ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆಯ ಶೇ 1ರಷ್ಟು ತೆರಿಗೆ ಪಾವತಿಸಬೇಕು ಫಲಾನುಭವಿಗಳು: ಕಾರಜೋಳ

Last Updated 14 ಆಗಸ್ಟ್ 2021, 11:53 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದ ನೀರಾವರಿ ಯೋಜನೆಗಳ ಪ್ರಯೋಜನ ಪಡೆಯುವ ಬಳಕೆದಾರರು ಸರ್ಕಾರ ಖರ್ಚು ಮಾಡಿದ ಹಣದ ಶೇ 1ರಷ್ಟಾದರೂ ತೆರಿಗೆ ಕಟ್ಟಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಭದ್ರಾ ಜಲಾಶಯಕ್ಕೆ ಶನಿವಾರ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.

ನೀರಾವರಿಗೆ ಸರ್ಕಾರ ಭಾರಿ ಮೊತ್ತದ ಹಣ ಖರ್ಚು ಮಾಡುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ವಿವಿಧ ನೀರಾವರಿ ಯೋಜನೆಗಳಿಗೆ ₹ 4,900 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆಗಳ ಪ್ರಯೋಜನ ಪಡೆಯುವ ಫಲಾನುಭವಿಗಳು ಶೇ 1ರಷ್ಟು ತೆರಿಗೆಯನ್ನೂ ಪಾವತಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.ನೀರಾವರಿ ಯೋಜನೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಸರ್ಕಾರ ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಭವಿಷ್ಯದಲ್ಲಿ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಪ್ರವಾಹಕ್ಕೆ ಒತ್ತುವರಿಯೇ ಕಾರಣ

‘ನದಿ, ಹಳ್ಳ, ಕೊಳ್ಳಗಳ ತೀರಗಳನ್ನು ಜನರು ಒತ್ತುವರಿ ಮಾಡಿದ ಪರಿಣಾಮ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದೇವೆ. 146 ಮೀಟರ್ ಇದ್ದ ಮಲಪ್ರಭ ನದಿ 46 ಮೀಟರ್ ಕಿರಿದಾಗಿದೆ. ಬಹುತೇಕ ಜಲಪಥಗಳ ಹಾದಿ ಹೀಗೆಯೇ ಇದೆ. ಇದರಿಂದ ನೆರೆ ಸಂಕಷ್ಟ ಎದುರಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘69 ವರ್ಷಗಳ ಇತಿಹಾಸದಲ್ಲಿ ಭದ್ರಾ ಜಲಾಶಯ 23 ಬಾರಿ ತುಂಬಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರಥಮ ಬಾಗಿನ ಅರ್ಪಿಸಿರುವೆ. ಕೆಆರ್‌ಎಸ್‌ ಮಾದರಿಯಲ್ಲಿ ಅಣೆಕಟ್ಟು ಪ್ರದೇಶ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT