುಂಬಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT