ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ; ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಪಟ್ಟು

Last Updated 22 ಸೆಪ್ಟೆಂಬರ್ 2020, 20:43 IST
ಅಕ್ಷರ ಗಾತ್ರ

ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಆರೋಪ ‘ರಾಜ್ಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಗೋಲ್‌ಮಾಲ್‌ ನಡೆದಿದ್ದು, ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು‘ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ನಿಯಮ 69ರಡಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ‘ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್‌ ವಲಯಗಳ ಹೆಸರಿನಲ್ಲಿ ಲೂಟಿ ಮಾಡಲಾಗಿದೆ. ಕಂಟೈನ್‌ಮೆಂಟ್‌ ವಲಯಕ್ಕೆ ದಿನಕ್ಕೆ ₹70 ಸಾವಿರ ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಹಗರಣ ಅಲ್ಲವೇ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಹೇಳಿದ್ದೇನು?
*ಎನ್‌–95 ಮಾಸ್ಕ್‌ಗಳನ್ನು ಮಾರ್ಚ್‌ 14ಕ್ಕೆ ₹147ಕ್ಕೆ, ಮಾರ್ಚ್‌ 20ಕ್ಕೆ ₹156ಕ್ಕೆ, ಮಾರ್ಚ್‌ 21ಕ್ಕೆ₹97ಕ್ಕೆ ಖರೀದಿ ಮಾಡಲಾಗಿದೆ. ಸಗಟು ಖರೀದಿ ಮಾಡುವಾಗ ₹50ರಿಂದ ₹60 ದರಕ್ಕೆ ಮಾಸ್ಕ್‌ಗಳು ದೊರಕುತ್ತವೆ. ಲಕ್ಷಾಂತರ ಮಾಸ್ಕ್‌ಗಳನ್ನು ಸರಾಸರಿ ₹150ರ ದರದಲ್ಲಿ ಬಿಜೆಪಿ ಸರ್ಕಾರ ಖರೀದಿ ಮಾಡಿದೆ. ಇದನ್ನು ಅಕ್ರಮ ಅಂತ ಹೇಳುವುದು ತಪ್ಪೇ?

*ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದಕ್ಕೆ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್ ಲೀಗಲ್‌ ನೋಟಿಸ್‌ ನೀಡಿದರು. ಕೋರ್ಟ್‌ಗೆ ಹಾಕಿ ಅಂದೆ. ಮತ್ತೆ ಸುಮ್ಮನಾದರು. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರೆ ಎಲ್ಲ ಸತ್ಯಾಂಶ ಹೊರಬರುತ್ತಿತ್ತು.

*ಪಿಎಂ ಕೇರ್ ಟ್ರಸ್ಟ್‌ನವರು ಪ್ರತಿ ವೆಂಟಿಲೇಟರ್‌ ಅನ್ನು ₹4 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ತಮಿಳುನಾಡು ಸರ್ಕಾರ ₹4.8 ಲಕ್ಷಕ್ಕೆ ಖರೀದಿಸಿದೆ. ಕರ್ನಾಟಕ ಸರ್ಕಾರ ವೆಂಟಿಲೇಟರ್‌ಗೆ ₹10 ಲಕ್ಷದಿಂದ ₹18.20 ಲಕ್ಷದ ವರೆಗೆ ನೀಡಿದೆ. ಇದು ಅವ್ಯವಹಾರ ಅಲ್ಲವೇ?

ಜನರ ಹೆಣದ ಮೇಲೆ ಹಣದ ರಾಜಕಾರಣ: ಡಿಕೆಶಿ‌ ಆಕ್ರೋಶ
‘ಜನರ ಹೆಣದ ಮೇಲೆ ರಾಜ್ಯ ಸರ್ಕಾರ ಹಣದ ರಾಜಕಾರಣ ಮಾಡುತ್ತಿದೆ’ ಎಂದು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

‘ಬಿಜೆಪಿಯ ಅರವಿಂದ ಲಿಂಬಾವಳಿ, ಬೈರತಿ ಬಸವರಾಜ್‌ ಮತ್ತಿತರರು ವಿವಿಧ ಇಲಾಖೆಗಳು, ಅಕ್ಷಯ ಪಾತ್ರೆ, ಇನ್ಫೊಸಿಸ್ ಸಂಸ್ಥೆಯವರು ಕೊಟ್ಟ ಆಹಾರ ಕಿಟ್‌ಗಳ ಮೇಲೆ ತಮ್ಮ ಫೋಟೋ ಹಾಕಿಕೊಂಡು ಜನರಿಗೆ ಹಂಚಿದ್ದರು. ಆನೇಕಲ್‌ನಲ್ಲಿ ಬಾಣಂತಿಯರು, ಮಕ್ಕಳ ಪೌಷ್ಟಿಕ ಆಹಾರ ಕಿಟ್ ಮೇಲೆ ಬಿಜೆಪಿ ಚಿಹ್ನೆ ಹಾಕಿ ಅಕ್ರಮ ನಡೆಸಲಾಗಿತ್ತು. ಆದರೆ, ಅವರ ಮೇಲೆ ಈವರೆಗೆ ಎಫ್‌ಐಆರ್ ಹಾಕಿಲ್ಲ. ಇದು ಒಂದು ಸರ್ಕಾರನಾ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಯಡಿಯೂರಪ್ಪನವರು ₹1,610 ಕೋಟಿ ಪ್ಯಾಕೇಜ್ ಘೋಷಿಸಿದರು. ಇವತ್ತಿನವರೆಗೂ ಶೇ 10ರಿಂದ ಶೇ 20 ರಷ್ಟು ಜನರಿಗೆ ಈ ಪರಿಹಾರ ಹಣ ತಲುಪಿಲ್ಲ’ ಎಂದರು.

’ಕಾಂಗ್ರೆಸ್ ಸರ್ಕಾರದ ಅಕ್ರಮ ಬಿಚ್ಚಿಡುತ್ತೇನೆ ಎಂದು ಸಚಿವ ಡಾ.ಸುಧಾಕರ್‌ ಸವಾಲು ಹಾಕಿದ್ದಾರೆ. ಅವರು ಕೇವಲ ಬಿಚ್ಚಿಡುವುದಲ್ಲ, ಹರಿದು ಹಾಕಲಿ. ನಾವು ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದ್ದರೆ ತನಿಖೆ ನಡೆಸಿಲಿ. ಶಿಕ್ಷೆ ಅನುಭವಿಸಲು ಸಿದ್ಧ‘ ಎಂದು ಸವಾಲು ಎಸೆದರು.

ಹಾಸನಕ್ಕೆ ಒಂದೇ ಒಂದು ಕಿಟ್‌ ಕೊಟ್ಟಿಲ್ಲ
ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಹಾಸನ ಜಿಲ್ಲೆಗೆ ಒಂದೇ ಒಂದು ಕಿಟ್‌ ಕೊಟ್ಟಿಲ್ಲ. ನಮ್ಮ ಜಿಲ್ಲೆ ಏನು ಮಾಡಿದೆ ಎಂದು ಜೆಡಿಎಸ್‌ನ ಹಿರಿಯ ಶಾಸಕ ಎಚ್‌.ಡಿ.ರೇವಣ್ಣ ಕಿಡಿಕಾರಿದರು.

ಅಷ್ಟೇ ಅಲ್ಲ ಜಿಲ್ಲಾಧಿಕಾರಿಗಳಾಗಲಿ, ಇತರ ಅಧಿಕಾರಿಗಳಾಗಲಿ ರೈತರ ಮನೆ ಬಾಗಿಲ ಬಳಿ ಹೋಗಿ ಹೇಗಿದ್ದೀರಿ ಎಂದು ಕೇಳಲಿಲ್ಲ. ಇವರು ಹೆಂಡ್ತಿ ಮಕ್ಕಳನ್ನು ಬಿಟ್ಟು ಹೊರಗೆ ಎಲ್ಲೂ ಹೋಗಲಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌ನ ಬಾಲಕೃಷ್ಣ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ₹ 8 ಲಕ್ಷದಿಂದ ₹10 ಲಕ್ಷ ಬಿಲ್‌ ಮಾಡುತ್ತಾ ಇದ್ದಾರೆ. ಖಾಸಗಿ ಆಸ್ಪತ್ರೆಗಳ ಮೇಲೆ ಲಗಾಮು ಇಲ್ಲವಾಗಿದೆ ಎಂದರು.

*
ರೋಗಿಗಳಿಗೆ ಆಕ್ಸಿಜನ್‌ ಪೂರೈಕೆಯಲ್ಲಿ ಕೆಲವು ದಿನಗಳಿಂದ ವ್ಯತ್ಯಯ ಆಗಿದೆ. ಆಕ್ಸಿಜನ್‌ ಕೊರತೆ ಕಾರಣದಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ.
-ಎಚ್‌.ಕೆ.ಪಾಟೀಲ, ಕಾಂಗ್ರೆಸ್‌ ಶಾಸಕ

*
ಮಂತ್ರಿಗಳ ಅತಿಯಾದ ವಿಶ್ವಾಸ ಮತ್ತು ನಿರ್ಲಕ್ಷ್ಯದಿಂದ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರ ಸೋತಿದೆ
-ಆರ್‌.ವಿ.ದೇಶಪಾಂಡೆ, ಕಾಂಗ್ರೆಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT