ಬುಧವಾರ, ಜನವರಿ 27, 2021
18 °C
ವಿಎಫ್‌ಎಸ್‌ಎಸ್‌ಎಲ್‌ ಕಂಪನಿ ವಿರುದ್ಧ ಎಫ್‌ಐಆರ್

ಹೂಡಿಕೆ ಹೆಸರಿನಲ್ಲಿ ₹ 250 ಕೋಟಿ ವಂಚನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂಡಿಕೆ ವಂಚನೆ–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪದಡಿ ವಿಶ್ವಪ್ರಿಯಾ ಫೈನಾನ್ಶಿಯಲ್ ಸರ್ವೀಸ್ ಸೆಕ್ಯುರಿಟಿಸ್ (ವಿಎಫ್‌ಎಸ್‌ಎಸ್‌ಎಲ್) ಕಂಪನಿ ವಿರುದ್ಧ ನಗರದ ಸಿದ್ದಾಪುರ ಹಾಗೂ ಗಿರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು ಎನ್ನಲಾದ ಇಂದಿರಾ ಮುರುಳಿ, ರೇಖಾ ನಾರಾಯಣ, ಎಂ. ಶಾಂತಿ, ಪದ್ಮಿನಿ ಬಲರಾಮ್ ಎಂಬುವರು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ತಾವು ಹಾಗೂ ಇತರರು, ಕಂಪನಿಯಲ್ಲಿ ₹ 250 ಕೋಟಿಯಷ್ಟು ಹಣ ಹೂಡಿಕೆ ಮಾಡಿ
ರುವುದಾಗಿ ಹೇಳುತ್ತಿದ್ದಾರೆ. ತಮಗೆಲ್ಲ ವಂಚನೆಯಾಗಿರುವುದಾಗಿ ಆರೋಪಿಸುತ್ತಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಕಂಪನಿ ವ್ಯವಸ್ಥಾಪಕ ನಿರ್ದೇಶಕ ಆರ್. ಸುಬ್ರಹ್ಮಣ್ಯನ್, ಆರ್. ನಾರಾಯಣ, ರಾಜ್ ರತ್ನಮ್, ಟಿ.ಎಸ್. ರಾಘವನ್, ಶ್ರೀಮತಿ, ಪಿ. ಸದಾನಂದ್ ಹಾಗೂ ರಾಜೇಂದ್ರಕುಮಾರ್ ಅವರನ್ನು ಪ್ರಕರಣದ ಆರೋಪಿಗಳಾಗಿ ಮಾಡಲಾಗಿದೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ವಂಚನೆಯಾದ ಒಟ್ಟು ಹಣವೆಷ್ಟು ಎಂಬುದನ್ನು ಪತ್ತೆ ಮಾಡಬೇಕು’ ಎಂದೂ ತಿಳಿಸಿದರು.

‘ಕಂಪನಿಯ ಮುಖ್ಯ ಕಚೇರಿ ಚೆನ್ನೈನಲ್ಲಿದೆ. ಬೆಂಗಳೂರಿನ ಜಯನಗರ ಹಾಗೂ ಎಂ.ಜಿ.ರಸ್ತೆಯಲ್ಲಿ 2016ರಿಂದ ಎರಡು ಶಾಖಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಉಳಿತಾಯ ಖಾತೆ ತೆರೆದು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ ನೀಡುವುದಾಗಿ ಕಂಪನಿ ಹೇಳುತ್ತಿತ್ತು. ಅದನ್ನು ನಂಬಿ, ಸಾವಿರಾರು ಮಂದಿ ಹಣ ಹೂಡಿಕೆ ಮಾಡಿರುವ ಮಾಹಿತಿ ಇದೆ.’

‘ಕಂಪನಿ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ವಂಚನೆಗೀಡಾವರು, ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ದೂರು ನೀಡಬಹುದು’ ಎಂದು ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು