ಶನಿವಾರ, ಸೆಪ್ಟೆಂಬರ್ 24, 2022
24 °C
ಸ್ಮಾರ್ಟ್‌ವಾಚ್ ಬಳಸಿ ಅಕ್ರಮ ಎಸಗಿದ ಆರೋಪಿ, ತನಿಖೆಗೆ ಎರಡು ತಂಡ ರಚನೆ

ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ: ಅಭ್ಯರ್ಥಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ಕಳೆದ ಭಾನುವಾರ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್‌ವಾಚ್ ಬಳಸಿ ಅಕ್ರಮ ಎಸಗಿದ ಆರೋಪ‍ದ ಮೇಲೆ ಸಿದ್ಧಪ್ಪ ಮದಿಹಳ್ಳಿ (20) ಎಂಬಾತನನ್ನು ಬುಧವಾರ ಬಂಧಿಸಲಾಗಿದೆ.

ಈ ಬಗ್ಗೆ ಗೋಕಾಕ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ‘ಆರೋಪಿಯು ಮೂಡಲಗಿ ತಾಲ್ಲೂಕಿನ ನಾಗನೂರು ಗ್ರಾಮದವನಾಗಿದ್ದು ಗೋಕಾಕ ನಗರದ ‍ಪರೀಕ್ಷಾ ಕೇಂದ್ರವೊಂದರಲ್ಲಿ ಈತ ಅಕ್ರಮ ಎಸಗಿದ್ದು ಖಾತ್ರಿಯಾಗಿದೆ. ಆಗಸ್ಟ್‌ 7ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲ ಅಭ್ಯರ್ಥಿಗಳು ಮಾಹಿತಿ ನೀಡಿದರು.

ಪರೀಕ್ಷಾ ಕೊಠಡಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಆರೋಪಿ ಕೈಯಲ್ಲಿ ಸ್ಮಾರ್ಟ್‌ವಾಚ್‌ ಇರು ವುದು ಗೊತ್ತಾಗಿದೆ. ಆ ವಾಚ್‌ನಲ್ಲಿರುವ ಮಿನಿ ಕ್ಯಾಮೆರಾ ಬಳಸಿ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಹೊರಗೆ ರವಾನಿಸಿದ ಬಗ್ಗೆಯೂ ಮಾಹಿತಿ ಸಿಕ್ಕಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಶ್ನೆ ಪತ್ರಿಕೆಯ ಫೋಟೊವನ್ನು ಯಾರಿಗೆ ಕಳುಹಿಸಿದ್ದ, ಎಲ್ಲಿಗೆ ಕಳುಹಿಸಿದ್ದ ಮತ್ತು ಅಲ್ಲಿಂದ ಮರಳಿ ಉತ್ತರಗಳನ್ನು ಹೇಗೆ ಪಡೆದುಕೊಂಡಿದ್ದಾನೆ ಎಂಬುದರ ಬಗ್ಗೆ ತಾಂತ್ರಿಕ ಪರಿಣತರಿಂದ ಪರಿಶೀಲನೆ ನಡೆದಿದೆ. ಜತೆಗೆ, ಈ ಅಕ್ರಮದಲ್ಲಿ ಸಿದ್ದಪ್ಪ ಒಬ್ಬನೇ ಇದ್ದಾನೋ ಅಥವಾ ಇತರರೂ ಇದೇ ಮಾರ್ಗ ಅನುಸರಿಸಿದ್ದಾರೋ ಎಂಬ ಬಗ್ಗೆಯೂ ನಿಖರ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಎಸ್ಪಿ ತಿಳಿಸಿದರು.

‘ಡಿವೈಎಸ್‌ಪಿ ನೇತೃತ್ವದಲ್ಲಿ ತಕ್ಷಣ ಎರಡು ತಂಡಗಳನ್ನು ರಚಿಸಲಾಗಿದೆ. ಮೂಲ ಎಲ್ಲಿದೆ ಎಂಬುದನ್ನೂ ಜಾಲಾಡಲಾಗುತ್ತಿದೆ. ಅಕ್ರಮ ಎಸಗಿದ ಯಾರೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು