ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಗೆ ನೋಟಿಸ್‌: ಮಾಧ್ಯಮಗಳಿಗೆ ನಿರ್ಬಂಧ

Last Updated 23 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿರುವ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ ರೂಪಾ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆಕ್ಷೇಪಾರ್ಹ ಹಾಗೂ ಮಾನಹಾನಿ ಹೇಳಿಕೆ ನೀಡದಂತೆ ಡಿ.ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ಅವರಿಗೆ ತಾಕೀತು ಮಾಡಿದೆ.

ಈ ಕುರಿತಂತೆ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅಸಲು ದಾವೆಯನ್ನು ನಗರದ 74ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಗಂಗಣ್ಣವರ ಬುಧವಾರವಷ್ಟೇ (ಫೆ.22) ವಿಚಾರಣೆ ನಡೆಸಿ, ಮಧ್ಯಂತರ ಆದೇಶವನ್ನು ಗುರುವಾರಕ್ಕೆ (ಫೆ.23) ಕಾಯ್ದಿರಿಸಿದ್ದರು. ಗುರುವಾರ ಆದೇಶ ಪ್ರಕಟಿಸಲಾಗಿದ್ದು, ರೂಪಾ ಸೇರಿದಂತೆ ಪ್ರತಿವಾದಿಗಳಾದ ಮಾಧ್ಯಮ ಸಂಸ್ಥೆಗಳಿಗೂ ಪ್ರತಿಬಂಧಕ ಆದೇಶ ಹೊರಡಿಸಲಾಗಿದೆ. ರೋಹಿಣಿ ಅವರ ವಿರುದ್ಧ ಯಾವುದೇ ಮಾನಹಾನಿಯಾಗುವಂತಹ ಸುದ್ದಿ ಪ್ರಸಾರ ಮಾಡದಂತೆ ಮತ್ತು ಚಿತ್ರ ಅಥವಾ ದೃಶ್ಯಗಳನ್ನು ಬಿತ್ತರಿಸದಂತೆ ಪ್ರತಿಬಂಧಿಸಲಾಗಿದೆ.

ರೋಹಿಣಿ ಸಿಂಧೂರಿ ಪರ ವಕೀಲ ಚನ್ನಬಸಪ್ಪ ಎಸ್‌.ನಂದಿಹಾಳ ಮಂಡಿಸಿದ್ದ ವಾದವನ್ನು, ಪ್ರತಿವಾದಿಗಳ ಗೈರು ಹಾಜರಿಯಲ್ಲಿ ಮಾನ್ಯ ಮಾಡಿರುವ ನ್ಯಾಯಾಧೀಶರು, ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸುವಂತೆ ರೂಪಾ ಅವರಿಗೆ ಸೂಚಿಸಿದ್ದಾರೆ. ವಿಚಾರಣೆಯನ್ನು ಮಾರ್ಚ್‌ 17ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT